ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲೇಶ್ ಹೋದಲ್ಲೆಲ್ಲ ಬಿಜೆಪಿ, ಎನ್‌ಡಿಎಗೆ ಜಯ: ಉತ್ತರ ಪ್ರದೇಶ ಡಿಸಿಎಂ ಮೌರ್ಯ

Published 8 ಏಪ್ರಿಲ್ 2024, 5:04 IST
Last Updated 8 ಏಪ್ರಿಲ್ 2024, 5:04 IST
ಅಕ್ಷರ ಗಾತ್ರ

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೋದ ಕಡೆಯಲ್ಲೆಲ್ಲ ಬಿಜೆಪಿ ಅಥವಾ ಅದರ ಮಿತ್ರ ಪಕ್ಷಗಳು ಗೆಲುವು ಸಾಧಿಸಿವೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಹೇಳಿದ್ದಾರೆ.

ಗಾಜಿಪುರ ಜಿಲ್ಲೆಯ ಯೂಸುಫ್‌ಪುರದಲ್ಲಿರುವ, ಇತ್ತೀಚೆಗೆ ಮೃತಪಟ್ಟ ಗ್ಯಾಂಗ್‌ಸ್ಟರ್–ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಪೂರ್ವಜರ ಮನೆಗೆ ಅಖಿಲೇಶ್‌ ಭಾನುವಾರ ಭೇಟಿ ನೀಡಿದ್ದರು.

ಈ ಕುರಿತು ಮಾತನಾಡಿರುವ ಮೌರ್ಯ, ಯಾದವ್‌ ಅವರಿಗೆ ಕ್ರಿಮಿನಲ್‌ಗಳೊಂದಿಗೆ 'ಸಂಬಂಧ' ಇದ್ದರೆ, ಬಿಜೆಪಿಗೆ 'ಹಗೆತನ' ಇದೆ ಎಂದಿದ್ದಾರೆ.

'ಘೋಷಿ' ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿರುವ ಎನ್‌ಡಿಎ ಮೈತ್ರಿಕೂಟದ 'ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷ'ದ (ಎಸ್‌ಬಿಎಸ್‌ಪಿ) ಅರವಿಂದ್‌ ರಾಜ್‌ಭರ್ ಪರ ಸಾಮಾಜಿಕ ಮಾಧ್ಯಮದ ಮೂಲಕ ಪ್ರಚಾರದಲ್ಲಿ ಪಾಲ್ಗೊಂಡ ಮೌರ್ಯ, 'ಅಖಿಲೇಶ್‌ ಎಲ್ಲಿಗೆ ಭೇಟಿ ನೀಡುತ್ತಾರೋ, ಅಲ್ಲೆಲ್ಲ ಕಮಲ ಅರಳಿದೆ ಅಥವಾ ಅದರ ಮೈತ್ರಿಕೂಟ ಜಯ ಸಾಧಿಸಿದೆ' ಎಂದು ಹೇಳಿದ್ದಾರೆ.

ಬಾಂಡಾ ಜೈಲಿನಲ್ಲಿದ್ದ ಅನ್ಸಾರಿ, ಬಾಂಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾರ್ಚ್‌ 28ರಂದು ಮೃತಪಟ್ಟರು. ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

'ಅನ್ಸಾರಿಗೆ ನಿಧಾನವಾಗಿ ಪ್ರಭಾವ ಬೀರುವ ವಿಷ ನೀಡಲಾಗಿದೆ' ಎಂದು ಅವರ ಕುಟುಂಬದವರು ಆರೋಪಿಸಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಅಖಿಲೇಶ್‌ ಒತ್ತಾಯಿಸಿದ್ದರು.

ಇದನ್ನು ಉಲ್ಲೇಖಿಸಿರುವ ಮೌರ್ಯ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

'ಉತ್ತರ ಪ್ರದೇಶವನ್ನು ನಾವು ಮಾಫಿಯಾ ಮುಕ್ತವಾಗಿಸಿದ್ದೇವೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಲಾಗಿದೆ' ಎಂದು ಪ್ರತಿಪಾದಿಸಿದ್ದಾರೆ.

'ಎಸ್‌ಪಿ ಎಂದರೆ ಗೂಂಡಾಗಿರಿ, ಎಸ್‌ಪಿ ಎಂದರೆ ಅಪರಾಧ, ಎಸ್‌ಪಿ ಎಂದರೆ ಮಾಫಿಯಾ, ಎಸ್‌ಪಿ ಎಂದರೆ ಗಲಭೆ, ಎಸ್‌ಪಿ ಎಂದರೆ ಬಡವರ ಭೂಮಿ ಕಸಿಯುವುದು ಎಂದರ್ಥ' ಎಂದು ವಾಗ್ದಾಳಿ ನಡೆಸಿದ್ದಾರೆ.

'ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ವಿರೋಧ ಪಕ್ಷಗಳು ನಿತ್ಯವೂ ಬದಲಿಸುತ್ತಲೇ ಇವೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್‌ಗೆ ಇದುವರೆಗೆ ಸಾಧ್ಯವಾಗಿಲ್ಲ' ಎಂದೂ ತಿವಿದಿದ್ದಾರೆ.

ಏಳು ಹಂತದಲ್ಲಿ ಮತದಾನ
ಲೋಕಸಭೆ ಚುನಾವಣೆಯ ಏಳೂ ಹಂತಗಳಲ್ಲಿ ಮತದಾನ ನಡೆಯಲಿರುವ ಮೂರು ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು. ಮೊದಲ ಹಂತದಲ್ಲಿ ಇಲ್ಲಿನ 8 ಕ್ಷೇತ್ರಗಳಿಗೆ ಏಪ್ರಿಲ್‌ 19ರಂದು ಮತದಾನ ನಡೆಯಲಿದೆ.

ಈ ಚುನಾವಣೆಗೂ ಮುನ್ನ ಮತ್ತೆ ಒಂದಾಗಿರುವ ಕಾಂಗ್ರೆಸ್, ಎಸ್‌ಪಿ  ಹಾಗೂ ತೃಣಮೂಲ ಕಾಂಗ್ರೆಸ್‌ ಜೊತೆಯಾಗಿ ಚುನಾವಣೆ ಎದುರಿಸಲು ಸಜ್ಜಾಗಿವೆ. ಇಲ್ಲಿನ 80 ಕ್ಷೇತ್ರಗಳ ಪೈಕಿ 62ರಲ್ಲಿ ಎಸ್‌ಪಿ, 17 ಕಡೆ ಕಾಂಗ್ರೆಸ್‌ ಹಾಗೂ ಒಂದು ಕ್ಷೇತ್ರದಲ್ಲಿ ಟಿಎಂಸಿ ಕಣಕ್ಕಿಳಿಯಲಿದೆ.

ಎನ್‌ಡಿಯ ಮೈತ್ರಿಕೂಟದ ಬಹುದೊಡ್ಡ ಪಕ್ಷವಾಗಿರುವ ಬಿಜೆಪಿ 74 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದೆ. ಉಳಿದಂತೆ ಅಪ್ನಾ ದಳ ಹಾಗೂ ರಾಷ್ಟ್ರೀಯ ಲೋಕ ದಳ ತಲಾ ಎರಡು ಕಡೆ ಸ್ಪರ್ಧಿಸುತ್ತಿವೆ. ಎನ್‌ಐಎಸ್‌ಎಚ್‌ಎಡಿ, ಎಸ್‌ಬಿಎಸ್‌ಪಿ ಒಂದೊಂದು ಕಡೆ ಅಖಾಡಕ್ಕಿಳಿಯಲಿವೆ.

ಜೂನ್‌ 4ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT