ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗನಾ ವಿರುದ್ಧ ಸುಪ್ರಿಯಾ ಪೋಸ್ಟ್‌: ಕಾನೂನಾತ್ಮಕ ಕ್ರಮ ಎಂದ BJP ನಾಯಕ ಜೈರಾಂ

Published 26 ಮಾರ್ಚ್ 2024, 9:50 IST
Last Updated 26 ಮಾರ್ಚ್ 2024, 10:56 IST
ಅಕ್ಷರ ಗಾತ್ರ

ಶಿಮ್ಲಾ: ‘ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ನಟಿ ಕಂಗನಾ ರನೌತ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಕಾಂಗ್ರೆಸ್‌ನ ಸುಪ್ರಿಯಾ ಶ್ರೀನೇತ್ ಅವರ ವಿರುದ್ಧ ಬಿಜೆಪಿಯು ಕಾನೂನಾತ್ಮಕ ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆಸಿದೆ’ ಎಂದು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಜೈರಾಂ ಠಾಕೂರ್ ಮಂಗಳವಾರ ಹೇಳಿದ್ದಾರೆ.

‘ಮಂಡಿಯನ್ನು ಚೋಟಾ ಕಾಶಿ ಎಂದೂ ಕರೆಯಲಾಗುತ್ತದೆ. ಇಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿರಗಳಿವೆ. ಇದು ಶ್ರದ್ಧಾ ಕೇಂದ್ರವಾಗಿದೆ. ಮಂಡಿ ಕುರಿತು ಹೇಳಿಕೆ ನೀಡಿ ಸುಪ್ರಿಯಾ ಶ್ರೀನೇತ್ ಅವರು ದೊಡ್ಡ ತಪ್ಪು ಮಾಡಿದ್ದಾರೆ’ ಎಂದು ಕಿಡಿಯಾಡಿದ್ದಾರೆ.

ರನೌತ್ ಮತ್ತು ಮಂಡಿ ವಿರುದ್ಧ ಕಾಂಗ್ರೆಸ್ ಮುಖಂಡರಾದ ಶ್ರಿನಾಟೆ ಹಾಗೂ ಎಚ್.ಎಸ್.ಅಹಿರ್ ಅವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ‘ಈ ಪ್ರಕರಣವನ್ನು ಕಾನೂನಾತ್ಮಕವಾಗಿ ಅವಲೋಕಿಸಲಾಗುತ್ತಿದೆ. ಪ್ರಕರಣ ದಾಖಲಿಸುವ ಕುರಿತೂ ಚಿಂತನೆ ನಡೆದಿದೆ’ ಎಂದು ಠಾಕೂರ್ ಹೇಳಿದ್ದಾರೆ.

‘ಒಬ್ಬ ಮಹಿಳೆಯಾಗಿ ಮತ್ತೊಬ್ಬ ಮಹಿಳೆ ಕುರಿತು ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿರುವುದು ನಿಜಕ್ಕೂ ಆಘಾತಕಾರಿ ವಿಷಯ. ಹೇಳಿಕೆ ನೀಡಿದ ನಂತರ ಅದನ್ನು ತಾನು ಮಾಡಿಲ್ಲ. ತನ್ನ ಖಾತೆ ಪ್ರವೇಶದ ಹಕ್ಕು ಪಡೆದಿರುವ ಇತರರು ಮಾಡಿದ್ದಾರೆ ಎಂದು ಆರೋಪದಿಂದ ನುಣುಚಿಕೊಳ್ಳುವ ಯತ್ನವನ್ನು ಸುಪ್ರಿಯಾ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಇಂಥ ಹೇಳಿಕೆಗಾಗಿ ಮಂಡಿ ಕ್ಷೇತ್ರ ಮಾತ್ರವಲ್ಲದೇ, ಹಿಮಾಚಲ ಪ್ರದೇಶದ ಜನರು ಎಂದಿಗೂ ಕಾಂಗ್ರೆಸ್‌ ಅನ್ನು ಕ್ಷಮಿಸುವುದಿಲ್ಲ. ಈ ವಿವಾದ ಮಂಡಿ ಕ್ಷೇತ್ರದ ಮೇಲಲ್ಲ, ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಧ್ವನಿಸಲಿದೆ. ಕಾಂಗ್ರೆಸ್‌ಗೆ ಮುಳುವಾಗಲಿದೆ’ ಎಂದು ಠಾಕೂರ್ ಹೇಳಿದ್ದಾರೆ.

ಕಂಗನಾ ಕುರಿತು ಸುಪ್ರಿಯಾ ಅವರ ಖಾತೆಯಿಂದ ಹೇಳಿಕೆಯೊಂದು ಹೊರಬಿದ್ದ ತಕ್ಷಣ ಅದು ವಿವಾದದ ಸ್ವರೂಪ ಪಡೆಯಿತು. ಇದರ ಬೆನ್ನಲ್ಲೇ ವಿಡಿಯೊ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಸುಪ್ರಿಯಾ, ತನ್ನ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಹಲವರು ನಿರ್ವಹಿಸುತ್ತಿದ್ದಾರೆ. ಅವರಿಂದ ಈ ತಪ್ಪು ಆಗಿರಬಹುದು ಎಂಬ ಹೇಳಿಕೆ ನೀಡಿದ್ದರು.

‘ಇಂಥದ್ದೊಂದು ತಪ್ಪು ನಡೆದಿರುವುದು ನನ್ನ ಗಮನಕ್ಕೆ ಬಂದ ತಕ್ಷಣ ಅದನ್ನು ಖಾತೆಯಿಂದ ಅಳಿಸಿಹಾಕಿದ್ದೇನೆ. ನಾನು ಯಾರೊಬ್ಬರ ಮೇಲೂ ವೈಯಕ್ತಿಕ ದಾಳಿ ಅಥವಾ ಹೇಳಿಕೆ ನೀಡುವುದಿಲ್ಲ ಎಂಬ ಸಂಗತಿಯನ್ನು ಹಲವರು ಬಲ್ಲರು. ಈ ಒಂದು ಘಟನೆ ಹೇಗಾಯಿತು ಎಂಬುದನ್ನು ನಾನೂ ಪರಿಶೀಲಿಸುತ್ತಿದ್ದೇನೆ’ ಎಂದು ಸುಪ್ರಿಯಾ ಹೇಳಿದ್ದಾರೆ.

ಸುಪ್ರಿಯಾ ಹೇಳಿಕೆಗೆ ತಿರುಗೇಟು ನೀಡಿರುವ ಕಂಗನಾ, ‘ಪ್ರೀತಿಯ ಸುಪ್ರಿಯಾ ಅವರೇ... ಕಲಾವಿದೆಯಾಗಿ ಕಳೆದ 20 ವರ್ಷಗಳ ನನ್ನ ವೃತ್ತಿ ಬದುಕಿನಲ್ಲಿ, ಸಮಾಜದ ಹಲವು ಸ್ತರಗಳ ಮಹಿಳೆಯರ ಪಾತ್ರಗಳನ್ನು ನಿಭಾಯಿಸಿದ್ದೇನೆ. ನಿಷ್ಕಪಟ ಹಾಗೂ ಮುಗ್ದ ಹುಡುಗಿಯ ಪಾತ್ರದಿಂದ  (ಕ್ವೀನ್) ಗೂಢಾಚಾರಿಣಿ (ಧಾಕಡ್) ಪಾತ್ರದವರೆಗೆ, ದೇವತೆಯ (ಮಣಿಕರ್ಣಿಕಾ) ಪಾತ್ರದಿಂದ ರಾಕ್ಷಸಿ (ಚಂದ್ರಮುಖಿ) ಪಾತ್ರದಿಂದ ವೇಶ್ಯೆಯ (ರಾಜ್ಜೋ) ಪಾತ್ರದವರೆಗೆ, ಕ್ರಾಂತಿಕಾರಿ (ಥಲೈವಿ)ಯಂತ  ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ’ ಎಂದು ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT