ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಹಿಂದೂಗಳಿಗೆ ದಿಢೀರ್ ಅಪಾಯ ಎದುರಾಗಿದ್ದು ಹೇಗೆ?: ಕೀರ್ತಿ ಆಜಾದ್

400 ಸ್ಥಾನಗಳಲ್ಲಿ ಸ್ಪರ್ಧಿಸದ ಬಿಜೆಪಿ ಅಷ್ಟು ಸ್ಥಾನ ಗೆಲ್ಲುವುದಾದರೂ ಹೇಗೆ: ಕೀರ್ತಿ ಆಜಾದ್ ಲೇವಡಿ
Published 1 ಮೇ 2024, 15:16 IST
Last Updated 1 ಮೇ 2024, 15:16 IST
ಅಕ್ಷರ ಗಾತ್ರ

ಕೋಲ್ಕತ್ತ: ಬಿಜೆಪಿಯ ‘ಹಿಂದೂ ರಾಷ್ಟ್ರೀಯತೆ’ಯನ್ನು ಟೀಕಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಹಾಗೂ ಭಾರತದ ಮಾಜಿ ಕ್ರಿಕೆಟ್ ಆಟಗಾರ ಕೀರ್ತಿ ಆಜಾದ್, ಹತ್ತು ವರ್ಷಗಳ ಆಡಳಿತದ ನಂತರವೂ ಬಿಜೆಪಿ ‘ಹಿಂದೂಗಳು ಅಪಾಯದಲ್ಲಿದ್ದಾರೆ’ ಎನ್ನುವ ಸಂಕಥನವನ್ನು ಬಳಸುತ್ತಿದ್ದರೆ, ಇದು ಆ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕೇ ಎನ್ನುವ ಅನುಮಾನ ಮೂಡಿಸುತ್ತದೆ ಎಂದು ಹೇಳಿದ್ದಾರೆ.

ಪಿಟಿಐ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮೊಘಲರ ಆಡಳಿತದಲ್ಲಿ ಹಿಂದೂಗಳಿಗೆ ಬೆದರಿಕೆ ಇರಲಿಲ್ಲ. ಬ್ರಿಟಿಷರ ಕಾಲದಲ್ಲಿಯೂ ಅವರಿಗೆ ಗಂಡಾಂತರ ಇರಲಿಲ್ಲ. ಸ್ವಾತಂತ್ರ್ಯಾನಂತರದ ವಿವಿಧ ಸರ್ಕಾರಗಳ ಆಳ್ವಿಕೆಯಲ್ಲಿಯೂ ಅವರು ಯಾವುದೇ ಅಪಾಯ ಎದುರಿಸಲಿಲ್ಲ. ಆದರೆ, ಹಿಂದೂ ರಾಷ್ಟ್ರೀಯ ಪಕ್ಷ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವಾಗ ಹಿಂದೂಗಳಿಗೆ ದಿಢೀರ್ ಅಪಾಯ ಎದುರಾಗಿದ್ದು ಹೇಗೆ’ ಎಂದು  ಪ್ರಶ್ನಿಸಿದರು.‌

ಹಿಂದೆ ಬಿಜೆಪಿಯಲ್ಲಿದ್ದು ನಂತರ ಅದನ್ನು ತ್ಯಜಿಸಿ, ಈಗ ಟಿಎಂಸಿಯ ಬರ್ಧಮಾನ್–ದುರ್ಗಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಆಜಾದ್, ‘ಬಿಜೆಪಿಗೆ ಹೇಳಿಕೊಳ್ಳುವಂಥ ಸಾಧನೆಗಳೇ ಇಲ್ಲದಿರುವುದರಿಂದ ಚುನಾವಣೆಯಲ್ಲಿ ಕೋಮುವಾದವನ್ನು ಉದ್ದೀಪಿಸಲು ಅದು ಯುಸಿಸಿ ಅನ್ನು ಒಂದು ತಂತ್ರವನ್ನಾಗಿ ಬಳಸುತ್ತಿದೆ’ ಎಂದು ಆರೋಪಿಸಿದರು.             

‘ವಿಭಿನ್ನ ಸಮುದಾಯಗಳ, ಹಿನ್ನೆಲೆಯ ಮತ್ತು ಧರ್ಮಗಳ ಜನ ಇಲ್ಲಿದ್ದಾರೆ. ನೀವು ದೇಶದ ಯಾವುದೇ ಭಾಗಕ್ಕೆ ಹೋದರೂ, ವಿಭಿನ್ನವಾಗಿ ಹಬ್ಬಗಳನ್ನು ಆಚರಿಸುವುದನ್ನು ನೋಡುವಿರಿ’ ಎಂದ ಅವರು, ‘ಯುಸಿಸಿ ಜರ್ಮನಿಯಂಥ ಒಂದೇ ಜನಾಂಗ ಇರುವ ದೇಶಗಳಿಗೆ ಸೂಕ್ತ’ ಎಂದು ಅಭಿಪ್ರಾಯಪಟ್ಟರು.

‘ಕೆಲವರು ‘ಇಂಡಿಯಾ’ ಕೂಟದಿಂದ ಹೊರನಡೆದಿರಬಹುದು. ಆದರೆ, ಬಿಜೆಪಿ 200 ಸ್ಥಾನ ಪಡೆಯಲು ವಿಫಲವಾದರೆ, ನಿತೀಶ್ ಕುಮಾರ್ ಅವರಂಥ ನಾಯಕರು ಮತ್ತೆ ವಾಪಸ್ ಬರುತ್ತಾರೆ. ನಾವು ಇದನ್ನು ಹಿಂದೆ ನೋಡಿದ್ದೇವೆ. ಅದು ಮತ್ತೆ ಘಟಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಇತರೆ ಪಕ್ಷಗಳಿಂದ ಅಭ್ಯರ್ಥಿಗಳನ್ನು ಎರವಲು ಪಡೆದಿದೆ. 400 ಸ್ಥಾನಗಳನ್ನು ದಾಟುವುದಾಗಿ ಆ ಪಕ್ಷದವರು ಹೇಳುತ್ತಿದ್ದಾರೆ. ಅಚ್ಚರಿಯ ವಿಚಾರವೇನೆಂದರೆ, ಅಷ್ಟು ಕ್ಷೇತ್ರಗಳಲ್ಲಿ ಅವರು ಸ್ಪರ್ಧಿಸಿಯೇ ಇಲ್ಲ’ ಎಂದು ಲೇವಡಿ ಮಾಡಿದರು.

‘ವಿಶ್ವಕಪ್ ಗೆದ್ದ ತಂಡದಲ್ಲಿ ಎಲ್ಲರೂ ಇದ್ದರು’

1983ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಕೀರ್ತಿ ಆಜಾದ್ ಕೋಮು ಸಾಮರಸ್ಯವೇ ಆಗ ತಂಡದ ಬೆನ್ನೆಲುಬಾಗಿತ್ತು ಎಂದು ಅಭಿಪ್ರಾಯಪಟ್ಟರು.

‘ನಾವು ಕಪ್ ಗೆದ್ದಾಗ ತಂಡದಲ್ಲಿ ಹಿಂದೂ ಆಟಗಾರರಿದ್ದರು ಮುಸ್ಲಿಂ ಆಗಿದ್ದ ಸೈಯದ್ ಕಿರ್ಮಾನಿ ಸಿಖ್ ಆಗಿದ್ದ ಬಲ್ವಿಂದರ್ ಸಂಧು ಮತ್ತು ಕ್ರಿಶ್ಚಿಯನ್ ಆಗಿದ್ದ ರೋಜರ್ ಬಿನ್ನಿ ಇದ್ದರು. ನಾವೆಲ್ಲ ಒಟ್ಟಿಗೇ ಹೋರಾಡಿದೆವು ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದೆವು. ಈ ಎಲ್ಲ ಸಮುದಾಯಗಳು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದವು. ಬಿಜೆಪಿ ನೋಡಿದರೆ ಹಿಂದೂಗಳು ಬೆದರಿಕೆ ಎದುರಿಸುತ್ತಿದ್ದಾರೆ ಎನ್ನುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT