ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಚಿವ ಪ್ರಮಾಣಿಕ್ ವಿರುದ್ಧ 14 ಕ್ರಿಮಿನಲ್ ಪ್ರಕರಣ: ಅಫಿಡವಿಟ್‌

Published 23 ಮಾರ್ಚ್ 2024, 9:33 IST
Last Updated 23 ಮಾರ್ಚ್ 2024, 9:33 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಲೋಕಸಭಾ ಚುನಾವಣೆಯಲ್ಲಿ ಕೂಚ್ ಬೆಹಾರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ನಿಷಿತ್ ಪ್ರಮಾಣಿಕ್ ಅವರ ವಿರುದ್ಧ ಒಟ್ಟು 14 ಕ್ರಿಮಿನಲ್ ಪ್ರಕರಣಗಳು ಇವೆ’ ಎಂಬ ಸಂಗತಿಯನ್ನು ಸ್ವತಃ ಅವರೇ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ದೃಢಪಡಿಸಿದ್ದಾರೆ.

ಗೃಹ ಇಲಾಖೆಯ ರಾಜ್ಯ ಸಚಿವರಾಗಿರುವ ನಿಷಿತ್ ವಿರುದ್ಧ ದಾಖಲಾಗಿರುವ 14 ಪ್ರಕರಣಗಳಲ್ಲಿ ಒಂಬತ್ತು ಪ್ರಕರಣಗಳು 2018ರಿಂದ 2020ರವರೆಗಿನವಾಗಿವೆ. ಉಳಿದ ಪ್ರಕರಣಗಳು 2009ರಿಂದ 2014ರವರೆಗಿನ ಅವಧಿಯಲ್ಲಿ ದಾಖಲಾಗಿವೆ.

ತೃಣಮೂಲ ಕಾಂಗ್ರೆಸ್‌ನಲ್ಲಿದ್ದ ನಿಷಿತ್ ಅವರು 2019ರಲ್ಲಿ ಬಿಜೆಪಿ ಸೇರಿದರು. 2018ರಲ್ಲಿ ನಡೆದಿದ್ದ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಬದಲು ಬೇರೆಯವರ ಗೆಲುವಿಗೆ ನಿಷಿತ್ ಪ್ರಯತ್ನ ನಡೆಸಿದ್ದರು ಎಂಬ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಇವರನ್ನು ಪಕ್ಷದಿಂದ ಉಚ್ಛಾಟಿಸಿತ್ತು.

ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳು ರಾಜಕೀಯ ಪ್ರೇರಿತ ಎಂದು ಅವರು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್‌ನೊಂದಿಗಿನ ನಂಟು ಮುರಿದ ಬಳಿಕ ಬಹಳಷ್ಟು ಕ್ರಿಮಿನಲ್ ಪ್ರಕರಣಗಳು ಅವರ ವಿರುದ್ಧ ದಾಖಲಾದವು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡರು ಹೇಳಿದ್ದಾರೆ.

ಸಚಿವ ನಿಷಿತ್ ವಿರುದ್ಧ ದಾಖಲಾಗಿರುವ ಬಹುತೇಕ ಪ್ರಕರಣಗಳು ಕೊಲೆಗೆ ಯತ್ನ, ದಂಗೆ ಮತ್ತು ಅನುಮತಿ ಇಲ್ಲದೆ ಸಭೆ ಸೇರಿರುವ ಪ್ರಕರಣಗಳಾಗಿವೆ. ಆದರೆ ಈ ಪ್ರಕರಣಗಳಲ್ಲಿ ತನಗೆ ಯಾವುದೇ ರೀತಿಯ ಶಿಕ್ಷೆಯಾಗಿಲ್ಲ ಎಂದು ಪ್ರಮಾಣಪತ್ರದಲ್ಲಿ ಅವರು ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ವಿರುದ್ಧ 11 ಪ್ರಕರಣಗಳು ದಾಖಲಾಗಿದ್ದವು ಎಂಬ ಅಂಶವನ್ನು ಅವರು ಪ್ರಮಾಣಪತ್ರದಲ್ಲಿ ಹೇಳಿದ್ದರು. 

ಇದರೊಂದಿಗೆ ಆದಾಯ ಮಾಹಿತಿಯನ್ನೂ ಹಂಚಿಕೊಂಡಿರುವ ನಿಷಿತ್, ‘2022–23ನೇ ಸಾಲಿನಲ್ಲಿ ₹10.72 ಲಕ್ಷ ಇತ್ತು. 2023–24ನೇ ಸಾಲಿನಲ್ಲಿ ಇದು ₹12.34 ಲಕ್ಷಕ್ಕೆ ಏರಿಕೆಯಾಗಿದೆ. ತಾನು ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕನಾಗಿ ಕೆಲಸ ಮಾಡಿದ್ದೆ. ಪತ್ನಿ ಗೃಹಿಣಿಯಾಗಿದ್ದಾರೆ ಎಂದು ತಮ್ಮ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

ಕೂಚ್ ಬೆಹಾರ್ ಲೋಕಸಭಾ ಕ್ಷೇತ್ರಕ್ಕೆ ಏ. 19ರಂದು ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT