ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಆಗಿಯೇ ಹಿಂದಿರುಗುವುದಾಗಿ ಶಪಥ ಮಾಡಿದ್ದ ನಾಯ್ಡು: ಇಲ್ಲಿದೆ ವಿವರ

Published 5 ಜೂನ್ 2024, 6:06 IST
Last Updated 5 ಜೂನ್ 2024, 6:06 IST
ಅಕ್ಷರ ಗಾತ್ರ

ಅಮರಾವತಿ: ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾದ ಆಂಧ್ರ ಪ್ರದೇಶದಲ್ಲಿ ಟಿಡಿಪಿ ನೇತೃತ್ವದ ಎನ್‌ಡಿಎ ಪ್ರಚಂಡ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. 3 ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ತಮಗಾದ ಅಪಮಾನದ ವೇಳೆ ತೀವ್ರ ದುಃಖ, ಕೋಪದಿಂದ ಹೊರಬಂದಿದ್ದ ಚಂದ್ರಬಾಬು ನಾಯ್ಡು, ಮುಖ್ಯಮಂತ್ರಿಯಾಗಿಯೇ ವಿಧಾನಸಭೆಗೆ ಹಿಂದಿರುಗುತ್ತೇನೆ ಎಂದು ಶಪಥ ಮಾಡಿದ್ದರು. ಈಗ ಅದನ್ನು ನಾಯ್ಡು ಸಾಧಿಸಿ ತೋರಿಸಿದ್ದಾರೆ.

ಮಂಗಳವಾರ ಹೊರಬಿದ್ದ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಭರ್ಜರಿ ಜಯ ತಂದುಕೊಡುವ ಮೂಲಕ ತಮ್ಮ ಶಪಥ ಪೂರೈಸಿದ್ದಾರೆ.

ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಒಳಗೊಂಡ ಎನ್‌ಡಿಎ ಒಕ್ಕೂಟವು ಆಂಧ್ರ ಪ್ರದೇಶದಲ್ಲಿ 21 ಲೋಕಸಭಾ ಕ್ಷೇತ್ರಗಳು ಮತ್ತು 164 ವಿಧಾನಸಭಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ.

25 ಲೋಕಸಭಾ ಕ್ಷೇತ್ರಗಳ ಪೈಕಿ ಟಿಡಿಪಿ 16, ಬಜೆಪಿ 3 ಮತ್ತು ಜನಸೇನಾ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ವೈಎಸ್‌ಆರ್‌ಸಿಪಿ 4ರಲ್ಲಿ ಜಯ ಕಂಡಿದೆ. ವಿಧಾನಸಭೆ ಕ್ಷೇತ್ರಗಳ ಪೈಕಿ ಟಿಡಿಪಿ 135, ಜನಸೇನಾ 21 ಮತ್ತು ಬಿಜೆಪಿ 8 ಕ್ಷೇತ್ರಗಳಲ್ಲಿ ಜಯ ಗಳಿಸಿವೆ. ವೈಎಸ್‌ಆರ್‌ಸಿಪಿ ಕೇವಲ 11 ಕ್ಷೇತ್ರಗಳಲ್ಲಿ ಗೆದ್ದಿದೆ.

ಆಂಧ್ರ ಪ್ರದೇಶದಲ್ಲಿ ಎನ್‌ಡಿಎ 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಚಂದ್ರಬಾಬು ನಾಯ್ಡು ಕೇಂದ್ರದಲ್ಲೂ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ.

ನಾಯ್ಡು ರಾಜಕೀಯದ ಕಾಲಾನುಕ್ರಮದ ಚಿತ್ರಣ

* 1950ರ ಏಪ್ರಿಲ್ 20ರಂದು ಆಂಧ್ರ ಪ್ರದೇಶದ ಅವಿಭಜಿತ ಚಿತ್ತೂರು ಜಿಲ್ಲೆ ನರವರಿಪಲ್ಲಿಯಲ್ಲಿ ಜನಿಸಿದ ನಾಯ್ಡು, ತಿರುಪತಿಯ ಶ್ರೀ ವೆಂಕಟೇಶ್ವರ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮೂಲಕ ತಮ್ಮ 4 ದಶಕಗಳ ರಾಜಕಾರಣ ಆರಂಭಿಸಿದ್ದರು.

* ಬಳಿಕ ರಾಜಕೀಯದಲ್ಲಿ ಏಳಿಗೆ ಕಂಡ ಅವರು ಕಾಂಗ್ರೆಸ್ ಸೇರಿ ಸಂಪುಟ ಸಚಿವರೂ ಆಗಿದ್ದರು.

* ಬಳಿಕ ತಮ್ಮ ಮಾವ ಮತ್ತು ತೆಲುಗು ಚಿತ್ರರಂಗದ ದಂತಕಥೆ ಎನ್‌.ಟಿ. ರಾಮರಾವ್ ಸ್ಥಾಪಿಸಿದ್ದ ತೆಲುಗು ದೇಶಂ ಪಕ್ಷ(ಟಿಡಿಪಿ) ಸೇರಿದ್ದರು.

* 1995ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ನಾಯ್ಡು, ಬಳಿಕ ಎರಡೂ ಅವಧಿಯಲ್ಲಿ ಅಧಿಕಾರ ಉಳಿಸಿಕೊಂಡಿದ್ದರು.

* 1995ರಿಂದ 2004ರವರೆಗೆ ಅವರ 9 ವರ್ಷಗಳ ಮೊದಲ ಅವಧಿಯಲ್ಲಿ ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 3ನೇ ಅವಧಿಯಲ್ಲಿ ಆಂಧ್ರ ಪ್ರದೇಶ ವಿಭಜನೆ ಬಳಿಕ ಮುಖ್ಯಮಂತ್ರಿ ಆಗಿದ್ದರು.

* ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಮೊದಲ ಎನ್‌ಡಿಎ ಸರ್ಕಾರ ರಚನೆಗೆ ನಾಯ್ಡು ಬಾಹ್ಯ ಬೆಂಬಲ ನೀಡಿದ್ದರು.

* 2014ರಲ್ಲಿ ವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ್ದರು. ಅಮರಾವತಿಯನ್ನು ರಾಜಧಾನಿ ಮಾಡಬೇಕೆಂದುಕೊಂಡಿದ್ದ ನಾಯ್ಡು, ಬಳಿಕ ಅಧಿಕಾರ ಕಳೆದುಕೊಂಡಿದ್ದರು.

* 2019ರಲ್ಲಿ ವೈ.ಎಸ್. ಜಗನ್ ಮೋಹನರೆಡ್ಡಿ ಎದುರು ಅಪಮಾನಕಾರಿ ಸೋಲನ್ನು ಅನುಭವಿಸಿದ್ದರು.

* 2021ರಲ್ಲಿ ತಮ್ಮ ಕುಟುಂಬದ ವಿರುದ್ಧ ಕೆಲವರು ನೀಡಿದ ಹೇಳಿಕೆ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿದ್ದ ನಾಯ್ಡು, ವಿಧಾನಸಭೆಯಿಂದ ಹೊರನಡೆದಿದ್ದರು. ಮುಖ್ಯಮಂತ್ರಿಯಾಗಿಯೇ ಹಿಂದಿರುಗುವುದಾಗಿ ಶಪಥ ಮಾಡಿದ್ದರು.

* 2023ರಲ್ಲಿ ಸ್ಕಿಲ್ ಡೆವಲೊಪ್‌ಮೆಂಟ್ ಕಾರ್ಪೊರೇಶನ್ ಹಗರಣದಲ್ಲಿ ವೈಎಸ್‌ಆರ್‌ಸಿಪಿ ಸರ್ಕಾರ ನಾಯ್ಡು ಅವರನ್ನು ಬಂಧಿಸಿತ್ತು. 2 ತಿಂಗಳು ರಾಜಮಹೇಂದ್ರವರಂ ಜೈಲಿನಲ್ಲಿದ್ದ ನಾಯ್ಡು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT