ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೃದಯ ಮತ್ತು ರಕ್ತದಿಂದ ಸಂವಿಧಾನ ರಕ್ಷಣೆ: ರಾಹುಲ್ ಗಾಂಧಿ

ಉದ್ಯಮಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ ಅವರನ್ನು ದೇಶ ಎಂದಿಗೂ ಕ್ಷಮಿಸುವುದಿಲ್ಲ: ರಾಹುಲ್ ಗಾಂಧಿ
Published 28 ಮೇ 2024, 14:24 IST
Last Updated 28 ಮೇ 2024, 14:24 IST
ಅಕ್ಷರ ಗಾತ್ರ

ಬನ್ಸ್‌ಗಾಂವ್: ‘ಇಂಡಿಯಾ’ ಕೂಟವು ಅಧಿಕಾರಕ್ಕೆ ಬಂದರೆ, ಮೀಸಲಾತಿಯ ಮೇಲಿನ ಶೇ 50ರ ಮಿತಿಯನ್ನು ತೆಗೆದುಹಾಕುತ್ತೇವೆ ಮತ್ತು ಸಂವಿಧಾನವನ್ನು ಹೃದಯ, ಜೀವನ ಮತ್ತು ರಕ್ತದಿಂದ ರಕ್ಷಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರತಿಪಾದಿಸಿದರು.

ಮೀಸಲಾತಿಯ ಮಿತಿಯನ್ನು ತೆಗೆಯುವ ಬಗ್ಗೆ ಮಾತನಾಡಿದ ಅವರು, ‘ಛತ್ತೀಸಗಢ, ಮಧ್ಯಪ್ರದೇಶ ಹೀಗೆ ನಾವು ಅಧಿಕಾರ ನಡೆಸಿದ ಕಡೆಯಲ್ಲೆಲ್ಲ ಇದನ್ನು ಮಾಡಿದ್ದೇವೆ. ಮುಂದೆ ಇಡೀ ದೇಶದಲ್ಲಿ ಮಾಡುತ್ತೇವೆ’ ಎಂದರು.

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಅಖಿಲೇಶ್ ಯಾದವ್ ಅವರೊಂದಿಗೆ ಉತ್ತರ ಪ್ರದೇಶದ ಬನ್ಸ್‌ಗಾಂವ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ‘ಸಂವಿಧಾನ ಮತ್ತು ‘ಇಂಡಿಯಾ’ ಕೂಟ ಒಂದು ಕಡೆ ಇದ್ದರೆ, ಸಂವಿಧಾನವನ್ನು ಅಂತ್ಯಮಾಡಲು ಹೊರಟವರು ಇನ್ನೊಂದು ಕಡೆ ಇದ್ದಾರೆ’ ಎಂದು ಹೇಳಿದರು.

ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದು, ‘ಅಂಬೇಡ್ಕರ್ ಅವರು ತಮ್ಮ ಜೀವನವನ್ನು ಸಂವಿಧಾನಕ್ಕಾಗಿ ಮುಡಿಪಾಗಿಟ್ಟಿದ್ದರು’ ಎಂದು ರಾಹುಲ್ ನುಡಿದರು.

‘ಪ್ರಧಾನಿ ಮೋದಿ ಬಡವರ ಹಣ ಕಸಿದು ಶ್ರಿಮಂತರಿಗೆ ಕೊಟ್ಟರು. ಅವರು ಅದನ್ನು ವಿದೇಶಗಳಲ್ಲಿ ಹೂಡಿಕೆ ಮಾಡಿದರು. ಬೃಹತ್ ಉದ್ಯಮಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ ಅವರನ್ನು ದೇಶ ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ರಾಮ ಪ್ರಾಣ ಪ್ರತಿಷ್ಠಾಪನೆಗೆ ರಾಷ್ಟ್ರಪತಿ ಹಾಜರಾಗದೇ ಇದ್ದುದರ ಬಗ್ಗೆ ಮಾತನಾಡಿದ ರಾಹುಲ್, ‘ಅವರಿಗೆ ಬುಡಕಟ್ಟು ಮಹಿಳೆಯಾದ ನೀವು ಬರಬಾರದು, ನಿಮ್ಮ ಮುಖ ಕಾಣಬಾರದು’ ಎಂದು ಹೇಳಲಾಗುತ್ತು. ಆ ಸಮಾರಂಭದಲ್ಲಿ ಒಬ್ಬನೇ ಒಬ್ಬ ಹಿಂದುಳಿದ, ದಲಿತ, ಕಾರ್ಮಿಕ ಅಥವಾ ರೈತ ಕಾಣಲಿಲ್ಲ. ಆದರೆ, ಅಲ್ಲಿ ಅಂಬಾನಿ, ಅದಾನಿ ಇದ್ದರು’ ಎಂದು ಟೀಕಿಸಿದರು.

ತಮ್ಮ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ, ‘ಅಗ್ನಿಪಥ’ ಯೋಜನೆಯನ್ನು ಹರಿದು ಕಸದ ಬುಟ್ಟಿಗೆ ಎಸೆಯಲಾಗುವುದು ಎಂದು ತಿಳಿಸಿದರು.

ತನ್ನನ್ನು ದೇವರು ಕಳಿಸಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ದೇವರು ಅವರನ್ನು ಅದಾನಿ ಅವರಿಗೆ ಸಹಾಯ ಮಾಡಲು ಕಳಿಸಿದ್ದಾನೆ ಬಡವರಿಗಾಗಿ ಅಲ್ಲ. 

-ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT