ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ವಿರುದ್ಧ ಒಗ್ಗಟ್ಟಿನ ಕಾರ್ಯತಂತ್ರ: ಡಿ.ಕೆ. ಶಿವಕುಮಾರ್‌

‘ಇಂಡಿಯಾ’ ಒಕ್ಕೂಟದ ರಾಜ್ಯದ ಮಿತ್ರ ಪಕ್ಷಗಳ ಮುಖಂಡರ ಸಭೆ
Published 2 ಏಪ್ರಿಲ್ 2024, 15:27 IST
Last Updated 2 ಏಪ್ರಿಲ್ 2024, 15:27 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ‘ಕೋಮುವಾದಿ ಸರ್ವಾಧಿಕಾರದ ವಿರುದ್ಧ ಪ್ರಜಾಪ್ರಭುತ್ವ’ ಘೋಷಣೆಯಡಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ, ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕ್ವೀನ್ಸ್ ರಸ್ತೆಯಲ್ಲಿರುವ ‘ಭಾರತ್‌ ಜೋಡೊ’ ಭವನದಲ್ಲಿ ಮಂಗಳವಾರ ನಡೆದ ‘ಇಂಡಿಯಾ’ ಒಕ್ಕೂಟದಲ್ಲಿರುವ ರಾಜ್ಯದ ಮಿತ್ರ ಪಕ್ಷಗಳ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಆದರೆ, ಇತರ ಸಮೀಕ್ಷೆಗಳ ಪ್ರಕಾರ 28 ಸ್ಥಾನಗಳನ್ನೂ ಗೆಲ್ಲುತ್ತೇವೆ’ ಎಂದರು.

‘‌ಸುಮಾರು 10 ಪಕ್ಷಗಳು ಒಟ್ಟಿಗೆ ಸೇರಿ ಚುನಾವಣೆ ಎದುರಿಸುವ ಕುರಿತು ಚರ್ಚಿಸಿದ್ದೇವೆ. ಎಲ್ಲ ಮಿತ್ರ ಪಕ್ಷಗಳನ್ನು ಸೇರಿಸಿ ಸಮನ್ವಯ ಸಮಿತಿ ರಚಿಸಲಾಗುವುದು. ಚುನಾವಣೆ ಮುಗಿಯುವವರೆಗೆ ಪ್ರತಿ ಮೂರು ದಿನಕ್ಕೊಮ್ಮೆ ಅಥವಾ ವಾರಕ್ಕೊಮ್ಮೆ ಸಭೆ ಸೇರಲಾಗುವುದು. ಪ್ರತಿ ಕ್ಷೇತ್ರಗಳಲ್ಲೂ ಬೆಂಬಲ ನೀಡುತ್ತೇವೆಂದು ಎಲ್ಲ ಮಿತ್ರ ಪಕ್ಷಗಳು ಲಿಖಿತವಾಗಿ ಬರೆದುಕೊಟ್ಟಿವೆ’ ಎಂದರು.

‘2019‌ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್– ಜೆಡಿಎಸ್‌ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದೆವು. ತುಮಕೂರಿನಲ್ಲಿ ನಮ್ಮ ಅಭ್ಯರ್ಥಿಯಾಗಿದ್ದ ಎಚ್‌.ಡಿ. ದೇವೇಗೌಡರು 12 ಸಾವಿರ ಮತಗಳಿಂದ ಸೋಲು ಕಂಡಿದ್ದರು. ಅಲ್ಲಿ ಸಿಪಿಐ ಅಭ್ಯರ್ಥಿ 17 ಸಾವಿರ ಮತ ಗಳಿಸಿದ್ದರು. ಈ ರೀತಿಯ ಮತ ವಿಂಗಡಣೆ ಆಗಬಾರದು ಎನ್ನುವುದು ನಮ್ಮೆಲ್ಲರ ಉದ್ದೇಶ. ಎಲ್ಲರೂ ಒಟ್ಟಾಗಿ ಎನ್‌ಡಿಎ ಸೋಲಿಸಬೇಕು ಎಂಬುದು ನಮ್ಮ ಏಕೈಕ ಗುರಿ’ ಎಂದರು.

‘ವಿರೋಧ ಪಕ್ಷಗಳ ನಾಯಕರ ಮೇಲೆ ಕೇಂದ್ರ ಸರ್ಕಾರ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ.  ಇದನ್ನು ನಾವೆಲ್ಲರೂ ಬಲವಾಗಿ ಖಂಡಿಸುತ್ತೇವೆ. ಬೂತ್ ಮಟ್ಟದಿಂದ ಒಟ್ಟಿಗೆ ಕೆಲಸ ಮಾಡುತ್ತೇವೆ. ಮಿತ್ರ ಪಕ್ಷಗಳು ಅಧಿಕಾರದಲ್ಲಿ ಇಲ್ಲದೇ ಇರಬಹುದು. ಆದರೆ, ಮಿತ್ರ ಪಕ್ಷಗಳ ತತ್ವ, ಸಿದ್ಧಾಂತ, ಬದ್ದತೆ ಮುಖ್ಯ. ನಾವೆಲ್ಲ ಈ ಹಿಂದೆ ಅನೇಕ ಚುನಾವಣೆಗಳನ್ನು ಬೇರೆ, ಬೇರೆಯಾಗಿ ಎದುರಿಸಿದ್ದೇವೆ. ಆದರೆ, ಇಂದು ಪ್ರಜಾಪ್ರಭುತ್ವದ ಉಳಿವಿಗೆ ಒಂದಾಗಿದ್ದೇವೆ’ ಎಂದರು.

ಒಂದೊಂದು ಮತವೂ ಮುಖ್ಯ: ‘ಇಂಡಿಯಾ’ ಒಕ್ಕೂಟದಿಂದ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಲಾಭ ಆಗಲಿದೆಯೇ’ ಎಂಬ ಪ್ರಶ್ನೆಗೆ, ‘ಎಲ್ಲ 28 ಕ್ಷೇತ್ರಗಳಲ್ಲೂ ಅನುಕೂಲವಾಗಲಿದೆ. ರಾಜಕಾರಣದಲ್ಲಿ 49 ಎಂದರೆ ಸೊನ್ನೆ, 51 ಎಂದರೆ ನೂರು ಎಂದರ್ಥ. ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಧ್ರುವನಾರಾಯಣ್ 1 ಮತದಿಂದ ಗೆದ್ದಿದ್ದರು. ದಿನೇಶ್ ಗುಂಡೂರಾವ್ ಅಲ್ಪ ಮತಗಳ ಅಂತರದಲ್ಲೇ ಗೆದ್ದರು. ಸೌಮ್ಯಾ ರೆಡ್ಡಿ 16 ಮತಗಳಿಂದ ಸೋತರು. ಹೀಗಾಗಿ ಒಂದೊಂದು ಮತವೂ ಮುಖ್ಯ’ ಎಂದರು.

ಸಭೆಯಲ್ಲಿ ಸಚಿವ ಡಾ ಎಂ.ಸಿ.ಸುಧಾಕರ್, ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ಸಹ ಅಧ್ಯಕ್ಷರಾದ ಐಶ್ವರ್ಯ ಮಹದೇವ್ ಕೂಡಾ ಇದ್ದರು.

‘ಒಗ್ಗಟ್ಟಿನಿಂದ ಹೋರಾಟ’

ಮಿತ್ರ ಪಕ್ಷಗಳ ಪರವಾಗಿ ಮಾತನಾಡಿದ ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ‘ದೇಶ ಇಕ್ಕಟ್ಟು ಮತ್ತು ಬಿಕ್ಕಟ್ಟಿನಲ್ಲಿ ಸಿಲುಕಿದೆ. ಬಿಜೆಪಿ ಆಡಳಿತ ವೈಖರಿ ನೋಡಿದರೆ ಭಯದ ವಾತಾವರಣವಿದೆ. ಹೀಗಾಗಿ ಈ ಬಾರಿ ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ’ ಎಂದರು. ‘ಚುನಾವಣಾ ಬಾಂಡ್ ವಿಚಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ದೇಶದ ವಿವಿಧತೆ ಸರ್ವನಾಶ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಎಲ್ಲರಿಗೂ ಬೆದರಿಕೆ ಹಾಕುತ್ತಿದ್ದಾರೆ. ಮೋದಿ ವಿನಾಶ‌ ಕಾಲದ ಕುರುಹು ಆಗಿದ್ದಾರೆ. ನಾವು ಸರ್ವಾಧಿಕಾರ ತೊಲಗಿಸಿ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡುತ್ತೇವೆ. ಬಿಜೆಪಿಯವರೇ ಅಧಿಕಾರ ಬಿಟ್ಟು ತೊಲಗಿ ಎಂದು ಹೇಳಬೇಕಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT