ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್ ರೇವಣ್ಣನನ್ನು 54ನೇ ಭಯೋತ್ಪಾದಕ ಎಂದು ಘೋಷಿಸಿ: ವಕೀಲ ಬಾಲನ್

Published 30 ಮೇ 2024, 9:42 IST
Last Updated 30 ಮೇ 2024, 9:42 IST
ಅಕ್ಷರ ಗಾತ್ರ

ಹಾಸನ: ಭಾರತದಲ್ಲಿ 53 ಮಂದಿಯನ್ನು ಭಯೋತ್ಪಾದಕರು ಎಂದು ಸರ್ಕಾರ ಪಟ್ಟಿ ಮಾಡಿದೆ. ಪ್ರಜ್ವಲ್ ರೇವಣ್ಣ ಅವರನ್ನು 54ನೇ ಭಯೋತ್ಪಾದಕನಾಗಿ ಹೆಸರಿಸಬೇಕು. 400 ಮಂದಿ ಸಂತ್ರಸ್ತೆಯರಿದ್ದಾರೆ ಎಂದು ಹೇಳಲಾಗಿದೆ. ಪ್ರಜ್ವಲ್ ವಿರುದ್ಧ 400 ಎಫ್‍ಐಆರ್‌ಗಳನ್ನು ದಾಖಲಿಸಬೇಕು. ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲ ಎಸ್. ಬಾಲನ್ ಹೇಳಿದರು.

ಹಾಸನದಲ್ಲಿ ನಡೆದ ಬೃಹತ್ ಹೋರಾಟದಲ್ಲಿ ಅವರು ಮಾತನಾಡಿದರು. ಪ್ರತಿ ಸಂತ್ರಸ್ತೆಯರಿಗೆ ₹ 1 ಕೋಟಿ ಪರಿಹಾರ ನೀಡಬೇಕು. ರೇವಣ್ಣನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಹೈಕೋರ್ಟ್‍ನಲ್ಲಿ ಜಾಮೀನನ್ನು ಪ್ರಶ್ನಿಸಿಲ್ಲ. ಪ್ರಜ್ವಲ್‍ನನ್ನೂ ಇದೇ ರೀತಿ ಜಾಮೀನಿನ ಮೇಲೆ ಬಿಟ್ಟು ಬಿಡುವ ಸಾಧ್ಯತೆ ಇದೆ. ಹೀಗಾಗಿ, ನಾವು ಬೃಹತ್ ಹೋರಾಟ ನಡೆಸಬೇಕು ಎಂದರು.

ಸರ್ಕಾರಗಳು ರೇವಣ್ಣ ಮತ್ತು ಆತನ ಪುತ್ರ ಪ್ರಜ್ವಲ್ ರೇವಣ್ಣನನ್ನು ರಕ್ಷಿಸುತ್ತಿರುವ ಸಾಧ್ಯತೆಗಳಿವೆ. ಪ್ರಜ್ವಲ್ ಸೈಕೋಪಾತ್ ಇದ್ದಂತಿದ್ದಾನೆ. ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದರು.

ಹೋರಾಟಗಾರ ಎಸ್.ಆರ್. ಹಿರೇಮಠ ಮಾತನಾಡಿ, ದೇಶದಲ್ಲಿ ಮೂರು ಉತ್ಕೃಷ್ಟ ಸತ್ಯಾಗ್ರಹಗಳು ನಡೆದಿವೆ. ಒಂದು, ಅಂಬೇಡ್ಕರ್ ನೇತೃತ್ವದ ಮಹಾರ್ ಸತ್ಯಾಗ್ರಹ. ದಂಡಿ ಉಪ್ಪಿನ ಸತ್ಯಾಗ್ರಹ. 2020-21ರ ರೈತ ಹೋರಾಟ. ಇವು ದೇಶ ಕಂಡ ಐತಿಹಾಸಿಕ ಹೋರಾಟಗಳು. ರೈತರು ಒಂದು ವರ್ಷಗಳ ನಿರಂತರ ಹೋರಾಟ ಮಾಡಿ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದರು. ಇವತ್ತು, ಹಾಸನದಲ್ಲಿ ನಡೆದಿರುವ ಈ ಲೈಂಗಿಕ ಹಗರಣದ ವಿರುದ್ಧದ ಹೋರಾಟವು ಅಂತಹ ಐತಿಹಾಸಿಕವಾಗಿ ಮುನ್ನಡೆಯಬೇಕು ಎಂದು ಹೇಳಿದರು.

ಹಾಸನವನ್ನು ತಮ್ಮ 'ತಮ್ಮ ರಿಪಬ್ಲಿಕ್' ಮಾಡಿಕೊಂಡು, ಪಾಳೆಗಾರಿಕೆ ನಡೆಸುತ್ತಿರುವ ರೇವಣ್ಣ ಕುಟುಂಬದ ಅವನತಿಯಾಗಬೇಕು. ಪಾಳೆಗಾರಿಕೆಯನ್ನು ಕೊನೆಗಾಣಿಸಲು ವ್ಯವಸ್ಥಿತ ಹೋರಾಟ ನಡೆಬೇಕು. ಬಳ್ಳಾರಿಯ ಪಾಳೆಗಾರಿಕೆಯನ್ನು ಮುರಿದಂತೆ, ಹಾಸನದಲ್ಲಿರುವ ಪಾಳೆಗಾರಿಕೆಯನ್ನು ಮುಗಿಸಬೇಕು ಎಂದರು.

ಅತ್ಯಾಚಾರ, ಅನ್ಯಾಯ ಮಾಡಿದವರ ವಿರುದ್ಧ ಸಂತ್ರಸ್ತ ಮಹಿಳೆಯರು ಮುಂದೆ ಬಂದು ಹೋರಾಟ ನಡೆಸಬೇಕು. ತಮ್ಮ ಮೇಲಾದ ದೌರ್ಜನ್ಯಗಳ ವಿರುದ್ಧ ಗಟ್ಟಿಯಾಗಿ ಮಾತನಾಡಬೇಕು. ಸರ್ಕಾರ ನಡೆಸುತ್ತಿರುವವರು ಹಾಸನಕ್ಕೆ ಬರಬೇಕು. ಸಂತ್ರಸ್ತೆಯರಿಗೆ ಧೈರ್ಯ ತುಂಬಬೇಕು. ನ್ಯಾಯ ಕೊಡಿಸುವ ಭರವಸೆ ನೀಡಬೇಕು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT