ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮತ ಸುರಕ್ಷಿತ: ಮತಗಟ್ಟೆಗೆ ಬಂದು ಮತ ಚಲಾಯಿಸಿ: CEC ರಾಜೀವ್ ಕುಮಾರ್

Published 19 ಏಪ್ರಿಲ್ 2024, 10:46 IST
Last Updated 19 ಏಪ್ರಿಲ್ 2024, 10:46 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕುರಿತು ಎದ್ದಿರುವ ವದಂತಿ ಹಾಗೂ ಆತಂಕಗಳಿಗೆ ತೆರೆ ಎಳೆದಿರುವ ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ‘ಮತದಾರರು ದಾಖಲಿಸಿದ ಮತಗಳು ಸುರಕ್ಷಿತವಾಗಿರಲಿವೆ ಮತ್ತು ಭದ್ರವಾಗಿರಲಿವೆ’ ಎಂದು ಭರವಸೆ ನೀಡಿದ್ದಾರೆ.

ಇವಿಎಂಗಳು ಶೇ 100ರಷ್ಟು ಸುರಕ್ಷಿತ. ಇದರಲ್ಲಿ ದೊಡ್ಡ ಪ್ರಮಾಣದ ಸುರಕ್ಷತಾ ವ್ಯವಸ್ಥೆ, ತಂತ್ರಜ್ಞಾನದ ಬೇಲಿ, ಆಡಳಿತಾತ್ಮಕ ರಕ್ಷಣೆ ಇದೆ. ವಿದ್ಯುನ್ಮಾನ ಮತಯಂತ್ರ ಸುರಕ್ಷಿತ ಎಂಬುದನ್ನು ನ್ಯಾಯಾಲಯವೇ ಹೇಳಿದೆ. ಮತಯಂತ್ರಕ್ಕೆ ಯಾವುದೇ ಪ್ರತಿತಂತ್ರ ಮಾಡಲು ಸಾಧ್ಯವಿಲ್ಲ. ಇದರ ಪ್ರತಿ ಹಂತದಲ್ಲೂ ಎಲ್ಲಾ ರಾಜಕೀಯ ಪಕ್ಷದವರು ಹಾಗೂ ಅಭ್ಯರ್ಥಿಗಳನ್ನು ಒಳಗೊಂಡೇ ಯಂತ್ರಗಳನ್ನು ಸಿದ್ಧಪಡಿಸಲಾಗುತ್ತದೆ. ಅಣಕು ಮತದಾನಗಳೂ ನಡೆದಿವೆ. ಹೀಗಾಗಿ ಮತ ಯಂತ್ರದ ಮೇಲೆ ಯಾವುದೇ ಅನುಮಾನವಿಟ್ಟುಕೊಳ್ಳದೇ, ಮತದಾನದ ಹಕ್ಕನ್ನು ಸಂಭ್ರಮಿಸಬೇಕು’ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಯು ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಇಂದು (ಶುಕ್ರವಾರ) 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

‘ಮೊದಲ ಹಂತದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದ್ದರೂ, ಜನರು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ. ಮಹಿಳೆಯರು, ಯುವಕರು ಹಾಗೂ ಹಿರಿಯರು ಸೇರಿದಂತೆ ಪ್ರತಿಯೊಬ್ಬರೂ ಮತಗಟ್ಟೆಗಳತ್ತ ಹೆಜ್ಜೆ ಹಾಕುತ್ತಿರುವುದು ಕಂಡುಬರುತ್ತಿದೆ. ಪ್ರಜಾಪ್ರಭುತ್ವದ ಹಬ್ಬವನ್ನು ಜನರು ಸಂಭ್ರಮಿಸುತ್ತಿರುವುದನ್ನು ನೋಡುವುದೇ ಸಂಭ್ರಮ’ ಎಂದಿದ್ದಾರೆ.

‘ಮತದಾನ ಪ್ರಮಾಣ ಹೆಚ್ಚಳಕ್ಕೆ ಚುನಾವಣಾ ಆಯೋಗವು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿದೆ. ಮತದಾನ ಪ್ರಮಾಣ ಕುಸಿದ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು, ಅಲ್ಲಿನ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆ ಭಾಗದ ಮಹಿಳೆಯರು ಹಾಗೂ ಯುವ ಜನರಿಗೆ ತಲುಪಿದೆ’ ಎಂದು ರಾಜೀವ್ ಕುಮಾರ್ ತಿಳಿಸಿದರು.

‘ಮತದಾನ ಪ್ರಮಾಣ ಹೆಚ್ಚಳದ ಭಾಗವಾಗಿ ಬಹಳಷ್ಟು ಸೆಲೆಬ್ರಿಟಿಗಳು ಮತದಾನದಲ್ಲಿ ಭಾಗಿಯಾಗಿ ಮಾದರಿಯಾಗಿದ್ದಾರೆ. ಬಹಳಷ್ಟು ಸಂಸ್ಥೆಗಳು ಆಯೋಗದೊಂದಿಗೆ ಕೈಜೋಡಿಸಿವೆ. ಪೆಟ್ರೋಲ್ ಬಂಕ್‌, ಬ್ಯಾಂಕ್, ಅಂಚೆ ಕಚೇರಿ ಮೂಲಕವೂ ಮತದಾನ ಜಾಗೃತಿ ಕಾರ್ಯಕ್ರಮ ಮೂಡಿಸಲಾಗಿದೆ’ ಎಂದಿದ್ದಾರೆ.

‘ಚುನಾವಣಾ ಪ್ರಕ್ರಿಯೆಯ ಉಸ್ತುವಾರಿಯನ್ನು ಆಯೋಗದ ಆಯುಕ್ತರಾದ ಗ್ಯಾನೇಶ್ ಕುಮಾರ್ ಹಾಗೂ ಎಸ್.ಎಸ್.ಸಂಧು ಅವರೂ ನೋಡಿಕೊಳ್ಳುತ್ತಿದ್ದಾರೆ’ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT