ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ | ಕಾಂಗ್ರೆಸ್ ಸೋಲಿಗೆ ಕಾರಣ ಯಾರು?

ಆತ್ಮಾವಲೋಕನ ಸಭೆಗೆ ಮುಖಂಡರ ಒತ್ತಾಯ: ಮೌನಕ್ಕೆ ಜಾರಿದ ನಾಯಕರು
Published 6 ಜೂನ್ 2024, 4:37 IST
Last Updated 6 ಜೂನ್ 2024, 4:37 IST
ಅಕ್ಷರ ಗಾತ್ರ

ಕಾರವಾರ: ಒಂದು ಕಾಲದಲ್ಲಿ ಕಾಂಗ್ರೆಸ್ ಪಾಲಿನ ಭದ್ರಕೋಟೆ ಎನಿಸಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ‘ಕೈ’ ಜಾರಿ ಎರಡು ದಶಕ ಕಳೆದಿದೆ. ಈ ಬಾರಿಯಾದರೂ ಮರುವಶ ಮಾಡಿಕೊಳ್ಳಬಹುದು ಎಂಬ ಆ ಪಕ್ಷದ ನಾಯಕರ ನಂಬಿಕೆ ಹುಸಿಯಾಗಿದೆ.

ಸೋತ ಬಳಿಕ ಅಭ್ಯರ್ಥಿಯೂ ಸೇರಿದಂತೆ ಬಹುತೇಕ ನಾಯಕರು ಮೌನಕ್ಕೆ ಜಾರಿದ್ದಾರೆ. ಆತ್ಮಾವಲೋಕನ ಸಭೆ ನಡೆಸಿ ಸೋಲಿಗೆ ಚರ್ಚಿಸಬೇಕು ಎಂದು ಕೆಲವರು ಒತ್ತಾಯಿಸತೊಡಗಿದ್ದಾರೆ.

8 ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಒಳಗೊಂಡಿರುವ ಈ ಕ್ಷೇತ್ರದಲ್ಲಿ 5 ಮಂದಿ ಕಾಂಗ್ರೆಸ್, 3 ಬಿಜೆಪಿ ಶಾಸಕರಿದ್ದಾರೆ. ಬಿಜೆಪಿಯ ಶಾಸಕರ ಪೈಕಿ ಯಲ್ಲಾಪುರದ ಶಿವರಾಮ ಹೆಬ್ಬಾರ ಬಿಜೆಪಿಯೊಳಗಿದ್ದರೂ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿಯಾಗದಿರುವುದು ನಾನಾ ಪ್ರಶ್ನೆ ಹುಟ್ಟುಹಾಕಿದೆ. ಅಲ್ಲದೆ ಎಂಟೂ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಬಿಜೆಪಿ ಮತ ಗಳಿಕೆಯಲ್ಲಿ ಮುನ್ನಡೆ ಸಾಧಿಸಿದ್ದು ಮತ್ತಷ್ಟು ಚಿಂತೆ ಸೃಷ್ಟಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪ್ರತಿನಿಧಿಸುವ ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ 32 ಸಾವಿರಕ್ಕಿಂತ ಹೆಚ್ಚು, ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಪ್ರತಿನಿಧಿಸುವ ಹಳಿಯಾಳದಲ್ಲಿ 28 ಸಾವಿರಕ್ಕೂ ಹೆಚ್ಚು ಹಿನ್ನಡೆ ಅನುಭವಿಸಿದೆ.

ವರ್ಷದ ಹಿಂದಷ್ಟೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಕಾಂಗ್ರೆಸ್ ಶಾಸಕರ ಬಲ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮತ ತಂದುಕೊಡಬಹುದು ಎಂಬ ಲೆಕ್ಕಾಚಾರದಲ್ಲಿತ್ತು. ಆತ್ಮವಿಶ್ವಾಸದ ಕಾರಣಕ್ಕೆ ಮಹಿಳಾ ಅಭ್ಯರ್ಥಿ ಕಣಕ್ಕಿಳಿಸಿತ್ತು.

‘ಬಿಜೆಪಿ ವಿರುದ್ಧ ಜನರು ಅಸಮಾಧಾನಗೊಂಡಿದ್ದರ ಪರಿಣಾಮದಿಂದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಂಡಿದ್ದ ಪಕ್ಷದ ಶಾಸಕರಿಗೆ, ನಂತರ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆ ಅನುಕೂಲವಾಗಿದೆ. ಈ ಮೂಲಕ ಜನರ ವಿಶ್ವಾಸ ಗಳಿಸಿ ಚುನಾವಣೆಯಲ್ಲಿ ಗೆಲುವು ತಂದುಕೊಡಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿರುವುದು ಆಘಾತವನ್ನೇ ತಂದಿದೆ’ ಎಂದು ಕಾಂಗ್ರೆಸ್‍ನ ರಾಜ್ಯಮಟ್ಟದ ಪದಾಧಿಕಾರಿಯೊಬ್ಬರು ಬೇಸರ ತೋಡಿಕೊಂಡರು.

‘ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಜಿಲ್ಲೆಯ ಪರಿಚಯ ಹೊಸತು. ಪ್ರಚಾರ ಕಾರ್ಯ ಜೋಡಣೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗೆ ಅವರು ಬಹುತೇಕ ಸಚಿವ, ಶಾಸಕರನ್ನೇ ಅವಲಂಬಿಸಿದ್ದರು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವ ಕೆಲಸವೂ ಸರಿಯಾಗಿ ನಡೆಯಲಿಲ್ಲ. ಬೂತ್‍ಮಟ್ಟದ ಪ್ರಚಾರದಲ್ಲಿ ಹಿನ್ನಡೆ ಅನುಭವಿಸಿದ್ದು ಸೋಲಿಗೆ ಕಾರಣವಾಯಿತು’ ಎಂದು ಕಾಂಗ್ರೆಸ್‍ನ ಹಿರಿಯ ಕಾರ್ಯಕರ್ತರೊಬ್ಬರು ವಿಶ್ಲೇಷಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ?

ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ 3.78 ಲಕ್ಷ ಮತಗಳ ಅಂತರದಿಂದ ಸೋಲು ಕಂಡಿರುವುದಕ್ಕೆ ಯಾರ ತಲೆದಂಡವಾಗಬಹುದು ಎಂಬ ಚರ್ಚೆ ಪಕ್ಷದ ವಲಯದೊಳಗೆ ನಡೆಯುತ್ತಿದೆ. ಉಸ್ತುವಾರಿ ಸಚಿವರು ಬದಲಾಗಬಹುದೋ, ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ನಡೆಯಬಹುದೋ ಎಂಬುದು ಚರ್ಚೆಗೊಳಗಾಗಿದೆ.

‘ಲೋಕಸಭೆ ಚುನಾವಣೆಗೆ ಮುನ್ನವೇ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ಚರ್ಚೆ ನಡೆದಿತ್ತು. ಕೆಲ ಶಾಸಕರು ವಿರೋಧಿಸಿದ್ದರಿಂದ ಪಕ್ಷ ನಿರ್ಧಾರದಿಂದ ಹಿಂದೆ ಸರಿಯಿತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಮುನ್ನ ಬದಲಾವಣೆಯಾಗಬಹುದು’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.

‘ಪಕ್ಷ ಸಂಘಟನೆಗೆ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ. ಇದು ಪಕ್ಷದ ವರಿಷ್ಠರಿಗೂ ಗೊತ್ತಿದೆ. ಅಭ್ಯರ್ಥಿ ತನ್ನ ಸ್ವಕ್ಷೇತ್ರ ಖಾನಾಪುರ, ಕಿತ್ತೂರಿನಲ್ಲಿಯೂ ಹಿನ್ನಡೆ ಅನುಭವಿಸಿದ್ದಾರೆ. ಸೋಲಿನ ಕಾರಣಕ್ಕೆ ನನ್ನ ಸ್ಥಾನ ಬದಲಾವಣೆಯಾಗದು ಎಂಬ ವಿಶ್ವಾಸವಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT