ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | ಗುರಿ ಇಲ್ಲದಂತಾಗಿದ್ದ ಕಾಂಗ್ರೆಸ್, ಈಗ ನಾಯಕನಿಲ್ಲದಂತಾಗಿದೆ: ಯೋಗಿ

Published 1 ಮೇ 2024, 12:47 IST
Last Updated 1 ಮೇ 2024, 12:47 IST
ಅಕ್ಷರ ಗಾತ್ರ

ಲಖನೌ: ಸ್ವಾತಂತ್ರ್ಯಾನಂತರ ಗುರಿ ಇಲ್ಲದಂತಾಗಿದ್ದ ಕಾಂಗ್ರೆಸ್ ಪಕ್ಷ, ಇದೀಗ ನಾಯಕನಿಲ್ಲದಂತಾಗಿದೆ. ಆ ಪಕ್ಷದ ನಾಯಕರು ದೇಶದ ಸಂಸ್ಕೃತಿ ಹಾಗೂ ನಾಗರಿಕತೆಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಯೋಗಿ, 'ಸ್ವಾತಂತ್ರ್ಯೋತ್ತರದಲ್ಲಿ ಗುರಿಯಿಲ್ಲದಂತಾಗಿದ್ದ ದೇಶದ ಹಳೇ ಪಕ್ಷ (ಕಾಂಗ್ರೆಸ್‌) ಇದೀಗ ನಾಯಕನಿಲ್ಲದಂತಾಗಿದೆ. ಕಾಂಗ್ರೆಸ್‌ ನಾಯಕರು ಭಾರತದ ಸಂಸ್ಕೃತಿಯನ್ನು ನಿರಂತರವಾಗಿ ದೂಷಿಸುತ್ತಿದ್ದಾರೆ. ಸನಾತನ ಧರ್ಮವನ್ನು ಅವಹೇಳನ ಮಾಡುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.

'ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಕೇಸರಿ ಭಯೋತ್ಪಾದನೆ ಹೆಸರಿನಲ್ಲಿ ಸನಾತನ ಸಂಸ್ಕೃತಿಯ ಅವಹೇಳನ ಮಾಡಿದ್ದರು' ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ನೀತಿಗಳೇ ನಕ್ಸಲಿಸಂ ಮತ್ತು ಭಯೋತ್ಪಾದನೆಗೆ ಕಾರಣ ಎಂದು ದೂರಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ, ಕೇಂದ್ರ ಸರ್ಕಾರವು ನಕ್ಸಲ್‌ಪೀಡಿತ ಪ್ರದೇಶಗಳಲ್ಲಿನ ಹೋರಾಟಗಳನ್ನು ನಿಯಂತ್ರಿಸಿದೆ ಎಂದು ಹೇಳಿದ್ದಾರೆ.

'ಕಾಂಗ್ರೆಸ್‌ ನೀತಿಗಳು ದೇಶದಲ್ಲಿ ನಕ್ಸಲಿಸಂ ಮತ್ತು ಭಯೋತ್ಪಾದನೆಗೆ ಹೇಗೆ ಕಾರಣವಾದವು ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಭಯೋತ್ಪಾದನೆ, ನಕ್ಸಲಿಸಂ ಮಾತ್ರವಲ್ಲ ಈಶಾನ್ಯ ರಾಜ್ಯಗಳಲ್ಲಿನ ಉಗ್ರವಾದ, ಅರಾಜಕತೆಯನ್ನು ಶಮನ ಮಾಡಿದೆ' ಎಂದು ಪ್ರತಿಪಾದಿಸಿದ್ದಾರೆ.

'ಸಂವಿಧಾನದ 370ನೇ ವಿಧಿಯು ಭಯೋತ್ಪಾದನೆಗೆ ಮೂಲ' ಎಂದಿರುವ ಯೋಗಿ, 'ಈ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಮಾಡುವ ಮೂಲಕ ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ಕರೆತಂದಿದೆ' ಎಂದಿದ್ದಾರೆ.

'ಯುಪಿಎ ಅವಧಿಯಲ್ಲಿ 120 ಜಿಲ್ಲೆಗಳಲ್ಲಿ ಹರಡಿದ್ದ ನಕ್ಸಲಿಸಂ, ಈಗ ನಿಯಂತ್ರಣಕ್ಕೆ ಬಂದಿದೆ. ದೇಶದ ಅರ್ಧದಷ್ಟು ರಾಜ್ಯಗಳಲ್ಲಿ ಎರಡು, ಮೂರು ಜಿಲ್ಲೆಗಳಿಗೆ ಸೀಮಿತವಾಗಿದೆ. ಅಷ್ಟೇ ಅಲ್ಲ, ಶೀಘ್ರದಲ್ಲೇ ಅಂತ್ಯವನ್ನೂ ಕಾಣಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ಮುಸ್ಲಿಮರ ಓಲೈಕೆ ರಾಜಕಾರಣ ಮಾಡುವ ಮೂಲಕ ವಿಭಜನೆಯ ಬೀಜ ಬಿತ್ತುತ್ತಿದೆ ಎಂದೂ ಗಂಭೀರ ಆರೋಪ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT