ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚತೀವು ದ್ವೀಪ ವಿವಾದ: ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

Published 1 ಏಪ್ರಿಲ್ 2024, 23:30 IST
Last Updated 1 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಕಚ್ಚತೀವು ದ್ವೀಪದ ಕುರಿತ ವಿವಾದಕ್ಕೆ ಸಂಬಂಧಿಸಿ 2015ರಲ್ಲಿ ಆರ್‌ಟಿಐ ನೀಡಿದ್ದ ಉತ್ತರವನ್ನು ಉಲ್ಲೇಖಿಸಿ, ವಿರೋಧ ಪಕ್ಷಗಳು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದವು.

‘ಕಚ್ಚತೀವು ದ್ವೀಪದ ಕುರಿತಾದ ಪ್ರಶ್ನೆಗೆ 2015ರಲ್ಲಿ ಆರ್‌ಟಿಐ ನೀಡಿದ್ದ ಉತ್ತರದಲ್ಲಿ 1974 ಮತ್ತು 1976ರ ಒಪ್ಪಂದವು ಭಾರತಕ್ಕೆ ಸಂಬಂಧಿಸಿದ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದು ಅಥವಾ ಬಿಟ್ಟುಕೊಡುವುದನ್ನು ಒಳಗೊಂಡಿರಲಿಲ್ಲ. ಚುನಾವಣಾ ರಾಜಕೀಯಕ್ಕಾಗಿ ಮೋದಿ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ಕಚ್ಚತೀವು ದ್ವೀಪಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ ಪ್ರಧಾನಮಂತ್ರಿಗಳ ನಿಲುವಿನಲ್ಲಿ ವ್ಯತ್ಯಾಸವಿತ್ತು. ಕಾನೂನಿನ ಹೊರತಾಗಿ ಕಾಂಗ್ರೆಸ್‌ ಸರ್ಕಾರ ಭಾರತೀಯ ಮೀನುಗಾರರ ಹಕ್ಕುಗಳನ್ನು ಕಡೆಗಣಿಸಿದೆ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ನೀಡಿರುವ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರು, ‘ಮಾತಿಗೆ ತಿರುಗೇಟು ನೀಡುವುದು ಹಳೆಯ ಪದ್ಧತಿ, ಟ್ವೀಟ್‌ಗೆ ಮರುಟ್ವೀಟ್ ಎನ್ನುವುದು ಹೊಸ ಆಯುಧ. ವಿದೇಶಾಂಗ ಸಚಿವರು ದಯವಿಟ್ಟು 2015ರ ಜನವರಿ 27ರಂದು ಆರ್‌ಟಿಐ ನೀಡಿರುವ ಉತ್ತರವನ್ನು ಓದಬೇಕು. ಯಾವ ಪರಿಸ್ಥಿತಿಯಲ್ಲಿ ಭಾರತ ಸಣ್ಣ ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದೆ ಎನ್ನುವುದು ತಿಳಿಯುತ್ತದೆ’ ಎಂದು ಹೇಳಿದ್ದಾರೆ. 

‘ಕಳೆದ 50 ವರ್ಷಗಳಿಂದ ಹಲವು ಮೀನುಗಾರರ ಬಂಧನವಾಗಿದೆ ಎಬುದು ಸತ್ಯ. ಭಾರತವೂ ಶ್ರೀಲಂಕಾದ ಹಲವಾರು ಮೀನುಗಾರರನ್ನು ಬಂಧಿಸಿದೆ. ಪ್ರತಿಯೊಂದು ಸರ್ಕಾರವೂ ಶ್ರೀಲಂಕಾದೊಂದಿಗೆ ಮಾತುಕತೆ ನಡೆಸಿ, ನಮ್ಮ ಮೀನುಗಾರರನ್ನು ಬಿಡಿಸಿಕೊಂಡಿದೆ. ಜೈಶಂಕರ್‌ ಅವರು ವಿದೇಶಾಂಗ ಇಲಾಖೆಯ ಅಧಿಕಾರಿಯಾಗಿದ್ದಾಗ, ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ ಮತ್ತು ವಿದೇಶಾಂಗ ಸಚಿವರಾಗಿದ್ದಾಗಲೂ ಇದೇ ರೀತಿ ನಡೆಯುತ್ತಿದೆ. ಕಾಂಗ್ರೆಸ್‌ ಮತ್ತು ಡಿಎಂಕೆ ಮೇಲೆ ಆರೋಪ ಮಾಡುವಾಗ ಏನು ಬದಲಾಗಿದೆ’ ಎಂದು ಪ್ರಶ್ನಿಸಿದರು.

ಈ ಬಗ್ಗೆ  ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಶಿವಸೇನಾದ (ಉದ್ಧವ್‌ ಠಾಕ್ರೆ ಬಣ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು, ‘ಕಚ್ಚತೀವು ದ್ವೀಪದ ವಿಚಾರದಲ್ಲಿ ಯಾವುದೇ ಪ್ರಶ್ನೆಗಳು ಮೂಡಲು ಸಾಧ್ಯವಿಲ್ಲ. ಯಾಕೆಂದರೆ ಒಪ್ಪಂದಗಳ ಪ್ರಕಾರ ಆ ದ್ವೀಪವು ಭಾರತ –ಶ್ರೀಲಂಕಾ ಸಾಗರ ರೇಖೆಯ ಅನ್ವಯ ಶ್ರೀಲಂಕಾದ ಗಡಿಭಾಗದ ಒಳಗಿದೆ’ ಎಂದು ತಿಳಿಸಿದ್ದಾರೆ.

‘ವಿದೇಶಾಂಗ ಕಾರ್ಯದರ್ಶಿಯೊಬ್ಬರು ಸಚಿವರಾದ ತಕ್ಷಣ ಹೇಗೆ ಬಣ್ಣ ಬದಲಾಯಿಸಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಮೋದಿ ಸರ್ಕಾರದ ಸುಳ್ಳುಗಳಿಗೆ ಮಿತಿಯೇ ಇಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ.

ಡಿಎಂಕೆ ವಿರುದ್ಧ ಮೋದಿ ವಾಗ್ದಾಳಿ

ನವದೆಹಲಿ: ಕಚ್ಚತೀವು ದ್ವೀಪಕ್ಕೆ ಸಂಬಂಧಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ‘ತಮಿಳುನಾಡಿನ ಹಿತಾಸಕ್ತಿಯನ್ನು ಕಾಪಾಡುವ ಕೆಲಸವನ್ನು ಡಿಎಂಕೆ ಮಾಡಿಲ್ಲ’ ಎಂದು ಆರೋಪಿಸಿದ್ದಾರೆ.

‘ಡಿಎಂಕೆಯು ಒಪ್ಪಂದವನ್ನು ಸಾರ್ವಜನಿಕವಾಗಿ ವಿರೋಧಿಸಿದ್ದರೂ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರು ಒಪ್ಪಂದಕ್ಕೆ ಸಹಿ ಹಾಕಿದ್ದರು’ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ‘ಎಕ್ಸ್‌’ನಲ್ಲಿ ಕಿಡಿಕಾರಿರುವ ಮೋದಿ ‘ಇದು ಡಿಎಂಕೆಯ ದ್ವಂದ್ವ ನಿಲುವನ್ನು ತೋರಿಸುತ್ತದೆ’ ಎಂದರು.

‘ಕಾಂಗ್ರೆಸ್‌ ಮತ್ತು ಡಿಎಂಕೆ ಕೌಟುಂಬಿಕ ಪಕ್ಷ. ಅವರು ಕೇವಲ ಅವರ ಮಕ್ಕಳ ಬಗ್ಗೆ ಮಾತ್ರ ಯೋಚಿಸುತ್ತಾರೆ. ಇತರರ ಬಗ್ಗೆ ಅವರಿಗೆ ಚಿಂತೆಯಿಲ್ಲ. ಕಚ್ಚತೀವು ವಿಚಾರದಲ್ಲಿ ಅವರು ಕೈಗೊಂಡ ನಿರ್ದಾಕ್ಷಿಣ್ಯ ನಿಲುವು ನಮ್ಮ ಬಡ ಮೀನುಗಾರರು ಮತ್ತು ಮಹಿಳಾ ಮೀನುಗಾರರ ಹಿತಾಸಕ್ತಿಗೆ ಧಕ್ಕೆ ತಂದಿದೆ’ ಎಂದು ಆರೋಪಿಸಿದರು.

3 ಪ್ರಶ್ನೆಗಳಿಗೆ ಉತ್ತರಿಸಿ

ಚೆನ್ನೈ: ಕಚ್ಚತೀವು ದ್ವೀಪದ ವಿಚಾರದಲ್ಲಿ ಡಿಎಂಕೆ ವಿರುದ್ಧದ ಮೋದಿ ಟೀಕೆಗೆ ತಿರುಗೇಟು ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ಬಿಜೆಪಿಗೆ ಮೀನುಗಾರರರ ಮೇಲೆ ದಿಢೀರ್‌ ಪ್ರೀತಿ ಹುಟ್ಟಿರುವ ಬಗ್ಗೆ ಮತ್ತು ರಾಜ್ಯವು ಕೋರಿರುವ ₹37000 ಕೋಟಿ ಪರಿಹಾರದ ಬಗ್ಗೆ ಪ್ರಶ್ನಿಸಿದ್ದಾರೆ.‌

‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಸ್ಟಾಲಿನ್‌ ‘ ತಮಿಳುನಾಡಿದನ ಜನ ಕೇವಲ 3 ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರ ಬಯಸುತ್ತಿದ್ದಾರೆ. 10 ವರ್ಷಗಳ ಕಾಲ ಕುಂಭಕರ್ಣನಂತೆ ನಿದ್ರೆಯಲ್ಲಿದ್ದ ಇವರು ಚುನಾವಣೆ ಸಂದರ್ಭದಲ್ಲಿ ದಿಢೀರನೆ ಮೀನುಗಾರರ ಮೇಲೆ ಯಾಕೆ ಪ್ರೀತಿ ತೋರುತ್ತಿದ್ದಾರೆ? ತಮಿಳುನಾಡು ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ ₹1 ತೆರಿಗೆಯಲ್ಲಿ ಕೇವಲ 29 ಪೈಸೆಯನ್ನು ಮಾತ್ರ ಯಾಕೆ ರಾಜ್ಯಕ್ಕೆ ನೀಡುತ್ತಿದೆ. ಪ್ರವಾಹದಿಂದ ತತ್ತರಿಸಿದ್ದ ತಮಿಳುನಾಡಿಗೆ ಕಿಂಚಿತ್ತು ಪರಿಹಾರ ನೀಡಲಿಲ್ಲ ಯಾಕೆ’ ಎಂದು ಪ್ರಶ್ನಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT