ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ, ತೆಲಂಗಾಣ ನಂತರ ಒಡಿಶಾದಲ್ಲಿ ಉಚಿತ ವಿದ್ಯುತ್ ಭರವಸೆ!

Published 15 ಮೇ 2024, 14:05 IST
Last Updated 15 ಮೇ 2024, 14:05 IST
ಅಕ್ಷರ ಗಾತ್ರ

ಭುವನೇಶ್ವರ: ‘ಒಡಿಶಾದ ಮುಖ್ಯಮಂತ್ರಿಯಾಗಿ 6ನೇ ಬಾರಿ ನವೀನ್ ಪಟ್ನಾಯಕ್ ಅವರು ಜೂನ್ 9ರಂದು ಪ್ರಮಾಣವಚನ ಸ್ವೀಕರಿಸುತ್ತಿದ್ದು, ರಾಜ್ಯದ ಶೇ 90ರಷ್ಟು ಜನರಿಗೆ ಉಚಿತ ವಿದ್ಯುತ್ ನೀಡುವುದೇ ಅವರ ಮೊದಲ ಆದೇಶವಾಗಿರಲಿದೆ’ ಎಂದು ಪಟ್ನಾಯಕ್ ಅವರ ಆಪ್ತ ವಿ.ಕೆ.ಪಾಂಡಿಯನ್ ಹೇಳಿದ್ದಾರೆ.

ಡೋಗ್ರಾ ಜಿಲ್ಲೆಯಲ್ಲಿ ಪಟ್ನಾಯಕ್ ಅವರೊಂದಿಗೆ ಸಂವಾದ ನಡೆಸಿದ ತಮ್ಮ ವಿಡಿಯೊವನ್ನು ಹಂಚಿಕೊಂಡಿರುವ ಪಾಂಡಿಯನ್, ‘ಮಹಾಪ್ರಭು ಭಗವಾನ್ ಜಗನ್ನಾಥನ ಹಾಗೂ ಜನರ ಆಶೀರ್ವಾದದಿಂದ ನಮ್ಮ ನೆಚ್ಚಿನ ಮುಖ್ಯಮಂತ್ರಿ ನವೀನ್ ಬಾಬು ಅವರು ಜೂನ್ 9ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶೇ 90ರಷ್ಟು ಜನರಿಗೆ ಉಚಿತ ವಿದ್ಯುತ್ ಹಾಗೂ ಎಲ್ಲಾ ಸರ್ಕಾರಿ ನೌಕರರಿಗೆ ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆಯನ್ನು ಮುಖ್ಯಮಂತ್ರಿಯಾಗಿ ಅವರು ಆದೇಶಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

ಪಾಂಡಿಯನ್‌ ನಂತರ ಮಾತು ಮುಂದುವರಿಸುವ ಪಟ್ನಾಯಕ್, ‘ನವೀನ್ ಪಟ್ನಾಯಕ್ ಬಿಜಿಲಿ (ವಿದ್ಯುತ್‌) ಗ್ಯಾರಂಟಿ ಹಾಗೂ ಶಂಖ ಚಿಹ್ನೆಯ ಗ್ಯಾರಂಟಿ ಇದು’ ಎಂದೆನ್ನುವ ಮೂಲಕ ವಿಡಿಯೊ ಕೊನೆಗೊಳ್ಳುತ್ತದೆ.

ಬಿಜೆಪಿ ಮುಖಂಡ ಸಮೀರ್ ಮೊಹಾಂತಿ ಅವರು ಉಚಿತ ವಿದ್ಯುತ್ ಪೂರೈಕೆಯ ವಾಗ್ದಾನ ಕುರಿತು ಬಿಜೆಡಿಯ ಸ್ಪಷ್ಟೀಕರಣ ಕೇಳಿದ ಬೆನ್ನಲ್ಲೇ  ಪಟ್ನಾಯಕ್ ಮತ್ತು ಪಾಂಡಿಯನ್ ಅವರ ಈ ವಿಡಿಯೊ ಹೊರಬಿದ್ದಿದೆ.

‘ಉಚಿತ ವಿದ್ಯುತ್ ನೀಡುವ ಹುಸಿ ಭರವಸೆಗಳ ಮೂಲಕ ಬಿಜೆಡಿ ಸರ್ಕಾರವು ಜನರನ್ನು ವಂಚಿಸುತ್ತಿದೆ. ಇವರ ಈ ಯೋಜನೆಯು ಎಷ್ಟು ಜನರಿಗೆ ನೆರವಾಗಲಿದೆ’ ಎಂದು ಮೊಹಾಂತಿ ಪ್ರಶ್ನಿಸಿದ್ದರು.

ಬಿಜೆಡಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿತ್ತು. ಮಾಸಿಕ 100 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಕುಟುಂಬಗಳಿಗೆ ಸಂಪೂರ್ಣ ಉಚಿತ, 100ರಿಂದ 150 ಯೂನಿಟ್ ಬಳಸುವವರಿಗೆ 50 ಯೂನಿಟ್‌ ಉಚಿತ ಎಂದೆನ್ನಲಾಗಿತ್ತು.

‘ಈ ಯೋಜನೆಯಿಂದ ರಾಜ್ಯದ ಗ್ರಾಮೀಣ ಭಾಗದ ಬಹುತೇಕ ಜನರಿಗೆ ಅನುಕೂಲವಾಗಲಿದೆ. ಪಟ್ಟಣದಲ್ಲಿರುವ ಹಲವರಿಗೂ ನೆರವಾಗಲಿದೆ. ಈ ಯೋಜನೆಯು ರಾಜ್ಯದ ಶೇ 85ರಿಂದ 90 ಜನರನ್ನು ತಲುಪಲಿದೆ. ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು. ಇದರಿಂದ ಕೃಷಿ ಚಟುವಟಿಕೆಗೆ ವಿದ್ಯುತ್ ಪಂಪ್‌ಸೆಟ್ ಅವಲಂಬಿಸಿದವರಿಗೆ, ಅದರಲ್ಲೂ ಪಶ್ಚಿಮ ಒಡಿಶಾದ ರೈತರಿಗೆ ಪ್ರಯೋಜನವಾಗಲಿದೆ’ ಎಂದು ಪಕ್ಷ ತನ್ನ ಪ್ರಣಾಳಿಕೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT