ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯುಕ್ತರ ನೇಮಕ ತಡೆಗೆ ಸುಪ್ರೀಂ ಕೋರ್ಟ್ ನಕಾರ

ಚುನಾವಣೆ ಹತ್ತಿರವಾಗಿರುವ ಹೊತ್ತಿನಲ್ಲಿ ತಡೆ ನೀಡಿದರೆ ಗೊಂದಲ ಸೃಷ್ಟಿ: ಸುಪ್ರೀಂ ಕೋರ್ಟ್
Published 21 ಮಾರ್ಚ್ 2024, 16:31 IST
Last Updated 21 ಮಾರ್ಚ್ 2024, 16:31 IST
ಅಕ್ಷರ ಗಾತ್ರ

ನವದೆಹಲಿ: ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರನ್ನು ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದ್ದಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಲೋಕಸಭಾ ಚುನಾವಣೆ ಹತ್ತಿರವಾಗಿರುವ ಈ ಹೊತ್ತಿನಲ್ಲಿ ತಡೆಯಾಜ್ಞೆ ನೀಡಿದರೆ ‘ಗೊಂದಲಗಳು ಹಾಗೂ ಅನಿಶ್ಚಿತತೆ’ ಸೃಷ್ಟಿಯಾಗುತ್ತದೆ ಎಂದು ಅದು ಹೇಳಿದೆ.

ಚುನಾವಣಾ ಆಯೋಗವು ಕಾರ್ಯಾಂಗದ ನಿಯಂತ್ರಣದಲ್ಲಿ ಇಲ್ಲ ಎಂದು ಹೇಳಿರುವ ಕೋರ್ಟ್‌, ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕ, ಸೇವಾ ನಿಯಮಗಳು ಮತ್ತು ಅಧಿಕಾರಾವಧಿ) ಕಾಯ್ದೆ – 2023ರ ಜಾರಿಗೆ ಮಧ್ಯಂತರ ತಡೆ ನೀಡುವುದಕ್ಕೆ ಕೂಡ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರು ಇದ್ದ ವಿಭಾಗೀಯ ಪೀಠ ನಿರಾಕರಿಸಿದೆ.

ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಹೇಳಿರುವ ಪೀಠವು, ಆರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅರ್ಜಿಗಳ ವಿಚಾರಣೆಯನ್ನು ಆಗಸ್ಟ್‌ 5ಕ್ಕೆ ನಿಗದಿ ಮಾಡಲಾಗಿದೆ.

‘ಅವರನ್ನು ನೇಮಕ ಮಾಡಿಯಾಗಿದೆ, ಚುನಾವಣೆ ಹತ್ತಿರವಾಗುತ್ತಿದೆ... ಹೊಸ ಚುನಾವಣಾ ಆಯುಕ್ತರ ವಿರುದ್ಧವಾಗಿ ಯಾವುದೇ ಆರೋಪಗಳು ಇಲ್ಲ’ ಎಂದು ಪೀಠವು ನೇಮಕವನ್ನು ಪ್ರಶ್ನಿಸಿದವರನ್ನು ಉದ್ದೇಶಿಸಿ ಹೇಳಿತು.

2023ರ ಕಾಯ್ದೆಯ ಸಿಂಧುತ್ವವನ್ನು ‍‍ಪ್ರಶ್ನಿಸಿರುವ ಹಾಗೂ ಹೊಸ ಚುನಾವಣಾ ಆಯುಕ್ತರ ನೇಮಕಕ್ಕೆ ತಡೆ ಕೋರಿರುವ ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸಿತು. ‘ನೇಮಕಾತಿಗೆ ತಡೆ ಕೋರಿದ್ದ ಅರ್ಜಿಗಳನ್ನು ನಾವು ವಜಾಗೊಳಿಸುತ್ತಿದ್ದೇವೆ’ ಎಂದು ಪೀಠವು ಹೇಳಿತು.

ಇಬ್ಬರು ಚುನಾವಣಾ ಆಯುಕ್ತರ ನೇಮಕದ ವಿಚಾರದಲ್ಲಿ ಕೇಂದ್ರ ಸರ್ಕಾರ ತೋರಿದ ಅವಸರವನ್ನು ಪೀಠವು ಪ್ರಶ್ನಿಸಿತು. ‘ನ್ಯಾಯದಾನ ಮಾಡುವುದಷ್ಟೇ ಮುಖ್ಯವಲ್ಲ. ನ್ಯಾಯದಾನ ಆಗುತ್ತಿದೆ ಎಂಬುದು ಗೊತ್ತಾಗುವಂತೆಯೂ ಇರಬೇಕು... ನಾವು ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಇದು ನನ್ನ ಪ್ರಕಾರ ಸಂವಿಧಾನದ ನಂತರ ಅತ್ಯಂತ ಮಹತ್ವದ್ದು. ಜನರ ಹುಬ್ಬೇರುವಂತೆ ಮಾಡಲು ಅವಕಾಶ ಏಕೆ ನೀಡಬೇಕು’ ಎಂದು ನ್ಯಾಯಮೂರ್ತಿ ದತ್ತ ಅವರು ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತು.

ಕೇಂದ್ರವು 2023ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪಾಲಿಸಿಲ್ಲ, ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಕೈಬಿಡಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ದೂರಿದರು.

ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ ಆಯ್ಕೆ ಸಮಿತಿಯಲ್ಲಿ ನ್ಯಾಯಾಂಗದ ಪ್ರತಿನಿಧಿ ಇರಬೇಕು ಎಂದು ಸುಪ್ರೀಂ ಕೋರ್ಟ್‌ 2023ರ ತೀರ್ಪಿನಲ್ಲಿ ಎಲ್ಲಿಯೂ ಹೇಳಿಲ್ಲ. ಆ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳುವ ಕೆಲಸವನ್ನು ಸಂಸತ್ತಿಗೆ ಬಿಟ್ಟಿತ್ತು ಎಂದು ಪೀಠವು ವಿವರಿಸಿತು.

2023ರಲ್ಲಿ, ಸಿಜೆಐ, ಪ್ರಧಾನಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಇರುವ ಸಮಿತಿಯನ್ನು ರಚಿಸುವಂತೆ ಹೇಳಿದ ಸುಪ್ರೀಂ ಕೋರ್ಟ್ ತೀರ್ಪು, ಸಂಸತ್ತು ಹೊಸ ಕಾನೂನು ರಚಿಸುವವರೆಗೆ ಆ ಸಮಿತಿ ಚಾಲ್ತಿಯಲ್ಲಿರಲಿ ಎಂಬ ಆಶಯ ಹೊಂದಿತ್ತು ಎಂದು ಪೀಠವು ಭೂಷಣ್ ಅವರಿಗೆ ತಿಳಿಸಿತು.

ಕಾಯ್ದೆಯೊಂದನ್ನು ರೂಪಿಸುವಂತೆ ಸಂಸತ್ತಿಗೆ ನೆನಪಿಸುವ ಕೆಲಸವನ್ನು ಆ ತೀರ್ಪು ಮಾಡಿತ್ತೇ ವಿನಾ, ಕಾನೂನನ್ನು ಯಾವ ಬಗೆಯಲ್ಲಿ ರೂಪಿಸಬೇಕು ಎಂಬುದನ್ನು ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿತು. ಆದರೆ ಹೊಸದಾಗಿ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡಲು ಅನುಸರಿಸಿದ ಪ್ರಕ್ರಿಯೆಯು ಪಾರದರ್ಶಕ ಆಗಿರಲಿಲ್ಲ ಎಂಬ ಭೂಷಣ್ ವಾದವನ್ನು ತಾನು ಮೇಲ್ನೋಟಕ್ಕೆ ಒಪ್ಪುವುದಾಗಿ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT