ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲೂ ನಾನು ಸಮಾಜವಾದಿ: ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ, BJP ಅಭ್ಯರ್ಥಿ ನೀರಜ್

Published 11 ಏಪ್ರಿಲ್ 2024, 10:55 IST
Last Updated 11 ಏಪ್ರಿಲ್ 2024, 10:55 IST
ಅಕ್ಷರ ಗಾತ್ರ

ಬಲಿಯಾ: ಉತ್ತರ ಪ್ರದೇಶದ ಬಲಿಯಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಅವರು ತಾವು ಈಗಲೂ ಸಮಾಜವಾದದೊಂದಿಗೆ ನಿಕಟ ಸಂಬಂಧ ಹೊಂದಿದ್ದೇನೆ ಎಂದು ಹೇಳುವ ಮೂಲಕ, ರಾಮ ಮನೋಹರ ಲೋಹಿಯಾ ಅವರ ವಿಚಾರಧಾರೆಗಳನ್ನು ದೂಳೀಪಟ ಮಾಡಿದ ಪಕ್ಷ ಎಂದು ಸಮಾಜವಾದಿ ಪಾರ್ಟಿ ವಿರುದ್ಧ ಕಿಡಿಕಾರಿದ್ದಾರೆ.

‘ಸಮಾಜವಾದವನ್ನು ಎಂದಿಗೂ ಸಮಾಜವಾದಿ ಪಕ್ಷದೊಂದಿಗೆ ಜೋಡಿಸುವುದು ಸರಿಯಲ್ಲ. ಸಮಾಜವಾದದ ತತ್ವಗಳ ಜತೆ ಇಂದಿಗೂ ನಾನು ವೈಯಕ್ತಿಕವಾಗಿ ಬದುಕುತ್ತಿದ್ದೇನೆ’ ಎಂದು ನೀರಜ್ ಅವರ ಈ ಹೇಳಿಕೆ ಈಗ ಸಂಚಲನ ಉಂಟು ಮಾಡಿದೆ. ಒಂದು ಕಾಲದಲ್ಲಿ ಕೇಸರಿ ಪಕ್ಷವನ್ನು ನೀರಜ್ ತಂದೆ, ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ಕಟುವಾಗಿ ಟೀಕಿಸುತ್ತಿದ್ದರು.

ಚಂದ್ರಶೇಖರ್ ಅವರ ಇಡೀ ಕುಟುಂಬವೇ ಈಗ ಬಿಜೆಪಿ ಪಾಳಯದಲ್ಲಿದೆ. ಅವರ ಹಿರಿಯ ಪುತ್ರ ಪಂಕಜ್ ಶೇಖರ್, ಕಿರಿಯ ಪುತ್ರ ನೀರಜ್ ಶೇಖರ್ ಬಿಜೆಪಿಯಲ್ಲಿದ್ದಾರೆ. ಮೊಮ್ಮಗ ರವಿ ಶಂಕರ್ ಸಿಂಗ್ ಪಪ್ಪು ಅವರು ಉತ್ತರ ಪ್ರದೇಶ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯರಾಗಿದ್ದಾರೆ. ನೀರಜ್ ಶೇಖರ್ ಅವರು ಹಿಂದೆ ಇದೇ ಬಲಿಯಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯನ್ನು ಪರಾಭವಗೊಳಿಸುವ ಮೂಲಕ ಸಂಸದರಾಗಿದ್ದರು. 

‘ಸಮಾಜವಾದವೆಂಬ ವಿಚಾರಧಾರೆಯನ್ನು ಹೊಂದಿರುವುದಾಗಿ ಸಮಾಜವಾದಿ ಪಕ್ಷ ಹೇಳುತ್ತದೆ. ಆದರೆ ವಾಸ್ತವದಲ್ಲಿ ಅದು ಆ ತತ್ವಗಳನ್ನೇ ಗಾಳಿಗೆ ತೂರಿದೆ. ಜಾತಿ ಬೇಲಿಯನ್ನು ಕಿತ್ತೊಗೆಯುವಂತೆ ಡಾ. ರಾಮಮನೋಹರ ಲೋಹಿಯಾ ಅವರು ಹೇಳಿದ್ದರು. ಆದರೆ ಇಂದಿನ ಸಮಾಜವಾದಿ ಪಕ್ಷವು ಜಾತಿ ಜನಗಣತಿ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ. 2025ರೊಳಗೆ ಜಾತಿ ಜನಗಣತಿ ಪೂರ್ಣಗೊಳಿಸುವುದಾಗಿ ವಾಗ್ದಾನ ಮಾಡಿದೆ’ ಎಂದು ನೀರಜ್ ಆರೋಪಿಸಿದ್ದಾರೆ.

2014ರಲ್ಲಿ ನೀರಜ್ ಶೇಖರ್ ಅವರು ಬಲಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ಭಾರತ್ ಸಿಂಗ್ ವಿರುದ್ಧ ಪರಾಭವಗೊಂಡಿದ್ದರು. ನಂತರ ಬಂದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು.

‘ಚಂದ್ರಶೇಖರ್ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರವಾದ ಬಲಿಯಾದಿಂದ ನನ್ನ ಸ್ಪರ್ಧೆಗೆ ಸಮಾಜವಾದಿ ಪಕ್ಷ ಟಿಕೆಟ್ ನಿರಾಕರಿಸಿದ್ದು ನನ್ನ ಜೀವನದ ಅತ್ಯಂತ ಕರಾಳ ದಿನ’ ಎಂದು ನೀರಜ್ ಹೇಳಿದ್ದರು. ಆದರೆ ಅದೇ ಸಮಾಜವಾದಿ ಪಾರ್ಟಿಯು ನೀರಜ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿತು. 2019ರಲ್ಲಿ ಅವರು ಪಕ್ಷ ತೊರೆದು, ಬಿಜೆಪಿ ಸೇರಿದರು.

ಬಲಿಯಾ ಕ್ಷೇತ್ರದಿಂದ ಈ ಮೊದಲು ಭರತ್ ಸಿಂಗ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸಂಸರಾಗಿದ್ದರು. ಅವರ ನಂತರದಲ್ಲಿ ಇದೇ ಕ್ಷೇತ್ರಕ್ಕೆ ವೀರೇಂದ್ರ ಸಿಂಗ್ ಮಸ್ತ್ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಈ ಬಾರಿ ನೀರಜ್ ಶೇಖರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

1968ರ ನ. 10ರಂದು ಜನಿಸಿದ ನೀರಜ್ ಶೇಖರ್ ಅವರು ತಂದೆ ಚಂದ್ರಶೇಖರ್ ಅವರ ನಿಧನದ ನಂತರ ರಾಜಕೀಯ ಪ್ರವೇಶಿಸಿದರು. 2007ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದರು. ಚಂದ್ರಶೇಖರ್ ಅವರು 1962ರಿಂದ 1977ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. 1977ರಲ್ಲಿ ಅವರು ಬಲಿಯಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1997ರ ಜುಲೈ 8ರಂದು ನಿಧನರಾದರು.

ಇಂದಿರಾ ಗಾಂಧಿ ಹತ್ಯೆಯ ನಂತರ ಸಿಖ್ ವಿರುದ್ಧ ಬುಗಿಲೆದ್ದ ಆಕ್ರೋಶದಿಂದಾಗಿ ಚಂದ್ರಶೇಖರ್ ಅವರು 1984ರಲ್ಲಿ ಪರಾಭವಗೊಂಡಿದ್ದರು. 1989ರಲ್ಲಿ ಬಲಿಯಾ ಮತ್ತು ಬಿಹಾರದ ಮಹಾರಾಜಗಂಜ್ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ, ಎರಡರಲ್ಲೂ ಗೆಲುವು ದಾಖಲಿಸಿದ್ದರು. ಮಹಾರಾಜಗಂಜ್ ಕ್ಷೇತ್ರವನ್ನು ನಂತರ ಬಿಟ್ಟುಕೊಟ್ಟರು.

2024ರಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಲಿಯಾ ಕ್ಷೇತ್ರಕ್ಕೆ 7ನೇ ಹಂತದಲ್ಲಿ (ಜೂನ್ 1ರಂದು) ಮತದಾನ ನಡೆಯಲಿದೆ. ಈ ಕ್ಷೇತ್ರಕ್ಕೆ ನೀರಜ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಆದರೆ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಈವರೆಗೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT