ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರ ಪ್ರದೇಶ: ಬಿಜೆಪಿ ಮೂಲ, ಹೊರಗಿನಿಂದ ಬಂದವರ ನಡುವೆ ತಿಕ್ಕಾಟ

Published 21 ಮಾರ್ಚ್ 2024, 15:51 IST
Last Updated 21 ಮಾರ್ಚ್ 2024, 15:51 IST
ಅಕ್ಷರ ಗಾತ್ರ

ಹೈದರಾಬಾದ್‌: ಆಂಧ್ರ ಪ್ರದೇಶದ ಬಿಜೆಪಿಯಲ್ಲಿ ಮೂಲ ಮತ್ತು ಹೊರಗಿನಿಂದ ಬಂದವರ ನಡುವೆ ತಿಕ್ಕಾಟ ನಡೆಯುತ್ತಿದೆ. ಇದು ದಕ್ಷಿಣ ರಾಜ್ಯದಿಂದ ಕೆಲ ಸ್ಥಾನಗಳನ್ನು ಗೆಲ್ಲುವ ಭರವಸೆ ಹೊಂದಿರುವ ಕೇಸರಿ ಪಕ್ಷದ ಹೈಕಮಾಂಡ್‌ಗೆ ಎಚ್ಚರಿಕೆಯ ಗಂಟೆ ಬಾರಿಸಿದೆ.

ಈಗಾಗಲೆ ಚುನಾವಣಾ ದಿನಾಂಕಗಳು ಪ್ರಕಟವಾಗಿವೆ. ಇದಕ್ಕೂ ಮುನ್ನವೇ ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಪಕ್ಷಗಳು ಮೈತ್ರಿ ಮಾಡಿಕೊಂಡು, ಸೀಟು ಹಂಚಿಕೆ ಮಾಡಿಕೊಂಡಿವೆ. ಇದು ದೀರ್ಘಕಾಲದಿಂದ ಪಕ್ಷ ಮತ್ತು ಸಿದ್ಧಾಂತದ ಜೊತೆಗಿರುವ ಮೂಲ ಬಿಜೆಪಿ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.

ಸೀಟು ಹಂಚಿಕೆಯ ಭಾಗವಾಗಿ ಬಿಜೆಪಿಗೆ ಆರು ಲೋಕಸಭಾ ಕ್ಷೇತ್ರಗಳು ಮತ್ತು 10 ವಿಧಾನಸಭಾ ಕ್ಷೇತ್ರಗಳು ದೊರೆತಿವೆ. ಟಿಡಿಪಿಯಿಂದ ಕೆಲ ವರ್ಷಗಳಲ್ಲಿ ಕೇಸರಿ ಪಕ್ಷಕ್ಕೆ ಸೇರಿರುವ ನಾಯಕರೇ, ಇದರಲ್ಲಿನ ಬಹುಪಾಲನ್ನು ಕಬಳಿಸುತ್ತಾರೆ ಎಂಬುದು ಮೂಲ ಬಿಜೆಪಿಗರ ಶಂಕೆಯಾಗಿದೆ. ಅದು ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸುವ ಗುರಿ ಹೊಂದಿಲ್ಲ, ಬದಲಿಗೆ ದೀರ್ಘಾವಧಿಯಲ್ಲಿ ಟಿಡಿಪಿಗೆ ಹೆಚ್ಚಿನ ಲಾಭವನ್ನು ತಂದುಕೊಡಲಿದೆ ಎಂದು ಅವರು ಚಿಂತಿತರಾಗಿದ್ದಾರೆ.

ಈ ಸಂಬಂಧ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಆಂಧ್ರ ಪ್ರದೇಶದ ರಾಜ್ಯ ಸಮಿತಿಯ ಒಂಬತ್ತು ಪದಾಧಿಕಾರಿಗಳು ಪತ್ರವನ್ನು ಬರೆದಿದ್ದಾರೆ. ‘ಆಂಧ್ರ ಪ್ರದೇಶದ ಲಕ್ಷಗಟ್ಟಲೆ ಕಾರ್ಯಕರ್ತರ ಧ್ವನಿ’ ಎಂದು ಅದರಲ್ಲಿ ನಮೂದಿಸಲಾಗಿದೆ.

‘ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ನಮಗೆ ಹಂಚಿಕೆಯಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಅಥವಾ ಟಿಡಿಪಿಗೆ ಗೆಲ್ಲುವ ಅವಕಾಶಗಳಿಲ್ಲ. ಟಿಡಿಪಿಯು ಈ ಸ್ಥಾನಗಳನ್ನು ಬಿಜೆಪಿಗೆ ಹಂಚಿಕೆ ಮಾಡುವ ಮೂಲಕ ಮತ್ತೊಮ್ಮೆ ಬೆನ್ನಿಗೆ ಇರಿದಿದೆ. ಈ ಕ್ಷೇತ್ರಗಳಲ್ಲಿ ಹಿಂದೆ ಎಂದೂ ಟಿಡಿಪಿ ಗೆದ್ದಿಲ್ಲ. ಅಂತಹ ದುರ್ಬಲ ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿಗೆ ನೀಡಲಾಗಿದೆ. ಬಿಜೆಪಿ ಅಭ್ಯರ್ಥಿಗಳ ಆಯ್ಕೆಯ ಹಿಂದೆ ಟಿಡಿಪಿ ಕೈವಾಡವಿದೆ ಎಂಬ ಶಂಕೆಯಿದೆ. ಮೈತ್ರಿಯನ್ನು ಮೊದಲೇ ನಿರೀಕ್ಷಿಸಿ, ಗುಪ್ತ ಕಾರ್ಯಸೂಚಿಯೊಂದಿಗೆ ಟಿಡಿಪಿ ತನ್ನ ನಾಯಕರನ್ನು ಬಿಜೆಪಿಗೆ ಪಕ್ಷಾಂತರಿಸಿದೆ. ಈ ಮೂಲಕ ಅದು ತನ್ನ ಕಾರ್ಯಕರ್ತರನ್ನು ತೃಪ್ತಿಪಡಿಸುವ ಮತ್ತು ಬಿಜೆಪಿ ಕಾರ್ಯಕರ್ತರನ್ನು ಹಾನಿಗೊಳಿಸುವ ಕಾರ್ಯ ನಿರ್ವಹಿಸಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT