ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಜಾಫರ್‌ ನಗರ: ಅಪ್ಪನ ಸೋಲಿಸಿದ್ದ ಬಾಲಿಯಾನ್‌ಗೆ ಮಗನೇ ಈಗ ‘ಸಂಜೀವಿನಿ’!

ಕೋಮು ಉತ್ಪಾತದ ಮುಜಾಫರ್‌ ನಗರದಲ್ಲೀಗ ಚುನಾವಣಾ ‘ಕಿಚ್ಚು’
Published 18 ಏಪ್ರಿಲ್ 2024, 23:58 IST
Last Updated 18 ಏಪ್ರಿಲ್ 2024, 23:58 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಲಾಗಾಯ್ತಿನಿಂದ ಹಿಂದೂ–ಮುಸ್ಲಿಂ ಸ್ನೇಹಭಾವಕ್ಕೆ ಒತ್ತು ಕೊಟ್ಟ ಪಕ್ಷ. ಅಜಿತ್ ಸಿಂಗ್‌ ಅವರ ‘ಪಕ್ಷಾಂತರ’ ಪಟ್ಟುಗಳಿಗೆ ಬೆದರಿ ಮುಸ್ಲಿಮರು ನಿಧಾನಕ್ಕೆ ಪಕ್ಷದಿಂದ ದೂರ ಸರಿಯತೊಡಗಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ 6 ಸಾವಿರ ಚಿಲ್ಲರೆ ಮತಗಳ ಅಂತರದಿಂದ ಅಜಿತ್‌ ಸಿಂಗ್‌ ಸೋಲಲು ಅವಕಾಶವಾದಿ ರಾಜಕಾರಣವೂ ಒಂದು ಕಾರಣ. ಅಪ್ಪನನ್ನು ಸೋಲಿಸಿದ ಕಟ್ಟರ್‌ ಹಿಂದುತ್ವವಾದಿ ಅಭ್ಯರ್ಥಿಯನ್ನೇ ಗೆಲ್ಲಿಸಲು ಇದೀಗ ಪಣ ತೊಟ್ಟು ನಿಂತಿದ್ದಾರೆ ಮಗ ಜಯಂತ್ ಚೌಧರಿ.

ಉತ್ತರ ಪ್ರದೇಶದ ಪಶ್ಚಿಮ ಭಾಗದ ಮುಜಾಫರ್‌ ನಗರ 2013ರಲ್ಲಿ ಕೋಮು ಉತ್ಪಾತಕ್ಕೆ ಸಾಕ್ಷಿಯಾದ ಕ್ಷೇತ್ರ. ಕೋಮು ಕಲಹದಿಂದ 62 ಜನರು ಜೀವ ಕಳೆದುಕೊಂಡು 50 ಸಾವಿರಕ್ಕೂ ಅಧಿಕ ಮಂದಿ ನೆಲೆ ಕಳೆದುಕೊಂಡಿದ್ದರು. ಗಲಭೆಯಿಂದ ಹಿಂದೂ–ಮುಸ್ಲಿಂ ಭಾವೈಕ್ಯಕ್ಕೆ ಕುತ್ತು ಬಂದಿತ್ತು. ಹಿಂದೂ–ಮುಸ್ಲಿಂ ಮನಸ್ತಾಪ ರಾಜ್ಯದಾದ್ಯಂತ ವಿಸ್ತರಿಸಿತ್ತು. ದುರ್ಘಟನೆ ಘಟಿಸಿ ದಶಕ ಕಳೆದರೂ ಹಿಂದೂ–ಮುಸ್ಲಿಮರ ನಡುವಿನ ಅಪನಂಬಿಕೆ ಇನ್ನೂ ದೂರವಾಗಿಲ್ಲ. ಕ್ಷೇತ್ರದ ಚುನಾವಣಾ ಕಣದಲ್ಲೂ ಆಗಾಗ ಸದ್ದು ಮಾಡುತ್ತಲೇ ಇದೆ. 

ಕೋಮು ಕಿಚ್ಚಿನ ಲಾಭ ಪಡೆದು ಉತ್ತುಂಗಕ್ಕೆ ಏರಿದವರು ಸಂಜೀವ್‌ ಕುಮಾರ್‌ ಬಾಲಿಯಾನ್‌. ಕೇಂದ್ರ ಸಚಿವರೂ ಆಗಿರುವ ಅವರು ಈ ಸಲ ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಎದುರಾಳಿಯನ್ನು 4.5 ಲಕ್ಷ ಮತಗಳ ಅಂತರದಿಂದ ಮಣಿಸಿದ್ದ ಬಾಲಿಯಾನ್ ಅವರು 2019ರಲ್ಲಿ ಗೆದ್ದಿದ್ದು 6 ಸಾವಿರ ಮತಗಳ ಅಂತರದಿಂದ. ಆಗ ಎಸ್‌ಪಿ–ಬಿಎಸ್‌ಪಿ ಅಭ್ಯರ್ಥಿಯಾಗಿದ್ದವರು ಅಜಿತ್ ಸಿಂಗ್. ಈ ಸಲ ಗೆಲುವಿನ ದಟ ಮುಟ್ಟಲು ಜಯಂತ್ ಚೌಧರಿ ‘ಸಂಜೀವಿನಿ’ ಆಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಬಾಲಿಯಾನ್‌ ಇದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನ ಜಯಂತ್‌ ಅವರು ‘ಪಥ’ ಬದಲಿಸಿರುವುದರಿಂದ ಕಬ್ಬಿನ ನಾಡಿನಲ್ಲಿ ‘ಕಮಲ’ಕ್ಕೆ ಗೆಲುವಿನ ಸಿಹಿ ಸಿಗಲಿದೆ ಎಂಬುದು ಬಿಜೆಪಿ ನಾಯಕರ ವಿಶ್ವಾಸ. 

ಆದರೆ, ಬಾಲಿಯಾನ್ ಅವರ ಮುಂದೆ ಕಠಿಣ ಹಾದಿ ಇದೆ. ಜಾಟರ ನಾಡೆಂದೇ ಮುಜಾಫರ್‌ ನಗರ ಪ್ರಖ್ಯಾತಿ. ಕೃಷಿ ಕಾಯ್ದೆಯ ವಿರುದ್ಧದ ಹೋರಾಟದಲ್ಲಿ ಈ ಭಾಗದ ಜಾಟ್‌ ರೈತರು ಮುಂಚೂಣಿಯಲ್ಲಿದ್ದರು. ಈಚಿನ ಚುನಾವಣೆಗಳಲ್ಲಿ ಬಿಜೆಪಿ ಬೆನ್ನಿಗೆ ನಿಂತಿದ್ದ ಜಾಟರ ಮತಗಳು ವಿಭಜನೆಯಾದರೆ ಕಷ್ಟ ಎಂಬ ಭಯವೂ ಅವರಿಗೆ ಇದೆ.

ರಜಪೂತರು ಸಿಟ್ಟಿಗೆದ್ದಿರುವುದು ಅವರ ತಲೆಬಿಸಿಯನ್ನು ಮತ್ತಷ್ಟು ಹೆಚ್ಚಿಸಿದೆ. ‘ನಮಗೆ ಮೋದಿ– ಯೋಗಿ ಬೇಕು. ಆದರೆ, ಈ ಬಾಲಿಯಾನ್‌ ಬೇಡವೇ ಬೇಡ. ಅವರನ್ನು ಈ ಸಲ ಸೋಲಿಸಿಯೇ ಬಿಡುತ್ತೇವೆ’ ಎಂದು ರಜಪೂತರು ಗರ್ಜಿಸಿ ಪ್ರತಿಭಟಿಸಿದ್ದಾರೆ. 2013ರ ಗಲಭೆಯಿಂದ ‘ರಾಜಕೀಯ ಲಾಭ’ ಪಡೆದವರು ಸಂಗೀತ್‌ ಸೋಮ್‌. ಮಾಜಿ ಶಾಸಕರಾದ ಅವರು ಪ್ರಬಲ ರಜಪೂತ ನಾಯಕ. ಬಾಲಿಯಾನ್‌ ಕಂಡರೆ ಸೋಮ್‌ಗೆ ಅಷ್ಟಕ್ಕಷ್ಟೇ. ಇಬ್ಬರ ನಡುವಿನ ಕಂದಕ ಹೆಚ್ಚಾಗಿದೆ. ಅವರು ಒಳ ಏಟು ನೀಡಬಹುದು ಎಂಬುದನ್ನು ಬಿಜೆಪಿ ನಾಯಕರೇ ಹೇಳುತ್ತಾರೆ. 

ಅನುಭವಿ ರಾಜಕಾರಣಿ ಹರೇಂದ್ರ ಸಿಂಗ್‌ ಮಲಿಕ್‌ ಅವರನ್ನು ಸಮಾಜವಾದಿ ಪಕ್ಷ ಕಣಕ್ಕಿಳಿಸಿದೆ. ಅವರು ಜಾಟ್‌ ಸಮುದಾಯದವರು. ಜಾಟ್‌ ಸಮುದಾಯದ ಮತಗಳಿಗೆ ಅವರು ಒಂದಷ್ಟು ಕನ್ನ ಹಾಕುವ ಸಾಧ್ಯತೆ ಇದೆ. ಕೋಮು ಗಲಭೆಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷವು ನಿರ್ಲಿಪ್ತವಾಗಿತ್ತು. ಇದರಿಂದ ಗಲಭೆ ಮತ್ತಷ್ಟು ಹಬ್ಬಿತು ಎಂಬ ಸಿಟ್ಟು ಮುಸ್ಲಿಮರಿಗೆ ಈಗಲೂ ಇದೆ. ಬಹುಜನ ಸಮಾಜ ಪಕ್ಷವು ದಾರಾ ಸಿಂಗ್‌ ಪ್ರಜಾಪತಿ ಅವರಿಗೆ ಮಣೆ ಹಾಕಿದೆ. ದಲಿತ–ಮುಸ್ಲಿಂ– ಪ್ರಜಾಪತಿ ಸಮುದಾಯಗಳ ಮತಗಳ ನೆರವಿನಿಂದ ‘ಆನೆ’ ಸುಲಲಿತವಾಗಿ ಸಂಸತ್‌ ಕಡೆಗೆ ಹೆಜ್ಜೆ ಹಾಕಬಹುದು ಎಂಬುದು ಬಿಎಸ್‌ಪಿ ನಾಯಕರ ಲೆಕ್ಕಾಚಾರ. 

ಕ್ಷೇತ್ರದಲ್ಲಿ 2013ರ ಮೊದಲು ಬಿಜೆಪಿಗೆ ಹೆಚ್ಚಿನ ಅಸ್ತಿತ್ವ ಇರಲಿಲ್ಲ. ಗಲಭೆಯಿಂದಾಗಿ ಬಿಜೆಪಿಗೆ ಭೀಮಬಲ ಬಂತು. 2014, 2019ರ ಲೋಕಸಭಾ ಚುನಾವಣೆ ಹಾಗೂ 2017, 2022ರ ವಿಧಾನಸಭಾ ಚುನಾವಣೆಗಳಲ್ಲಿ ಈ ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿತ್ತು. ಮೋದಿ– ಹಿಂದುತ್ವದ ಅಲೆಯನ್ನು ಬಿಜೆಪಿ ಈ ಸಲವೂ ನೆಚ್ಚಿಕೊಂಡಿದೆ. 

ಟಿಕಾಯತ್‌ಗೆ ಒಲಿಯದ ರಾಜಕೀಯ

ಈ ಭಾಗದಲ್ಲಿ ಚರಣ್ ಸಿಂಗ್‌ ನಿಧನದ ಬಳಿಕ ಪ್ರವರ್ಧಮಾನಕ್ಕೆ ಬಂದ ಜಾಟ್‌ ನಾಯಕ ಮಹೇಂದ್ರ ಸಿಂಗ್ ಟಿಕಾಯತ್‌ ಅವರು. ‘ಭಾರತೀಯ ಕಿಸಾನ್‌ ಯೂನಿಯನ್‌’ ಮೂಲಕ ಅನ್ನದಾತರ ಹೋರಾಟಗಳನ್ನು ಮುನ್ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಡಿಯೂರುವಂತೆ ಮಾಡಿದ್ದರು. ಅವರು ನೇಪಥ್ಯಕ್ಕೆ ಸರಿದ ಬಳಿಕ ಪುತ್ರರಾದ ರಾಕೇಶ್‌ ಟಿಕಾಯತ್‌ ಹಾಗೂ ನರೇಶ್ ಟಿಕಾಯತ್ ಅವರು ರೈತ ಸಂಘಟನೆಗಳ ಮೂಲಕ ಸರ್ಕಾರಗಳನ್ನು ನಡುಗಿಸಿದ್ದರು. ಜಾಟರ ಜನಸಂಖ್ಯೆ ಹಾಗೂ ರೈತ ಹೋರಾಟವನ್ನು ನೆಚ್ಚಿಕೊಂಡು ನರೇಶ್‌ ಟಿಕಾಯತ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಅವರು ಠೇವಣಿ ಕಳೆದುಕೊಂಡಿದ್ದರು. ಚುನಾವಣಾ ರಾಜಕಾರಣಕ್ಕೆ ಬಂದಾಗ ಈ ಭಾಗದ ರೈತರ ಆದ್ಯತೆ ವಿಭಿನ್ನವಾದುದು ಎಂಬುದಕ್ಕೆ ಇದು ಸಾಕ್ಷಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT