ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತ್ರಾರ್ಜಿತ ಆಸ್ತಿ ತೆರಿಗೆ ವಿಷಯ: ಬಿಜೆಪಿ ಪಿಚ್‌ನಲ್ಲಿ ಆಡುವುದಿಲ್ಲ– ಕಾಂಗ್ರೆಸ್

Published 25 ಏಪ್ರಿಲ್ 2024, 9:58 IST
Last Updated 25 ಏಪ್ರಿಲ್ 2024, 9:58 IST
ಅಕ್ಷರ ಗಾತ್ರ

ನವದೆಹಲಿ: ‘ಬಿಜೆಪಿ ಸಿದ್ಧಪಡಿಸಿದ ಪಿಚ್‌ನಲ್ಲಿ ಕಾಂಗ್ರೆಸ್‌ ಆಡುವುದಿಲ್ಲ. ಬದಲಿಗೆ ನಿರುದ್ಯೋಗ ಮತ್ತು ಬೆಲೆ ಏರಿಕೆ ವಿಷಯವೇ ಕಾಂಗ್ರೆಸ್‌ನ ಚುನಾವಣಾ ವಿಷಯವಾಗಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಸತ್ಯಮೇವ ಜಯತೆ’ ಎಂದು ತಮ್ಮನ್ನು ಪ್ರತಿಪಾದಿಸುವ ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜನರ ಗಮನ ಸೆಳೆಯಲು ಸುಳ್ಳುಗಳನ್ನೇ ಹೇಳುತ್ತಿದ್ದಾರೆ. ಸಂಪತ್ತಿನ ಮರುಹಂಚಿಕೆ ವಿಷಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ ಎಂಬ ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಚುನಾವಣೆಯ ಮೊದಲ ಹಂತದ ಮತದಾನ ಪೂರ್ಣಗೊಂಡ ನಂತರ ಕೆಲವು ರಾಜ್ಯಗಳಲ್ಲಿ ಬಿಜೆಪಿ ಧೂಳೀಪಟವಾಗಲಿದೆ. ಇನ್ನೂ ಕೆಲ ರಾಜ್ಯಗಳಲ್ಲಿ 2019ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಸೀಟುಗಳನ್ನು ಪಡೆಯಲಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಮೋದಿ ಅವರು ತಮ್ಮ ಉದ್ದೇಶವನ್ನು ಈಗ ಬದಲಿಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಗೆ ಮೊದಲು ಧರ್ಮದ ಬಣ್ಣ ಬಳಿಯಲು ಮುಂದಾದರು. ಭಾರತ್ ಜೋಡೊ ಯಾತ್ರಾ ಮತ್ತು ಭಾರತ್ ಜೋಡೊ ನ್ಯಾಯ ಯಾತ್ರಾದಲ್ಲಿ ಜನರಿಂದ ಬಂದ ಸಲಹೆಗಳನ್ನು ಆಧರಿಸಿ ‘ನ್ಯಾಯ ಪತ್ರ’ ಪ್ರಣಾಳಿಕೆ ರಚಿಸಲಾಗಿದೆ. ಆದರೆ ಇದರಲ್ಲಿ ಇಲ್ಲದ್ದನ್ನು ಸೃಷ್ಟಿಸಿಕೊಂಡು ಸುಳ್ಳು ಹೇಳಲು ಮೋದಿ ಹೊರಟಿದ್ದಾರೆ. ಆದರೂ, ನಮ್ಮ ಪ್ರಣಾಳಿಕೆಗೆ ಉತ್ತಮ ಪ್ರಚಾರ ಕೊಡುತ್ತಿದ್ದಾರೆ’ ಎಂದಿದ್ದಾರೆ.

ಸಂಪತ್ತಿನ ಮರುಹಂಚಿಕೆ ವಿಷಯ ಪ್ರಣಾಳಿಕೆಯಲ್ಲಿ ಎಲ್ಲಿದೆ ಎಂದು ಮೋದಿ ತೋರಿಸಲಿ

‘ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆರ್ಥಿಕ ಅಸಮಾನತೆ ಹೆಚ್ಚಳವಾಗಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ನಾರಿ ನ್ಯಾಯ, ಯುವ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ್ ನ್ಯಾಯ ಹಾಗೂ ಹಿಸ್ಸೇದಾರಿ ನ್ಯಾಯ ಎಂಬ ಘೋಷಣೆಗಳೊಂದಿಗೆ ಹೋರಾಡುತ್ತಿದ್ದೇವೆ’ ಎಂದು ಜೈರಾಂ ಹೇಳಿದ್ದಾರೆ.

‘ಈ ಬಾರಿ ಚುನಾವಣೆಯನ್ನು ನಾವು ಸಕಾರಾತ್ಮಕವಾಗಿ ಎದುರಿಸುತ್ತಿದ್ದೇವೆ. ಜನರ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ, ಸಂವಿಧಾನ ಮತ್ತು ಸಂಸ್ಥೆಗಳ ಮೇಲಿನ ದಾಳಿ ವಿಷಯ ಕುರಿತು ಚುನಾವಣೆ ಎದುರಿಸುತ್ತಿದ್ದೇವೆ. ಇದರಿಂದ ಭಯಭೀತಗೊಂಡಿರುವ ಮೋದಿ, ಈಗ 400 ಸೀಟುಗಳ ಬಗ್ಗೆ ಮತ್ತು ಮೋದಿ ಗ್ಯಾರಂಟಿ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ತಮ್ಮ ಎಂದಿನ ಆಯುಧವಾದ ಜಾತಿ ಹಾಗೂ ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.

‘ಪಿತ್ರಾರ್ಜಿತ ಆಸ್ತಿ ತೆರಿಗೆ ಪದ್ಧತಿಯನ್ನು ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 1985ರಲ್ಲಿ ರದ್ದುಪಡಿಸಿದ್ದಾರೆ. ಆದರೆ ಆ ಸಂದರ್ಭದಲ್ಲಿ ಅರುಣ ಜೇಟ್ಲಿ ಮತ್ತು ಜಯಂತ್ ಸಿನ್ಹಾ ಅವರು ಈ ತೆರಿಗೆಯ ಪರವಾಗಿದ್ದರು. ಆದರೆ, ರದ್ದುಪಡಿಸಿದ ತೆರಿಗೆಯನ್ನು ಕಾಂಗ್ರೆಸ್ ತರುತ್ತದೆ ಎಂಬುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಆದರೆ ಇದು ಬಿಜೆಪಿಯ ಉದ್ದೇಶ ಇರಬಹುದು’ ಎಂದಿದ್ದಾರೆ.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತಿನ ಮರು ಹಂಚಿಕೆ ಮಾಡುತ್ತದೆ ಹಾಗೂ ಮಂಗಳಸೂತ್ರ ಕಸಿಯುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ. ಹಾಗಿದ್ದರೆ ಅದು ನಮ್ಮ ಪ್ರಣಾಳಿಕೆಯಲ್ಲಿ ಎಲ್ಲಿದೆ ಎಂಬುದನ್ನು ಅವರೇ ತೋರಿಸಬೇಕು. ಜತೆಗೆ, ಮಂಗಳಸೂತ್ರಕ್ಕೆ ಬೆಲೆಯನ್ನೇ ನೀಡದವರು ಅದರ ವಿಷಯ ಮಾತನಾಡುತ್ತಿರುವುದು ವಿಪರ್ಯಾಸ’ ಎಂದು ಜೈರಾಂ ರಮೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT