ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ಏಳನೇ ಹಂತ: ಬಹಿರಂಗ ಪ್ರಚಾರಕ್ಕೆ ತೆರೆ

ಏಳು ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶದ 57 ಕ್ಷೇತ್ರಗಳಿಗೆ ಶನಿವಾರ ಮತದಾನ
Published 30 ಮೇ 2024, 23:36 IST
Last Updated 30 ಮೇ 2024, 23:36 IST
ಅಕ್ಷರ ಗಾತ್ರ

ವಾರಾಣಸಿ/ಚಂಡೀಗಢ: ಲೋಕಸಭಾ ಚುನಾವಣೆಯ ಸುದೀರ್ಘ ಅವಧಿಯ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆ ಬಿದ್ದಿತು. ಏಳನೇ ಹಾಗೂ ಕೊನೆಯ ಹಂತದಲ್ಲಿ ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ (ಚಂಡೀಗಢ) ಒಟ್ಟು 57 ಲೋಕಸಭಾ ಕ್ಷೇತ್ರಗಳಿಗೆ ಜೂನ್‌ 1ರಂದು (ಶನಿವಾರ) ಮತದಾನ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸಿರುವ ವಾರಾಣಸಿ ಕ್ಷೇತ್ರಕ್ಕೂ ಶನಿವಾರವೇ ಮತದಾನ ನಡೆಯಲಿದೆ. ಮೋದಿ ಅವರು ಸತತ ಮೂರನೇ ಬಾರಿಗೆ ಇಲ್ಲಿಂದ ಆಯ್ಕೆ ಬಯಸಿದ್ದಾರೆ.

28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 486 ಕ್ಷೇತ್ರಗಳಿಗೆ ಈಗಾಗಲೇ ಮತದಾನ ಮುಗಿದಿದೆ. ಮತ ಎಣಿಕೆ ಜೂನ್‌ 4ರಂದು ನಡೆಯಲಿದೆ.

ಆರೋಪ– ಪ್ರತ್ಯಾರೋಪ: ಏಳನೇ ಹಂತದ ಮತದಾನದ ಪ್ರಚಾರದ ವೇಳೆಯಲ್ಲೂ ಬಿಜೆಪಿ ನಾಯಕರು, ಕಾಂಗ್ರೆಸ್‌ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದರು. ‘ಕಾಂಗ್ರೆಸ್‌ ಮತ್ತು ಇಂಡಿಯಾ ಕೂಟವು ಭ್ರಷ್ಟ, ಹಿಂದೂ ವಿರೋಧಿಯಾಗಿದ್ದು, ತುಷ್ಟೀಕರಣದ ನೀತಿ ಅನುಸರಿಸುತ್ತಿವೆ. ಅಲ್ಲದೆ ಅವು ಕುಟುಂಬ ರಾಜಕಾರಣದಲ್ಲಿ ತೊಡಗಿಕೊಂಡಿವೆ’ ಎಂದು ಬಿಜೆಪಿ ನಾಯಕರು ಆರೋಪಗಳನ್ನು ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷಗಳು, ‘ಬಿಜೆಪಿಯು ರೈತ ಮತ್ತು ಯುವ ಜನರ ವಿರೋಧಿಯಾಗಿದೆ. ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸಂವಿಧಾನವನ್ನು ಬದಲಿಸುತ್ತದೆ’ ಎಂದು ಪ್ರತ್ಯಾರೋಪ ಮಾಡಿವೆ.

‘ಬಿಜೆಪಿ ನಾಯಕರು ಮೋದಿ ಅವರನ್ನು ವಿಷ್ಣುವಿನ 11ನೇ ಅವತಾರ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ದೇಶದ ಜನರು ಅದನ್ನು ಸ್ವೀಕರಿಸುವುದಿಲ್ಲ’ ಎಂದು ಒಡಿಶಾದ ಚುನಾವಣಾ ರ್‍ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಕಾಂಗ್ರೆಸ್‌, ಎಎಪಿ ಪ್ರತ್ಯೇಕ ಸ್ಪರ್ಧೆ: ಇಂಡಿಯಾ ಮೈತ್ರಿಕೂಟದ ಪಾಲುದಾರರಾದ ಕಾಂಗ್ರೆಸ್‌ ಮತ್ತು ಎಎಪಿ ಪಂಜಾಬಿನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಬಿಜೆಪಿ ಇಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ ಸಿಂಗ್‌, ನಿರ್ಮಲಾ ಸೀತಾರಾಮನ್‌, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಚಾರ ನಡೆಸಿದ್ದಾರೆ.  

ಕಾಂಗ್ರೆಸ್‌ ಪರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರದ ನೇತೃತ್ವ ವಹಿಸಿದ್ದರು. ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ.

ಉತ್ತರ ಪ್ರದೇಶದ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿಯು, ‘ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿಯನ್ನು ತರುತ್ತದೆ ಮತ್ತು ರಾಮಮಂದಿರಕ್ಕೆ ‘ಬಾಬ್ರಿ ಬೀಗ’ ಹಾಕುತ್ತದೆ’ ಎಂದು ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳು ಸಂವಿಧಾನ ಉಳಿಸಲು ಮತ ಚಲಾಯಿಸುವಂತೆ ಮತದಾರರನ್ನು ಕೋರಿವೆ. 

ಟಿಎಂಸಿ ಪರ ಮಮತಾ ಪ್ರಚಾರ: ಪಶ್ಚಿಮ ಬಂಗಾಳದ 9 ಲೋಕಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಅಭ್ಯರ್ಥಿಗಳ ಪರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಚಾರ ಕೈಗೊಂಡಿದ್ದಾರೆ. ಮೋದಿ ಅವರು ಕೋಲ್ಕತ್ತದಲ್ಲಿ ಮಂಗಳವಾರ ರ್‍ಯಾಲಿ ನಡೆಸಿದ್ದರು.

ಮಮತಾ ಅವರು ಗುರುವಾರ ಜಾದವ್‌ಪುರ ಪ್ರದೇಶದ ದಕ್ಷಿಣ ಭಾಗದಿಂದ ಗೋಪಾಲನಗರದವರೆಗೂ 12 ಕಿ.ಮೀ ರ್‍ಯಾಲಿಯಲ್ಲಿ ಪಾಲ್ಗೊಂಡರು. ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ಅವರೂ ಕೊನೆಯ ದಿನ ಎರಡು ರ್‍ಯಾಲಿಗಳಲ್ಲಿ ಭಾಗವಹಿಸಿದ್ದರು.

‘ಹೋಶಿಯಾರ್‌ಪುರದಲ್ಲಿ ಕೊನೆಯ ಪ್ರಚಾರ’

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಅಬ್ಬರದ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಗುರುವಾರ ಈ ಚುನಾವಣೆಯ ತಮ್ಮ ಕೊನೆಯ ಪ್ರಚಾರ ಸಭೆ ನಡೆಸಿದರು.

ಚುನಾವಣಾ ಆಯೋಗ (ಇ.ಸಿ) ಮಾರ್ಚ್‌ 16ರಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿತ್ತು. ಅದಾದ ಬಳಿಕ ಮೋದಿ ಅವರು ರೋಡ್‌ ಶೋ, ರ್‍ಯಾಲಿ, ಬಹಿರಂಗ ಪ್ರಚಾರ ಸೇರಿದಂತೆ ಒಟ್ಟು 206 ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಅವರು 68 ದಿನಗಳವರೆಗೆ 145 ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಈ ಬಾರಿ ಅದನ್ನು ಮೀರಿಸಿ ಪ್ರಚಾರ ಸಭೆಗಳನ್ನು ನಡೆಸಿದ್ದು, ಒಟ್ಟು 76 ದಿನಗಳಲ್ಲಿ 206 ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. 

ಆಯೋಗವು ಚುನಾವಣಾ ದಿನಾಂಕ ಘೋಷಿಸಿದಾಗ, ಮೋದಿ ಅವರು ಮಾರ್ಚ್‌ 15ರಿಂದ 17ರವರೆಗೆ ಮೂರು ದಿನ ದಕ್ಷಿಣ ಭಾರತದ ಎಲ್ಲ ಐದು ರಾಜ್ಯಗಳನ್ನು ಒಳಗೊಂಡ ಪ್ರವಾಸದಲ್ಲಿದ್ದರು. ಬಿಜೆಪಿಯು 2019ರ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದ ಕೇರಳ ಮತ್ತು ತಮಿಳುನಾಡು ರಾಜ್ಯಕ್ಕೆ ಬಿಜೆಪಿ ಒತ್ತು ನೀಡಿತ್ತು. ಅದರ ಜತೆಗೆ ಕರ್ನಾಟಕದಲ್ಲಿ ತನ್ನ ಬಲವನ್ನು ಉಳಿಸಿಕೊಳ್ಳಲು ಮತ್ತು ತೆಲಂಗಾಣದಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನ ನೀಡಿತ್ತು. 73ರ ವಯಸ್ಸಿನ ಮೋದಿ ಅವರು ಚುನಾವಣಾ ಪ್ರಚಾರದ ಸಭೆಗಳೇ ಅಲ್ಲದೇ 80 ಮಾಧ್ಯಮಗಳಿಗೆ ಸಂದರ್ಶನವನ್ನೂ ನೀಡಿದ್ದಾರೆ. ಅಂದರೆ ಮತದಾನ ಪ್ರಾರಂಭವಾದಾಗಿನಿಂದ ಅವರು ಪ್ರತಿದಿನ ಸರಾಸರಿ ಒಂದಕ್ಕಿಂತ ಹೆಚ್ಚು ಸಂದರ್ಶನ ನೀಡಿದ್ದಾರೆ.

ಮೋದಿ ಅವರ ಈ ಅಬ್ಬರದ ಪ್ರಚಾರದ ಯಶಸ್ಸಿನ ಪ್ರಮಾಣ ಎಷ್ಟು ಎಂಬುದು ಜೂನ್‌ 4ರ ಫಲಿತಾಂಶದ ದಿನ ಗೊತ್ತಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT