ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪ್ರಣಾಳಿಕೆಯು ವಾಕ್ಚಾತುರ್ಯದಿಂದ ಕೂಡಿದ 'ಸುಳ್ಳಿನ ಪತ್ರ': ಕಾಂಗ್ರೆಸ್

Published 14 ಏಪ್ರಿಲ್ 2024, 10:03 IST
Last Updated 14 ಏಪ್ರಿಲ್ 2024, 10:03 IST
ಅಕ್ಷರ ಗಾತ್ರ

ನವದೆಹಲಿ/ಲಖನೌ: ಬಿಜೆಪಿಯ ಪ್ರಣಾಳಿಕೆಯನ್ನು ವಾಕ್ಚಾತುರ್ಯದಿಂದ ಕೂಡಿದ ‘ಜುಮ್ಲಾ (ಸುಳ್ಳಿನ) ಪತ್ರ’ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಬಗ್ಗೆ ‘ಎಕ್ಸ್‌’ ವೇದಿಕೆಯಲ್ಲಿ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪ್ರಧಾನಿ ಮೋದಿಯವರು ಈ ಹಿಂದೆ ಭರವಸೆ ನೀಡಿದಂತೆ ಉದ್ಯೋಗ ಸೃಷ್ಟಿ, ಕೃಷಿಕರ ಆದಾಯ ದ್ವಿಗುಣಗೊಳಿಸುವುದು, ಬೆಲೆ ಏರಿಕೆ, ಹಣದುಬ್ಬರ ನಿರ್ವಹಿಸುವುದರಲ್ಲಿ ವಿಫಲರಾಗಿದ್ದು, ಈಗ 2047ರ ಬಗ್ಗೆ ಮಾತನಾಡುವ ಮೂಲಕ ತಮ್ಮ ಗುರಿಗಳನ್ನು ಬದಲಾಯಿಸಿಕೊಂಡಿದ್ದಾರೆ’ ಎಂದು ಟೀಕಿಸಿದ್ದಾರೆ.

ಇಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ‘2014ರ ಪ್ರಣಾಳಿಕೆಯಲ್ಲಿ ವಿಶೇಷ ಕಾರ್ಯಪಡೆ ರಚಿಸಿ ಕಪ್ಪು ಹಣ ವಾಪಸ್ ತರುವುದಾಗಿ ಮೋದಿ ಭರವಸೆ ನೀಡಿದ್ದರು. ಅದರ ಬದಲು ಚುನಾವಣಾ ಬಾಂಡ್‌ಗಳು ಬಂದವು. ಈಶಾನ್ಯ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವುದಾಗಿ ಅವರು ಭರವಸೆ ನೀಡಿದ್ದರು. ಆದರೆ, ಈಗ ಮಣಿಪುರದಲ್ಲಿ ಹಿಂಸಾಚಾರ ಮುಂದುವರೆಯುತ್ತಿದ್ದು, ಅದರ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ’ ಎಂದು ಟೀಕಿಸಿದ್ದಾರೆ.

‌ಬಿಜೆಪಿಯ ‘ಸಂಕಲ್ಪ ಪತ್ರ’ ಹೆಸರಿಗೆ ನಮ್ಮ ಬಲವಾದ ಆಕ್ಷೇಪಣೆ ಇದ್ದು, ಅದನ್ನು ‘ಮಾಫಿನಾಮಾ’ (ಕ್ಷಮಾಪಣಾ ಪತ್ರ) ಎಂದು ಕರೆಯಬೇಕು. ಮೋದಿಜಿ ದೇಶದ ದಲಿತರ, ರೈತರ, ಯುವಜನರ ಮತ್ತು ಆದಿವಾಸಿಗಳ ಕ್ಷಮೆ ಕೇಳಬೇಕು’ ಎಂದು ಪವನ್ ಖೇರಾ ಹೇಳಿದ್ದಾರೆ.

ಬಿಜೆಪಿಯ ಪ್ರಣಾಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್, ‘ಹತ್ತು ವರ್ಷದ ಆಡಳಿತದ ನಂತರ ಮೋದಿ ಜನರನ್ನು ಮೋಸಗೊಳಿಸಲು ಆರಂಭಿಸಿದ್ದಾರೆ. 25 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದೇವೆ ಎನ್ನುವ ಅವರ ಹೇಳಿಕೆ ಪೊಳ್ಳಾಗಿದ್ದು, ಅದನ್ನು ಯಾವುದೇ ಮೂರನೇ ವ್ಯಕ್ತಿ ಖಚಿತಪಡಿಸಿಲ್ಲ. ಸತ್ಯ ಏನು ಅಂದರೆ, ದೇಶದಲ್ಲಿ ಪ್ರತಿ ಗಂಟೆಗೆ ಇಬ್ಬರು ರೈತರು ಮತ್ತು ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

‘ಅತಿ ಹೆಚ್ಚು ನಿರುದ್ಯೋಗ ಇರುವ ದೇಶದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಕೇವಲ ಎರಡು ಬಾರಿ ಮಾತ್ರ ಉದ್ಯೋಗದ ಪ್ರಸ್ತಾಪ ಬರುತ್ತದೆ. ಅದರಲ್ಲಿ ಎಂಎಸ್‌ಪಿಗೆ ಕಾನೂನಿನ ಖಾತರಿಯ ಬಗ್ಗೆ ಪ್ರಸ್ತಾಪ ಇಲ್ಲ. ಮಣಿಪುರ, ಚೀನಾದ ಪ್ರಸ್ತಾಪವೂ ಇಲ್ಲ’ ಎಂದು ಅವರು ಆರೋಪಿಸಿದ್ದಾರೆ.

‘ಸುಳ್ಳುಗಳ ವಿಶ್ವದಾಖಲೆ’

ಲಖನೌ: ಸಮಾಜವಾದಿ ಪಕ್ಷ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಬಿಜೆಪಿ ಪ್ರಣಾಳಿಕೆಯು ‘ಸುಳ್ಳುಗಳ ವಿಶ್ವ ದಾಖಲೆಯನ್ನು ಮುರಿಯುತ್ತದೆ’ ಎಂದು ಲೇವಡಿ ಮಾಡಿದ್ದಾರೆ.  ‘ಬಿಜೆಪಿಗೆ ಧೈರ್ಯವಿದ್ದರೆ ತಮ್ಮ 2014 ಮತ್ತು 2019ರ ಪ್ರಣಾಳಿಕೆಗಳಲ್ಲಿ ಯಾವ ಭರವಸೆಗಳನ್ನು ಈಡೇರಿಸಿದ್ದೇವೆ ಎನ್ನುವುದನ್ನು ಹೇಳಲಿ. ಕಳೆದ ಹತ್ತು ವರ್ಷಗಳಲ್ಲಿ ಯಾವ ಭರವಸೆಯನ್ನೂ ಈಡೇರಿಸದವರು ಭವಿಷ್ಯದ ಗ್ಯಾರಂಟಿ ನೀಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT