ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಎಎಪಿ ಪ್ರಚಾರಕ್ಕೆ ಗರ; ಸದ್ದು ಮಾಡದ ಮಾತಿನ ಮಲ್ಲರು

ಬಂಧನಗಳ ಟೀಕೆಯಲ್ಲೇ ಮಾತಿನ ಅಬ್ಬರ
Published 22 ಏಪ್ರಿಲ್ 2024, 23:14 IST
Last Updated 22 ಏಪ್ರಿಲ್ 2024, 23:14 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಗೆ ಮೊತ್ತಮೊದಲು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದ ಪಕ್ಷ ‘ಆಮ್ ಆದ್ಮಿ ಪಕ್ಷ’ (ಎಎಪಿ) ಎಂದರೆ ತಪ್ಪಾಗಲಾರದು. ಉಳಿದ ಪಕ್ಷಗಳು ಸೀಟು ಹಂಚಿಕೆ ಹಾಗೂ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ತಿಣುಕಾಡುತ್ತಿರುವಾಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್ ಅವರು ಗುಜರಾತ್‌ ಹಾಗೂ ಗೋವಾ ರಾಜ್ಯಗಳಲ್ಲಿ ಒಂದು ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದರು. ಕೇಜ್ರಿವಾಲ್‌ ಬಂಧನದ ಬಳಿಕ ಪಕ್ಷದ ಚುನಾವಣಾ ಪ್ರಚಾರಕ್ಕೆ ಗರ ಬಡಿದಂತಾಗಿದೆ. 

ಕೇಜ್ರಿವಾಲ್‌ ಬಂಧನದ ಬಳಿಕ ಪಕ್ಷದ ಕಾರ್ಯ ತಂತ್ರ, ಪ್ರತಿಭಟನೆ, ‘ಇಂಡಿಯಾ’ ಮೈತ್ರಿಕೂಟದ ಜತೆ ಸಂವಹನ ನಡೆಸುವ ಕಾರ್ಯಗಳ ಜವಾಬ್ದಾರಿ ಎರಡನೇ ಸಾಲಿನ ನಾಯಕರ ಮೇಲೆ ಬಿದ್ದಿದೆ. ಮಾನ್‌, ಜೈಲಿನಿಂದ ಈಚೆಗಷ್ಟೇ ಬಿಡುಗಡೆಗೊಂಡಿರುವ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌, ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್, ಪಕ್ಷದ ದೆಹಲಿ ಘಟಕದ ಸಂಚಾಲಕ ಗೋಪಾಲ್‌ ರಾಯ್ ಹಾಗೂ ಕೇಜ್ರಿವಾಲ್‌ ಪತ್ನಿ ಸುನಿತಾ ಅವರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಸುನಿತಾ ಅವರು ಇಂಡಿಯಾ ಮೈತ್ರಿಕೂಟದ ದೆಹಲಿ ಹಾಗೂ ರಾಂಚಿ ರ‍್ಯಾಲಿಗಳಲ್ಲಿ ಭಾಗಿಯಾಗಿದ್ದಾರೆ. ಮಾನ್ ಅವರು ಪಂಜಾಬ್‌ ಪ್ರಚಾರಕ್ಕೆ ಸೀಮಿತರಾಗಿದ್ದಾರೆ. ‘ವಾಚಾಳಿ’ಗಳೆಂದೇ ಪ್ರಖ್ಯಾತರಾದ ಅತಿಶಿ ಹಾಗೂ ಸೌರಭ್ ಅವರು ಚುನಾವಣಾ ಪ್ರಚಾರಕ್ಕಿಂತ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಸಂಜ‌ಯ್ ಸಿಂಗ್‌ ಅವರೇ ಈಗ ಪಕ್ಷದ ತಾರಾ ಪ್ರಚಾರಕರು. 

ಪಕ್ಷ 10 ರಾಜ್ಯಸಭಾ ಸದಸ್ಯರನ್ನು ಹೊಂದಿದೆ. ಮೂವರು ದೆಹಲಿಯಿಂದ ಹಾಗೂ ಏಳು ಮಂದಿ ಪಂಜಾಬ್‌ನಿಂದ ಆಯ್ಕೆಯಾಗಿದ್ದಾರೆ. ಅವರಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರೂ ಒಬ್ಬರು. ಸಿಂಗ್ ಅವರು ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಅವರ ಸಾಮಾಜಿಕ ಜಾಲತಾಣಗಳಲ್ಲಿ ಐಪಿಎಲ್‌ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಕುರಿತ ಪೋಸ್ಟ್‌ಗಳನ್ನು ಕಾಣಬಹುದು.

ರಾಜ್ಯಸಭಾ ಸದಸ್ಯರಲ್ಲಿ ಸದ್ಯ ಹೆಚ್ಚು ಸಕ್ರಿಯರಾಗಿರುವವರು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಸಂದೀಪ್‌ ಪಾಠಕ್‌ ಒಬ್ಬರೇ. ಅವರು ಪಕ್ಷದ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕೇಜ್ರಿವಾಲ್‌ ಬಂಧನದ ಬಳಿಕ ಹಲವು ಸದಸ್ಯರು ಸುನಿತಾ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಆ ಬಳಿಕ ಮೌನಕ್ಕೆ ಶರಣಾಗಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಹಿರಿಯ ನಾಯಕರ ಈ ಧೋರಣೆಗೆ ಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿದೆ. 

ಮಹಾರಥಿಗಳು ಜೈಲಿನಲ್ಲಿ 

* ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾರ್ಚ್‌ 21ರಂದು ಬಂಧನ. ಈಗ ಜೈಲಿನಲ್ಲಿ 

* ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಸಚಿವರಾಗಿದ್ದ ಸತ್ಯೇಂದ್ರ ಜೈನ್‌ 2022ರ ಮೇ ತಿಂಗಳಲ್ಲಿ ಬಂಧನ. ಅನಾರೋಗ್ಯದ ಕಾರಣಕ್ಕೆ ಕಳೆದ ವರ್ಷ ಮೇ ತಿಂಗಳಲ್ಲಿ ಮಧ್ಯಂತರ ಜಾಮೀನು. ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಲು ಜೈನ್‌ ಅವರಿಗೆ ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ಸೂಚನೆ. ಜೈನ್‌ ಮತ್ತೆ ಜೈಲಿಗೆ 

* ಅಬಕಾರಿ ನೀತಿ ಹಗರಣದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಷ್‌ ಸಿಸೋಡಿಯಾ ಅವರನ್ನು 2023ರ ಫೆಬ್ರುವರಿ 26ರಂದು ಬಂಧಿಸಲಾಗಿತ್ತು. ಆಗಿನಿಂದ ಅವರು ಜೈಲಿನಲ್ಲಿದ್ದಾರೆ 

ಚುನಾವಣೆ ಹೊತ್ತಲ್ಲಿ ಹೊರ ನಡೆದವರು  

ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ ಹಾಗೂ ಅರವಿಂದ ಕೇಜ್ರಿವಾಲ್ ಬಂಧನದ ಬೆನ್ನಲ್ಲೇ ಮೂವರು ನಾಯಕರು ಪಕ್ಷವನ್ನು ತ್ಯಜಿಸಿದ್ದಾರೆ. 

ದೆಹಲಿ ಸಚಿವ ರಾಜಕುಮಾರ್ ಆನಂದ್ ಅವರು ತಮ್ಮ ಹುದ್ದೆಗೆ ಹಾಗೂ ಎಎಪಿ ಪ್ರಾಥಮಿಕ ಸದಸ್ಯತ್ವಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ‘ಪಕ್ಷವು ಭ್ರಷ್ಟಾಚಾರದಲ್ಲಿ ಮುಳುಗಿದೆ ಹಾಗೂ ದಲಿತರನ್ನು ಕಡೆಗಣಿಸುತ್ತಿದೆ’ ಎಂಬುದು ಅವರ ಆರೋಪ. 

ಎಎಪಿಯ ಪಂಜಾಬ್‌ನ ಏಕೈಕ ಸಂಸದ ಸುಶೀಲ್‌ ಕುಮಾರ್‌ ರಿಂಕು ಅವರು ಪಕ್ಷದ ಶಾಸಕ ಶೀತಲ್ ಅಂಗುರಲ್ ಜತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  ರಿಂಕು ಅವರು ಜಲಂಧರ್‌ ಕ್ಷೇತ್ರದ ಸಂಸದ. ಶೀತಲ್‌ ಅವರು ಜಲಂಧರ್‌ ಪಶ್ಚಿಮ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 

ಛಡ್ಡಾ, ಸ್ವಾತಿ ವಿದೇಶಕ್ಕೆ

ಎಎಪಿಯಲ್ಲಿ ಅತ್ಯಂತ ಸಕ್ರಿಯರಾಗಿರುವ ನಾಯಕರಲ್ಲಿ ರಾಜ್ಯಸಭಾ ಸದಸ್ಯ ರಾಘವ ಛಡ್ಡಾ ಅವರೂ ಒಬ್ಬರು. ಅವರು ಕೇಜ್ರಿವಾಲ್ ಅವರ ಪರಮಾಪ್ತ. ಕಣ್ಣಿನ ಶಸ್ತ್ರ ಚಿಕಿತ್ಸೆ ಕಾರಣಕ್ಕೆ ಅವರು ಕಳೆದ ತಿಂಗಳು ವಿದೇಶಕ್ಕೆ ತೆರಳಿದ್ದಾರೆ. ಹೀಗಾಗಿ, ಚುನಾವಣಾ ಕಣದಲ್ಲಿ ಅವರ ಅನುಪಸ್ಥಿತಿ ಕಾಡುತ್ತಿದೆ. ಆದರೆ, ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಕೇಜ್ರಿವಾಲ್‌ ಬಂಧನ ವಿರೋಧಿಸಿ ಆಗಾಗ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಸದ್ಯ ವಿದೇಶದಲ್ಲಿರುವ ಪಕ್ಷದ ಇನ್ನೊಬ್ಬ ಪ್ರಮುಖ ನಾಯಕಿಯೆಂದರೆ ಸ್ವಾತಿ ಮಲಿವಾಲ್‌. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಸ್ವಾತಿ ಅವರು ಹೋರಾಟಗಾರ್ತಿಯೆಂದು ಗುರುತಿಸಿಕೊಂಡವರು. ಅವರು ಈಗ ಪಕ್ಷದ ರಾಜ್ಯಸಭಾ ಸದಸ್ಯರು. ಸಹೋದರಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ವಿದೇಶಕ್ಕೆ ಹೋಗಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. 

ಪಂಜಾಬ್‌ನಲ್ಲಿ ಸಂದಿಗ್ಧ

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ನೆಲೆ ವಿಸ್ತರಿಸಿಕೊಂಡ ಪಕ್ಷ ಎಎಪಿ. ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸರ್ಕಾರ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂಬುದು ಎಎಪಿಯ ಆರೋಪವಾಗಿತ್ತು. ರಾಜ್ಯದಲ್ಲಿ ಪಕ್ಷದ ಅಭೂತಪೂರ್ವ ಜಯಕ್ಕೆ ಇದು ಒಂದೂ ಕಾರಣ. ಅಬಕಾರಿ ನೀತಿ ಹಗರಣವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ವಾಗ್ದಾಳಿ ನಡೆಸುತ್ತಿವೆ. ಜತೆಗೆ, ಪಂಜಾಬ್‌ನ ಅಬಕಾರಿ ನೀತಿಯ ಬಗ್ಗೆಯೂ ತನಿಖೆ ನಡೆಸಬೇಕೆಂದು ಪಟ್ಟು ಹಿಡಿದಿವೆ. ಇದರಿಂದ, ರಾಜ್ಯದ ಎಎಪಿ ನಾಯಕರು ಸಂದಿಗ್ಧಕ್ಕೆ ಸಿಲುಕಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT