ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೈತಿಕ ಸೋಲನ್ನು ಒಪ್ಪಿಕೊಂಡು ಪ್ರಧಾನಿ ಮೋದಿ ರಾಜೀನಾಮೆ ನೀಡಲಿ: ಮಮತಾ ಬ್ಯಾನರ್ಜಿ

Published 4 ಜೂನ್ 2024, 13:57 IST
Last Updated 4 ಜೂನ್ 2024, 13:57 IST
ಅಕ್ಷರ ಗಾತ್ರ

ಕೋಲ್ಕತ್ತ: ‘ನೈತಿಕ ಸೋಲನ್ನು ಒಪ್ಪಿಕೊಂಡು ಪ್ರಧಾನಿ ನರೇಂದ್ರ ಮೋದಿಯವರು ಈ ಕೂಡಲೇ ಹುದ್ದೆಗೆ ರಾಜೀನಾಮೆ ನೀಡಲಿ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಪ್ರಚಾರ ಮಾಡಿದರು. ಆದರೆ ವಾಸ್ತವದಲ್ಲಿ ಅದು ಸ್ವಂತವಾಗಿ ಬಹುಮತವನ್ನು ಪಡೆಯುವಲ್ಲಿ ವಿಫಲವಾಯಿತು. ಪ್ರಧಾನಿ ಮೋದಿ ಅವರು ಎಲ್ಲ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ, ಕೂಡಲೇ ರಾಜೀನಾಮೆ ನೀಡಬೇಕು. ಇಂಡಿಯಾ ಬಣ ಗೆದ್ದಿದೆ, ಮೋದಿ ಸೋತಿದ್ದಾರೆ. ಪ್ರಧಾನಿ ಅನೇಕ ಪಕ್ಷಗಳನ್ನು ಮುರಿದಿದ್ದಾರೆ. ಈಗ ಜನರು ಅವರ ನೈತಿಕತೆಯನ್ನು ಕಳೆದಿದ್ದಾರೆ. ಸರ್ಕಾರ ರಚಿಸಲು ಮೋದಿ ಈಗ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಕಾಲಿಗೆ ಬೀಳುತ್ತಿದ್ದಾರೆ’ ಎಂದು ಹೇಳಿದರು. 

‘ಕೇಂದ್ರೀಯ ಸಂಸ್ಥೆಗಳ ಮೇಲಿನ ದೌರ್ಜನ್ಯ ಮತ್ತು ದುರುಪಯೋಗ ಮಾಡಿಕೊಂಡಿದ್ದ ಪಕ್ಷ ಇಂದು ಸೋಲು ಕಂಡಿದೆ. ಕೇಂದ್ರೀಯ ಸಂಸ್ಥೆಗಳು ಮತ್ತು ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಬಳಸಿಕೊಂಡು ನಮ್ಮನ್ನು ಬೆದರಿಸುವ ಬಿಜೆಪಿಯನ್ನು ನಾವು ಬಿಡುವುದಿಲ್ಲ. ನಾವು ಅವರನ್ನು ಕ್ಷಮಿಸುವುದಿಲ್ಲ ಜತೆಗೆ ಇಂಡಿಯಾ ಬಣದ ಇತರ ಪಕ್ಷಗಳು ಕೂಡ ಕ್ಷಮಿಸುವುದಿಲ್ಲ’ ಎಂದರು. 

‘ನನ್ನ ಸೋದರಳಿಯ, ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನಾಳೆ (ಜೂ.4) ದೆಹಲಿಯಲ್ಲಿ ನಡೆಯಲಿರುವ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಅದರ ಬಗ್ಗೆ ತಮ್ಮ ಪಕ್ಷಕ್ಕೆ ಇನ್ನೂ ಮಾಹಿತಿ ನೀಡಿಲ್ಲ’ ಎಂದು ವಿಷಾದಿಸಿದರು.

‘ನಾನು ರಾಹುಲ್ ಅವರಿಗೆ ಅಭಿನಂದನೆಯ ಸಂದೇಶ ಕಳುಹಿಸಿದ್ದೇನೆ, ಬಹುಶಃ ಅವರು ಇತರ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಇನ್ನೂ ನಮ್ಮನ್ನು ಸಂಪರ್ಕಿಸಿಲ್ಲ, ಅವರು ಸಂಪರ್ಕ ಮಾಡಿದರೂ ಅಥವಾ ಮಾಡದಿದ್ದರೂ ಪರವಾಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT