ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಪ್ರತಿ ಸ್ಪರ್ಧಿಗಳ ಮೇಲೆ ನಿಗಾ, ಪತ್ತೆದಾರರಿಗೆ ಹೆಚ್ಚಿದ ಬೇಡಿಕೆ

ಆರ್‌ಟಿಐ, ಚುನಾವಣಾ ಸಮೀಕ್ಷೆ, ವಿಶ್ಲೇಷಣಾ ಕಾರ್ಯಗಳ ನಿಯೋಜನೆ
Published 19 ಮಾರ್ಚ್ 2024, 15:38 IST
Last Updated 19 ಮಾರ್ಚ್ 2024, 15:38 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಕಾವು ಏರುತ್ತಿರುವ ಬೆನ್ನಲ್ಲೇ ರಾಜಕಾರಣಿಗಳು, ಮಹತ್ವಾಕಾಂಕ್ಷಿ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಳ ಮತ್ತು ಸಹೋದ್ಯೋಗಿಗಳ ಮೇಲೆ ಕಣ್ಗಾವಲಿಡಲು ಪತ್ತೆದಾರಿಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ,  ಪತ್ತೆದಾರಿ ಏಜೆನ್ಸಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ಪಕ್ಷಾಂತರಿಗಳು ಮತ್ತು ಭವಿಷ್ಯದಲ್ಲಿ ನಿಷ್ಠೆ ಬದಲಿಸುವ ಸಾಧ್ಯತೆ ಇರುವವರ ಮೇಲೆ ನಿಗಾ ಇಡುವ ಕಾರ್ಯವನ್ನು ರಾಜಕೀಯ ಪಕ್ಷಗಳು ಪತ್ತೆದಾರರಿಗೆ ವಹಿಸುತ್ತಿವೆ ಎಂದು ಈ ಕ್ಷೇತ್ರದ ತಜ್ಞರು ಹೇಳುತ್ತಾರೆ.

ದೆಹಲಿಯ ‘ಜಿಡಿಎಕ್ಸ್‌ ಡಿಟೆಕ್ಟಿವ್ಸ್‌ ಲಿಮಿಟೆಡ್‌‘ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಚಂದ್ರ ಶರ್ಮಾ ಅವರ ಪ್ರಕಾರ, ‘ಚುನಾವಣಾ ಸಮಯದಲ್ಲಿ ಸಹಜವಾಗಿಯೇ ರಾಜಕೀಯ ಬೇಹುಗಾರಿಕೆ ನಡೆಯುತ್ತದೆ. ಕ್ರಿಮಿನಲ್‌ ದಾಖಲೆಗಳು, ಹಗರಣಗಳು, ಅಕ್ರಮ ಸಂಬಂಧ ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೊಗಳು ಅಥವಾ ಚುನಾವಣಾ ಪ್ರಚಾರಗಳಿಗೆ ಸಂಬಂಧಿಸಿದ ತಂತ್ರಗಳ ಮಾಹಿತಿ ತಿಳಿದುಕೊಳ್ಳಲು ಪತ್ತೆದಾರರನ್ನು ನೇಮಿಸಿಕೊಳ್ಳುವುದು ಸಹಜ’ ಎಂದರು.

‘ಆದರೆ, ಈ ಬಾರಿ ಅಭ್ಯರ್ಥಿಗಳು ಮತ್ತು ರಾಜಕಾರಣಿಗಳು ತಮ್ಮ ಪ್ರತಿಸ್ಪರ್ಧಿಗಳ ಜೊತೆಗೆ, ತಮ್ಮ ಸಹಾಯಕರು ಮತ್ತು ಆಪ್ತರ ಮೇಲೂ ಕಣ್ಗಾವಲಿಡಲು ಬಯಸುತ್ತಿದ್ದಾರೆ’ ಎಂದು ತಿಳಿಸಿದರು.

‘ಚುನಾವಣಾ ದಿನಾಂಕ ಘೋಷಣೆಗೂ ಕೆಲ ತಿಂಗಳು ಮೊದಲಿನಿಂದಲೇ ರಾಜಕೀಯ ಪಕ್ಷಗಳು ಮತ್ತು ಆಕಾಂಕ್ಷಿ ಅಭ್ಯರ್ಥಿಗಳು ಪತ್ತೆದಾರರನ್ನು ನಿಯೋಜಿಸಿಕೊಂಡಿರುತ್ತಾರೆ. ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಅರ್ಜಿ ಸಲ್ಲಿಸುವುದೂ ಸೇರಿ ಹಲವು ಬಗೆಯ ಕಾರ್ಯಗಳನ್ನು ವಹಿಸಲಾಗುತ್ತಿದೆ’ ಎಂದು ಸಿಟಿ ಇಂಟಲಿಜೆನ್ಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಕುಮಾರ್‌ ಪ್ರತಿಕ್ರಿಯಿಸಿದರು.

‘ಆರ್‌ಟಿಐಗಳ ಮೂಲಕ ಪಡೆಯುವ ಮಾಹಿತಿ ಚಿಕ್ಕದಿರಬಹುದು. ಆದರೆ ಅವುಗಳನ್ನು ಪಡೆಯಲು ಪತ್ತೆದಾರರನ್ನು ನಿಯೋಜಿಸಲಾಗುತ್ತಿದೆ. ಭವಿಷ್ಯದಲ್ಲಿ ಈ ಮಾಹಿತಿಯನ್ನು ಬಳಸಿಕೊಂಡು ರಾಜಕೀಯ ನಡೆಸುವ ಉದ್ದೇಶವನ್ನು ಕೆಲವರು ಹೊಂದಿದ್ದಾರೆ’ ಎಂದು ಅವರು ಹೇಳಿದರು.

ನಗದು, ಮದ್ಯ ಮೂಲ ಪತ್ತೆ ಕಾರ್ಯ: ‘ಬೂತ್‌ ಮಟ್ಟದ ದತ್ತಾಂಶಗಳಿಂದ ಹಿಡಿದು ಅಭ್ಯರ್ಥಿಗಳ ದೌರ್ಬಲ್ಯಗಳವರೆಗಿನ ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯ ವಹಿಸಲಾಗುತ್ತದೆ. ರಾಜಕೀಯ ಪಕ್ಷಗಳ ನಗದು ಮೂಲ, ಮದ್ಯದ ಮೂಲ ಮತ್ತು ಅವುಗಳನ್ನು ಸಂಗ್ರಹಿಸಿಡುವ ಸ್ಥಳಗಳು ಹಾಗೂ ಅವುಗಳನ್ನು ವಿತರಿಸುವ ವಿಧಾನಗಳನ್ನು ಪತ್ತೆ ಹಚ್ಚುವ ಕಾರ್ಯಗಳನ್ನೂ ವಹಿಸಲಾಗುತ್ತದೆ’ ಎಂದು ಅವರು ವಿವರಿಸಿದರು.

ನವದೆಹಲಿ ಮೂಲದ ಪತ್ತೇದಾರಿ ಏಜೆನ್ಸಿ ಸ್ಲೀತ್ಸ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ನಮನ್‌ ಜೈನ್‌ ಪ್ರಕಾರ, ‘ಇತ್ತೀಚಿನ ದಿನಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಖಾಸಗಿ ಪತ್ತೇದಾರಿ ಏಜೆನ್ಸಿಗಳ ಪಾತ್ರ ಗಣನೀಯ ಪ್ರಮಾಣದಲ್ಲಿ ವಿಕಸನಗೊಂಡಿದೆ. ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಕುರಿತು ಪೂರ್ಣ ಹಿನ್ನೆಲೆಯ ಪರಿಶೀಲನೆ ಮತ್ತು ನಿರ್ದಿಷ್ಟ ಕ್ಷೇತ್ರಗಳಲ್ಲಿ ತಮ್ಮ ಎದುರಾಳಿಗಳ ಜನಪ್ರಿಯತೆಯನ್ನು ತಿಳಿದುಕೊಳ್ಳುವ ಕಾರ್ಯಗಳನ್ನು ಪತ್ತೇದಾರರಿಗೆ ನೀಡುತ್ತಿವೆ’ ಎಂದರು. 

ಸಮೀಕ್ಷೆ, ಫಲಿತಾಂಶಗಳ ವಿಶ್ಲೇಷಣೆ: ‘ಸಮಗ್ರ ಸಮೀಕ್ಷೆಗಳನ್ನು ನಡೆಸಿ ಚುನಾವಣಾ ಫಲಿತಾಂಶಗಳನ್ನು ಊಹಿಸುವ ಕಾರ್ಯವನ್ನು ವಹಿಸಲಾಗುತ್ತಿದೆ. ನಿರ್ದಿಷ್ಟ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಜನಪ್ರಿಯತೆ ನಿರ್ಧರಿಸುವುದು, ಚುನಾವಣಾ ಫಲಿತಾಂಶಗಳಲ್ಲಿ ಅವರ ಯಶಸ್ಸಿನ ಸಾಧ್ಯತೆಗಳನ್ನು ವಿಶ್ಲೇಷಿಸುವ ಕೆಲಸಗಳನ್ನು ನೀಡಲಾಗುತ್ತಿದೆ’ ಎಂದು ಜೈನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT