ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಪ್ರದೇಶ: ಜಗನ್–ನಾಯ್ಡು ತೀವ್ರ ಸೆಣಸಾಟ

ಲೋಕಸಭೆ, ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ
Published 13 ಮೇ 2024, 0:10 IST
Last Updated 13 ಮೇ 2024, 2:39 IST
ಅಕ್ಷರ ಗಾತ್ರ

ಅಮರಾವತಿ (ಪಿಟಿಐ): ಆಂಧ್ರಪ್ರದೇಶದಲ್ಲಿ 25 ಲೋಕಸಭಾ ಕ್ಷೇತ್ರಗಳು ಮತ್ತು 175 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಏಕಕಾಲಕ್ಕೆ ಮತದಾನ ನಡೆಯುತ್ತಿದ್ದು, ಅದಕ್ಕಾಗಿ ವೇದಿಕೆ ಸಿದ್ಧಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್ ರೆಡ್ಡಿ ಮತ್ತು ಇತರ ಪ್ರಮುಖ ರಾಜಕೀಯ ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.

ವೈಎಸ್‌ಆರ್‌ಸಿಪಿ ಅಧ್ಯಕ್ಷ ಜಗನ್‌ (ಪುಲಿವೆಂದುಲ), ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು (ಕುಪ್ಪಂ), ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್ (ಪಿಠಾಪುರಂ) ವಿಧಾನಸಭಾ ಚುನಾವಣೆಯ ಕಣದಲ್ಲಿದ್ದಾರೆ. ಆಂಧ್ರಪ್ರದೇಶದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಮತ್ತು ಮುಖ್ಯಮಂತ್ರಿ ವೈ.ಎಸ್‌.ಜಗನ್ ಸಹೋದರಿ ವೈ.ಎಸ್‌.ಶರ್ಮಿಳಾ (ಕಡಪ) ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ಪುರಂದರೇಶ್ವರಿ (ರಾಜಮಹೇಂದ್ರವರಂ) ಲೋಕಸಭಾ ಚುನಾವಣೆಯ ಕಣದಲ್ಲಿದ್ದಾರೆ.

ವೈಎಸ್‌ಆರ್‌ಸಿಪಿ ವಿಧಾನಸಭೆಯ ಎಲ್ಲ 175 ಮತ್ತು ಲೋಕಸಭೆಯ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಎನ್‌ಡಿಎ ಭಾಗವಾಗಿರುವ ಟಿಡಿ‍ಪಿ ವಿಧಾನಸಭೆಯ 144 ಕ್ಷೇತ್ರಗಳು ಮತ್ತು ಲೋಕಸಭೆಯ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಬಿಜೆಪಿ ಲೋಕಸಭೆಯ ಆರು ಕ್ಷೇತ್ರಗಳಲ್ಲಿ ಮತ್ತು ವಿಧಾನಸಭೆಯ 10 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಲೋಕಸಭೆಯ ಎರಡು ಮತ್ತು ವಿಧಾನಸಭೆಯ 21 ಕ್ಷೇತ್ರಗಳಲ್ಲಿ ಉಮೇದುವಾರರನ್ನು ಕಣಕ್ಕಿಳಿಸಿದೆ.

ರಾಜ್ಯದಲ್ಲಿ ವೈಎಸ್‌ಆರ್‌ಸಿಪಿ, ಎನ್‌ಡಿಎ ಮತ್ತು ‘ಇಂಡಿಯಾ’ ಕೂಟಗಳ ನಡುವೆ ತ್ರಿಕೋನ ಸ್ಪರ್ಧೆ ಇದೆ.

ಲೋಕಸಭಾ ಚುನಾವಣೆಯ ಕಣದಲ್ಲಿ ಒಟ್ಟು 454 ಅಭ್ಯರ್ಥಿಗಳು ಇದ್ದರೆ, ವಿಧಾನಸಭಾ ಚುನಾವಣೆಯ ಕಣದಲ್ಲಿ 2387 ಅಭ್ಯರ್ಥಿಗಳಿದ್ದಾರೆ. ರಾಜ್ಯದಲ್ಲಿ ಒಟ್ಟು 4.14 ಕೋಟಿ ಮತದಾರರು ಇದ್ದಾರೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಎಂ.ಕೆ.ಮೀನಾ ಮಾಹಿತಿ ನೀಡಿದರು.

ವಿರೋಧ ಪಕ್ಷಗಳ ಕುತಂತ್ರಕ್ಕೆ ಬಲಿಯಾಗಲು ನಾನು ‘ಅಭಿಮನ್ಯು’ ಅಲ್ಲ ‘ಅರ್ಜುನ’. ನನ್ನೊಂದಿಗೆ ಶ್ರೀಕೃಷ್ಣನಂಥವರು ಇದ್ದು ಗೆಲುವು ನಿಶ್ಚಿತ.
ವೈ.ಎಸ್‌.ಜಗನ್‌ಮೋಹನ್ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿ
ಆಂಧ್ರಪ್ರದೇಶದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆಯು ಬಹು ಮುಖ್ಯವಾಗಿದೆ. ಆದ್ದರಿಂದ ಮೇ 13ರಂದು ತಪ್ಪದೇ ಮತದಾನ ಮಾಡುವಂತೆ ನಾನು ಜನರಲ್ಲಿ ವಿನಂತಿಸುತ್ತೇನೆ.
ಎನ್‌.ಚಂದ್ರಬಾಬು ನಾಯ್ಡು ಟಿಡಿಪಿ ಮುಖ್ಯಸ್ಥ 

ಬೆಂಗಳೂರಿನಿಂದ 1494 ಬಸ್

ಹೈದರಾಬಾದ್/ಅಮರಾವತಿ (ಪಿಟಿಐ): ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಮತದಾನ ನಡೆಯುತ್ತಿರುವುದರಿಂದ ಹೈದರಾಬಾದ್ ಬೆಂಗಳೂರು ಚೆನ್ನೈ ನಗರಗಳಿಂದ ರಾಜ್ಯಕ್ಕೆ ದೊಡ್ಡ ಸಂಖ್ಯೆಯ ಜನರು ಭಾನುವಾರ ತೆರಳಿದರು.  ಆಂಧ್ರಕ್ಕೆ ಹೋಗುವ ಬಸ್ಸು ರೈಲುಗಳು ತುಂಬಿ ತುಳುಕುತ್ತಿದ್ದವು. ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬೆಂಗಳೂರಿನಿಂದ ಆಂಧ್ರಪ್ರದೇಶದ ವಿವಿಧ ಭಾಗಗಳಿಗೆ 1494 (ನಿಗದಿತ ಮತ್ತು ವಿಶೇಷ ಬಸ್ಸು ಸೇರಿ) ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ವಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT