ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

INDI ಒಕ್ಕೂಟ ಅಧಿಕಾರಕ್ಕೇರಿದರೆ ರಾಮಮಂದಿರಕ್ಕೆ ಬಾಬರಿ ಬೀಗ: ಅಮಿತ್ ಶಾ ಆರೋಪ

Published 8 ಮೇ 2024, 11:01 IST
Last Updated 8 ಮೇ 2024, 11:01 IST
ಅಕ್ಷರ ಗಾತ್ರ

ಲಖೀಂಪುರ ಖೇರಿ: ‘ವಿರೋಧ ಪಕ್ಷಗಳ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರಕ್ಕೆ ಬಾಬರಿ ಬೀಗ ಹಾಕಲಾಗುತ್ತದೆ’ ಎಂದು ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ವಾಗ್ದಾಳಿ ನಡೆಸಿದ್ದಾರೆ.

‘ಪಾಕಿಸ್ತಾನದ ನೀತಿಯನ್ನು ಜಾರಿಗೆ ತರುವ ಉದ್ದೇಶ ಕಾಂಗ್ರೆಸ್‌ನ ರಾಹುಲ್ ಗಾಂಧಿ ಹೊಂದಿದ್ದಾರೆ. ರಾಯಬರೇಲಿಯಲ್ಲಿ ಅವರ ಪರಾಭವ ನಿಶ್ಚಿತ. ನಂತರ ಅವರ ಇಟಲಿಗೆ ಹೋಗಿ ನೆಲೆಸಲಿದ್ದಾರೆ. ಅವರಿಗೆ ಉಳಿದಿರುವುದು ಅದೊಂದೇ ಸ್ಥಳ’ ಎಂದು ಲೇವಡಿ ಮಾಡಿದ್ದಾರೆ.

ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರು ಲಖೀಂಪುರ ಖೇರಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರ ಪರ ಆಯೋಜಿಸಲಾಗಿದ್ದ ಚುನಾವಣಾ ರ‍್ಯಾಲಿಯಲ್ಲಿ ಬುಧವಾರ ಮಾತನಾಡಿದ ಅಮಿತ್ ಶಾ, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ಟೀಕಿಸುವ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜತೆಗೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 400 ಸೀಟುಗಳನ್ನು ಗಳಿಸಲಿದೆ. ಜತೆಗೆ ಮೀಸಲಾತಿಯನ್ನೂ ಜಾರಿಗೆ ತರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರಾಮ ಮಂದಿರ ವಿಷಯ ಚರ್ಚೆಯೇ ಅನವಶ್ಯಕ’ ಎಂದು ಸಮಾಜವಾದಿ ಪಾರ್ಟಿಯ ಮುಖಂಡ ರಾಮ್ ಗೋಪಾಲ್ ಯಾದವ್‌ ನೀಡಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾ, ‘ಈಗಲೇ ಇವರು ರಾಮಮಂದಿರ ವಿಷಯ ಅಪ್ರಸ್ತುತ ಎಂದೆನ್ನುತ್ತಿದ್ದಾರೆ. ಒಂದೊಮ್ಮೆ ಅಧಿಕಾರಕ್ಕೆ ಬಂದರೆ ರಾಮಮಂದಿರಕ್ಕೆ ಬಾಬರಿ ಬೀಗವನ್ನು ಹಾಕಲಿದ್ದಾರೆ. ಈ ಮಾತನ್ನು ನೆನಪಿನಲ್ಲಿಡಿ’ ಎಂದು ಎಚ್ಚರಿಸಿದ್ದಾರೆ.

‘ರಾಮಮಂದಿರ ನಿರ್ಮಾಣ ಸಾಧ್ಯವಾಗಿಸಿದ ಮೋದಿ’

‘ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ನೇಮಕಗೊಂಡ ನಂತರ, ರಾಮಜನ್ಮಭೂಮಿ ಕುರಿತ ಕಾನೂನು ವ್ಯಾಜ್ಯವನ್ನು ಬಗೆಹರಿಸಿದರು. ಜತೆಗೆ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಮತ್ತು ಪ್ರಾಣ ಪ್ರತಿಷ್ಠಾಪನೆ ಎರಡನ್ನೂ ನೆರವೇರಿಸಿದ್ದಾರೆ. ಆದರೆ ತಮ್ಮ ಮತ ಬ್ಯಾಂಕ್ ಕೈತಪ್ಪುವ ಭಯದಿಂದ ವಿರೋಧ ಪಕ್ಷದವರು ಆಹ್ವಾನ ಇದ್ದರೂ, ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಗೈರಾದರು. ಹಾಗಿದ್ದರೆ ಅವರಿಗೆ ಯಾರ ಮತಗಳು ಕೈತಪ್ಪುವ ಭಯ ಇತ್ತು ಎಂಬುದು ನಿಮಗೆ ತಿಳಿದಿದೆಯಲ್ಲವೇ’ ಎಂದು ನೆರೆದಿದ್ದ ಜನರಿಗೆ ಶಾ ಕೇಳಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ ಕುರಿತು ಮಾತನಾಡಿದ ಶಾ, ‘ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಹಿಂದೂ, ಸಿಖ್‌, ಬೌದ್ಧ ಹಾಗೂ ಜೈನರಿಗೆ ಪೌರತ್ವ ನೀಡುವ ಉದ್ದೇಶದಿಂದ ಮೋದಿ ಸರ್ಕಾರ ಈ ಕಾನೂನು ಜಾರಿಗೆ ತಂದಿದೆ. ಆದರೆ, ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್ ಅವರು ಈ ಕಾನೂನು ರದ್ದುಪಡಿಸುತ್ತೇವೆ ಎಂದಿದ್ದಾರೆ’ ಎಂದು ಶಾ ವಾಗ್ದಾಳಿ ನಡೆಸಿದ್ದಾರೆ.

‘ವಿರೋಧ ಪಕ್ಷಗಳ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಯಾರಾಗುವರು? ಶರದ್‌ ಪವಾರ್, ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್, ಅಖಿಲೇಶ್ ಅಥವಾ ರಾಹುಲ್‌...? ಪ್ರಧಾನಮಂತ್ರಿ ಅಭ್ಯರ್ಥಿಯೇ ಇಲ್ಲದ ಒಕ್ಕೂಟವದು. ಈ ಒಕ್ಕೂಟಕ್ಕೆ ನೀತಿಯೂ ಇಲ್ಲ, ಗುರಿಯೂ ಇಲ್ಲ’ ಎಂದು ಆರೋಪಿಸಿದ್ದಾರೆ.

‘ಮೊದಲ ಮೂರು ಹಂತಗಳ ಚುನಾವಣೆಯಲ್ಲಿ ಮೋದಿ ಅವರು 190 ಸೀಟುಗಳಿಗೂ ಹೆಚ್ಚು ಸ್ಥಾನ ಗಳಿಸಿದ್ದಾರೆ. 4ನೇ ಹಂತದಲ್ಲಿ 400 ಕ್ಷೇತ್ರಗಳನ್ನು ಸುಲಭವಾಗಿ ಗೆಲ್ಲಲಿದ್ದೇವೆ. ಮತ್ತೊಂದೆಡೆ, ಸಮಾಜವಾದಿ ಪಾರ್ಟಿ, ಬಿಎಸ್‌ಪಿ ಹಾಗೂ ಕಾಂಗ್ರೆಸ್ ದೂಳಿಪಟ ಆಗಲಿವೆ’ ಎಂದಿದ್ದಾರೆ.

ಮುಸ್ಲಿಂ ಮೀಸಲಾತಿ ರದ್ದು: ಶಾ ಭರವಸೆ

‘ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ, ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡಲಾಗಿದೆ. ಅದನ್ನು ಹಿಂದುಳಿದ ವರ್ಗದವರಿಗೆ ನೀಡಿದ ಕೋಟಾದಿಂದ ನೀಡಲಾಗಿದೆ. ಆಂಧ್ರಪ್ರದೇಶದಲ್ಲೂ ಇದೇ ಕ್ರಮ ಅನುಸರಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿರುವ ಅಸಾಂವಿಧಾನಿಕ ಮೀಸಲಾತಿಯನ್ನು ಕೊನೆಗಾಣಿಸಲಾಗುವುದು. ಅದನ್ನು ಹಿಂದುಳಿದ ವರ್ಗಗಳಿಗೆ ನೀಡಲಾಗುವುದು’ ಎಂದು ಶಾ ಭರವಸೆ ನೀಡಿದ್ದಾರೆ.

‘ರಾಹುಲ್ ಗಾಂಧಿ ಒಂದೇ ಬಾರಿಗೆ ಬಡತನ ನಿರ್ಮೂಲನೆ ಮಾಡುವುದಾಗಿ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇವರ ಅಜ್ಜಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದರು. ಇವರ ತಂದೆ ರಾಜೀವ್ ಗಾಂಧಿ ಅವರು ತ್ರಿವಳಿ ತಲಾಖ್ ಜಾರಿಗೆ ತಂದರು. ಜತೆಗೆ ಹಿಂದುಳಿದ ವರ್ಗಗಳಿಗೆ ನೀಡಿದ್ದ ಮೀಸಲಾತಿಯನ್ನು ಕಸಿದರು’ ಎಂದು ರಾಹುಲ್ ವಿರುದ್ಧ ಶಾ ಕಿಡಿಯಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT