ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ನಾಯಕತ್ವದಲ್ಲಿ ದುರಹಂಕಾರ ತುಂಬಿದೆ: ಪಕ್ಷದ ಮಾಜಿ ಸಂಸದ ಸಂಜಯ್ ಕಿಡಿ

Published 4 ಏಪ್ರಿಲ್ 2024, 10:39 IST
Last Updated 4 ಏಪ್ರಿಲ್ 2024, 10:39 IST
ಅಕ್ಷರ ಗಾತ್ರ

ಮುಂಬೈ: 'ಪಕ್ಷದ ನಾಯಕತ್ವದಲ್ಲಿ ದುರಹಂಕಾರ ತುಂಬಿದೆ' – ಕಾಂಗ್ರೆಸ್‌ನಿಂದ ಬುಧವಾರವಷ್ಟೇ ಉಚ್ಚಾಟನೆಗೊಂಡಿರುವ ಮಹಾರಾಷ್ಟ್ರದ ಮಾಜಿ ಸಂಸದ ಸಂಜಯ್‌ ನಿರುಪಮ್‌ ಕಿಡಿಕಾರಿದ್ದು ಹೀಗೆ.

ನಗರದಲ್ಲಿ ಇಂದು (ಗುರುವಾರ) ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಜಯ್‌, ಇತಿಹಾಸದ ಪುಟ ಸೇರಿರುವ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ. ಕಾಂಗ್ರೆಸ್‌, ಶಿವಸೇನಾ–ಯುಬಿಟಿ (ಉದ್ಧವ್‌ ಠಾಕ್ರೆ ಬಣ) ಹಾಗೂ ಎನ್‌ಸಿಪಿ–ಎಸ್‌ಪಿ (ಶರದ್‌ಚಂದ್ರ ಪವಾರ್ ಬಣ) ಪಕ್ಷಗಳನ್ನೊಳಗೊಂಡ ಮಹಾ ವಿಕಾಸ ಆಘಾಡಿ (ಎಂವಿಎ) ಮೂರು ರೋಗಿಷ್ಠ ಘಟಕಗಳ ಒಕ್ಕೂಟವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮುಂಬೈ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಸಂಜಯ್‌, 'ಯಾರೆಲ್ಲ ನನ್ನ ರಾಜಕೀಯ ಅಂತ್ಯ ಬಯಸಿದ್ದರೋ ಅವರಿಗೆ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ನಿಂತ ನೆಲವೇ ಕುಸಿದಂತಾಗಲಿದೆ' ಎಂದು ಕುಟುಕಿದ್ದಾರೆ.

ಅಶಿಸ್ತು ಹಾಗೂ ಪಕ್ಷ ವಿರೋಧಿ ಹೇಳಿಕೆ ನೀಡಿದ ಆರೋಪಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಿರುಪಮ್‌ ವಿರುದ್ಧ ದೂರು ನೀಡಲಾಗಿತ್ತು. ಇವುಗಳನ್ನು ಗಂಭೀರವಾಗಿ ಪರಿಗಣಿಸಿರುವ ಖರ್ಗೆ, ಬುಧವಾರ ರಾತ್ರಿ ನಿರುಪಮ್‌ ಅವರನ್ನು ಆರು ವರ್ಷಗಳವರೆಗೆ ಪಕ್ಷದಿಂದ ಉಚ್ಚಾಟಿಸಿದ್ದಾರೆ.

ನಿರುಪಮ್‌, ಮುಂಬೈ ವಾಯವ್ಯ ಲೋಕಸಭೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್‌ ಈ ಕ್ಷೇತ್ರವನ್ನು ಎಂವಿಎ ಮೈತ್ರಿಕೂಟದ ಮಿತ್ರಪಕ್ಷ ಶಿವಸೇನಾ–ಯುಬಿಟಿಗೆ ಬಿಟ್ಟುಕೊಟ್ಟಿತ್ತು. ಇದರಿಂದ್ದ ಕೆರಳಿದ್ದ ನಿರುಪಮ್‌, ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕತ್ವವು ಮುಂಬೈ ಕ್ಷೇತ್ರಗಳನ್ನು ಉದ್ಧವ್‌ ಠಾಕ್ರೆ ಪಕ್ಷಕ್ಕೆ ಬಿಟ್ಟುಕೊಡುತ್ತಿದೆ ಎಂಬ ಆರೋಪ ಮಾಡಿದ್ದರು. ಹೀಗಾಗಿ, ಅವರ ವಿರುದ್ಧ ದೂರು ನೀಡಲಾಗಿತ್ತು.

ಈ ಸಂಬಂಧ ಮಾತನಾಡಿದ ಮಾಜಿ ಸಂಸದ, 'ನಾನು ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಗಳು ಕಾಂಗ್ರೆಸ್‌ ವಿರುದ್ಧವಾದವಲ್ಲ. ಆದರೆ, ಪಕ್ಷವನ್ನು ಶಿವಸೇನಾ–ಯುಬಿಟಿಗೆ ಶರಣಾಗಿಸಬೇಡಿ ಎಂಬುದು ನನ್ನ ಉದ್ದೇಶವಾಗಿತ್ತು' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT