ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 2024: ನರೇಂದ್ರ ಮೋದಿ ಸ್ಪರ್ಧೆಗೆ ತಡೆ ಕೋರಿದ್ದ ಅರ್ಜಿ ತಿರಸ್ಕರಿಸಿದ HC

Published 30 ಮೇ 2024, 10:01 IST
Last Updated 30 ಮೇ 2024, 10:01 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು, ‘ಅಸಂಬದ್ಧ ಹಾಗೂ ಆಧಾರರಹಿತ’ ಎಂದು ಹೇಳಿ ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ನ್ಯಾ. ಸಚಿತ್ ದತ್ತ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ‘ಇದೊಂದು ದುರುದ್ದೇಶಪೂರಿತ ಅರ್ಜಿಯಾಗಿದೆ. ಇಂಥ ಅಸಂಬದ್ಧ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ’ ಎಂದು ಪೀಠವು ಕಟುವಾಗಿ ಹೇಳಿತು.

‘2018ರಲ್ಲಿ ಏರ್‌ ಇಂಡಿಯಾ ವಿಮಾನ ಸಂಸ್ಥೆಯನ್ನು ಪತನಗೊಳಿಸುವ ಯೋಜನೆಯ ಹಿಂದೆ ನರೇಂದ್ರ ಮೋದಿ ಹಾಗೂ ಅವರ ಬೆಂಬಲಿಗರ ಕೈವಾಡವಿದ್ದು, ಇದು ರಾಷ್ಟ್ರದ ಭದ್ರತೆಯನ್ನು ಅಸ್ಥಿರಗೊಳಿಸುವ ಪ್ರಯತ್ನವಾಗಿತ್ತು’ ಎಂದು ಅರ್ಜಿದಾರರಾದ ಕ್ಯಾಪ್ಟನ್ ದೀಪಕ್ ಕುಮಾರ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.

‘ಏರ್ ಇಂಡಿಯಾ ಕಂಪನಿಯ ಮಾರಾಟದಲ್ಲಿ ಪ್ರಭಾವ ಬೀರಿದ್ದ ನರೇಂದ್ರ ಮೋದಿ, ತಮ್ಮ ಕೈವಾಡ ಸಾಬೀತುಪಡಿಸುವ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು. ಜತೆಗೆ ನನ್ನ ಸೇವಾ ದಾಖಲೆಯನ್ನು ತಿರುಚಿ ರೇಟಿಂಗ್ ಕಡಿಮೆ ಮಾಡುವ ಮೂಲಕ ಪೈಲೆಟ್‌ ಪರವಾನಗಿಯ ರದ್ದತಿಗೆ ಕಾರಣರಾಗಿದ್ದರು’ ಎಂದು ಆರೋಪಿಸಿದ್ದರು.

‘ತಾನು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾಧಿಕಾರಿ ಎದುರು ಸುಳ್ಳು ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದೂ ಅರ್ಜಿಯಲ್ಲಿ ಹೇಳಲಾಗಿತ್ತು.

'ಅರ್ಜಿಯು ದುರುದ್ದೇಶಪೂರಿತ, ಆಧಾರರಹಿತ ಹಾಗೂ ಬೇಜವಾಬ್ದಾರಿಯುತ ಆರೋಪಗಳಿಂದ ಕೂಡಿದೆ. ಇಷ್ಟು ಮಾತ್ರವಲ್ಲ, ಮತ್ತೊಬ್ಬರ ವಿರುದ್ಧ ಕಳಂಕ ಹೊರಿಸುವ ಯತ್ನ ನಡೆಸಿದ್ದಾರೆ. ವ್ಯಕ್ತಿಯ ವಿರುದ್ದ ಹಗರಣದ ಆರೋಪ ಮಾಡುವುದೇ ಅರ್ಜಿಯ ಮುಖ್ಯ ಉದ್ದೇಶವಾಗಿದೆ’ ಎಂದು ಹೇಳಿದ ಪೀಠ ಅರ್ಜಿಯನ್ನು ವಜಾಗೊಳಿಸಿತು.

ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರೇ ಅಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಸ್ಪರ್ಧೆಯನ್ನು ಅನರ್ಹಗೊಳಿಸಲು ಅರ್ಜಿಯಲ್ಲಿ ಕೋರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT