ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರು ವಿರೋಧಿಸುತ್ತಿರುವ ಅಗ್ನಿಪಥ್ ಯೋಜನೆಯನ್ನು ಮೋದಿ ಹಿಂಪಡೆಯುವರೇ?: ಕಾಂಗ್ರೆಸ್

Published 24 ಮೇ 2024, 6:37 IST
Last Updated 24 ಮೇ 2024, 6:37 IST
ಅಕ್ಷರ ಗಾತ್ರ

ನವದೆಹಲಿ: ಅಗ್ನಿಪಥ್‌ ಸೇನಾ ನೇಮಕಾತಿ ಯೋಜನೆಯನ್ನು ಹಿಮಾಚಲ ಪ್ರದೇಶದ ಜನರು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಆ ಯೋಜನೆಯನ್ನು ಹಿಂಪಡೆಯುವರೇ ಎಂದು ಕಾಂಗ್ರೆಸ್‌ ಶುಕ್ರವಾರ ಕೇಳಿದೆ.

ಲೋಕಸಭೆ ಚುನಾವಣೆಯ ಕೊನೇ ಹಂತದ (ಜೂನ್‌ 1) ಮತದಾನಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಹಿಮಾಚಲ ಪ್ರದೇಶದಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಅವರು ಸರಣಿ ಪ್ರಶ್ನೆಗಳನ್ನು ಎಸೆದಿದ್ದಾರೆ.

'ಹಿಮಾಚಲ ಸರ್ಕಾರವನ್ನು ಉರುಳಿಸುವ ಸಲುವಾಗಿ ಬಿಜೆಪಿ ಎಷ್ಟು ಖರ್ಚು ಮಾಡಿತು? ಲೋಕಸಭೆ ಚುನಾವಣೆ ಬಳಿಕ ನಿರ್ಗಮಿಸಲಿರುವ ಪ್ರಧಾನಿ ಅಗ್ನಿಪಥ್‌ ಯೋಜನೆಯನ್ನು ಹಿಂಪಡೆಯುವರೇ? ಮೋದಿ ಸರ್ಕಾರ ರಾಜ್ಯಕ್ಕೆ ರೈಲ್ವೆ ಯೋಜನೆಗಳನ್ನು ನೀಡಲಿಲ್ಲವೇಕೆ? ರಾಜ್ಯದಲ್ಲಿ 2023ರಲ್ಲಿ ಸಂಭವಿಸಿದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಮೋದಿ ಏಕೆ ಘೋಷಿಸಲಿಲ್ಲ?' ಎಂದು ಕೇಳಿದ್ದಾರೆ.

ಬಿಜೆಪಿಯು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನಿರ್ಲಕ್ಷಿಸುತ್ತಿರುವುದು ಹಿಮಾಚಲ ಪ್ರದೇಶದಲ್ಲಿ ಜಗಜ್ಜಾಹೀರಾಗಿದೆ ಎಂದೂ ಹೇಳಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಹಣಕಾಸು ಮಸೂದೆ ಮಂಡನೆಗೆ ಸರ್ಕಾರದ ಪರ ಮತದಾನ ಮಾಡಬೇಕೆಂಬ ಕಾಂಗ್ರೆಸ್‌ ಪಕ್ಷದ ವಿಪ್ ಉಲ್ಲಂಘಿಸಿದ್ದ ಆರೋಪದಲ್ಲಿ ಆರು ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಹೀಗಾಗಿ ತೆರವಾಗಿರುವ ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅನರ್ಹರನ್ನೇ ತನ್ನ ಅಭ್ಯರ್ಥಿಗಳೆಂದು ಬಿಜೆಪಿ ಕಣಕ್ಕಿಳಿಸಿರುವುದು ನಾಚಿಕೆಗೇಡು ಎಂದು ಜೈರಾಮ್ ರಮೇಶ್‌ ಗುಡುಗಿದ್ದಾರೆ.

ಕಾಂಗ್ರೆಸ್‌ ಶಾಸಕರಾಗಿದ್ದ ಸುಧೀರ್‌ ಶರ್ಮಾ, ರವಿ ಠಾಕೂರ್, ರಾಜೀಂದರ್ ರಾಣಾ, ಇಂದೇರ್ ದತ್ ಲಖನ್‌ಪಾಲ್, ಚೇತನ್ಯ ಶರ್ಮಾ ಮತ್ತು ದೇವಿಂದರ್‌ ಕುಮಾರ್‌ ಭುಟ್ಟೊ ಅವರು ವಿಪ್‌ ಉಲ್ಲಂಘಿಸಿದ್ದಷ್ಟೇ ಅಲ್ಲದೆ, ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು.

ಆಪರೇಷನ್ ಕಮಲ ವಿಚಾರವಾಗಿ ಬಿಜೆಪಿ ವಿರುದ್ಧ ಚಾಟಿ ಬೀಸಿರುವ ಜೈರಾಮ್ ರಮೇಶ್‌, 'ಹತ್ತು ವರ್ಷಗಳ ಆಡಳಿತದಲ್ಲಿ ಬಿಜೆಪಿಯು ಕೊಳಕು ರಾಜಕೀಯ ನಡೆಸಿದೆ ಎಂಬುದು ಸ್ಪಷ್ಟವಾಗಿದೆ. ಗೋವಾದಿಂದ ಸಿಕ್ಕಿಂ ವರೆಗೆ, ಮಹಾರಾಷ್ಟ್ರದಿಂದ ಕರ್ನಾಟಕದ ವರೆಗೆ, ಇದೀಗ ಹಿಮಾಚಲ ಪ್ರದೇಶ – ಯಾವ ರಾಜ್ಯವೂ ಬಿಜೆಪಿಯ ಕೈವಾಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ' ಎಂದು ಆರೋಪಿಸಿದ್ದಾರೆ.

'ಚುನಾವಣಾ ಬಾಂಡ್‌'ಗಳ ಮೂಲಕ ಗಳಿಸಿರುವ ಅಕ್ರಮ ಹಣವನ್ನು ಬಿಜೆಪಿಯು ದೇಶದ ಉದ್ದಗಲಕ್ಕೂ ಇರುವ ಸರ್ಕಾರಗಳನ್ನು ಉರುಳಿಸಲು ಬಳಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

ಹಿಮಾಚಲ ಸರ್ಕಾರವನ್ನು ಉರುಳಿಸಲು ಬಿಜೆಪಿ ಕಸರತ್ತು ನಡೆಸಿದೆ ಎಂದಿರುವ ಅವರು, 'ಪಕ್ಷಾಂತರ ಮಾಡಲು ಪ್ರತಿಯೊಬ್ಬ ಶಾಸಕರಿಗೆ ಎಷ್ಟು ನೀಡಿದ್ದೀರಿ. ನಿರ್ಗಮಿಸಲಿರುವ ಪ್ರಧಾನಿ ಅವರು ಭಾರತ 'ಪ್ರಜಾಪ್ರಭುತ್ವದ ತಾಯಿ' ಎಂದು ಹೆಮ್ಮೆಯಿಂದ ಹೇಳುತ್ತಾರೆ. ತಮ್ಮ ಇಬ್ಬಗೆಯ ನೀತಿ ಮತ್ತು ವಂಚನೆಯ ಪರ ಭಾರತಮಾತೆ ನಿಜವಾಗಿಯೂ ನಿಲ್ಲುತ್ತಾಳೆ ಎಂದು ಅವರು ಅಂದುಕೊಂಡಿದ್ದಾರೆಯೇ?' ಎಂದು ಪ್ರಶ್ನಿಸಿದ್ದಾರೆ.

'ಆರು ತಿಂಗಳೊಳಗೆ ಯುವ ಸೈನಿಕರನ್ನು ಯುದ್ಧಕ್ಕೆ ಸಜ್ಜಾಗಿಸುವ ಅವಾಸ್ತವಿಕ ಯೋಜನೆಯನ್ನು ನಾವೆಲ್ಲ ಉಪೇಕ್ಷಿಸಿದರೂ, ಇದು ದೀರ್ಘಾವಧಿಯ ಉದ್ಯೋಗ ಆಕಾಂಕ್ಷಿಗಳ ಮೇಲೆ ಉಂಟುಮಾಡುವ ಪ್ರಭಾವವನ್ನು ನಿರ್ಲಕ್ಷಿಸಲು ಸಾಧ್ಯವೇ? ಸೇನೆಯಲ್ಲಿ ನಾಲ್ಕು ವರ್ಷಗಳ ಅವಧಿ ಮುಗಿಸಿ ಹೊರ ಬರುವ ಯುವಕರು ಎಲ್ಲಿಗೆ ಹೋಗಬೇಕು' ಎಂದು ಕೇಳಿದ್ದಾರೆ

ಹಿಮಾಚಲ ಪ್ರದೇಶದ 4 ಲೋಕಸಭಾ ಕ್ಷೇತ್ರಗಳು ಹಾಗೂ 6 ವಿಧಾನಸಭಾ ಕ್ಷೇತ್ರಗಳಿಗೆ ಜೂನ್‌ 1ರಂದು ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT