ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಲೋಕಸಭೆ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಅಂತ್ಯ: ಮತ ಸೆಳೆತಕ್ಕೆ ‘ಒಳ’ತಂತ್ರ

Published 24 ಏಪ್ರಿಲ್ 2024, 21:36 IST
Last Updated 24 ಏಪ್ರಿಲ್ 2024, 21:36 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ನಂತರ ಬೇಸಿಗೆ ಬಿರುಬಿಸಿಲಿಗಿಂತ ಮಿಗಿಲಾಗಿ ಪ್ರಚಾರದ ಅಬ್ಬರ, ರಾಜಕೀಯ ಪಕ್ಷಗಳ ನಾಯಕರ ಮಾತಿನ ಮೇಲಾಟಗಳಿಗೆ ಭೂಮಿಕೆಯಾಗಿದ್ದ 14 ಕ್ಷೇತ್ರಗಳಲ್ಲಿನ ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆ 6ಕ್ಕೆ ತೆರೆ ಬಿದ್ದಿದೆ. ಮತಗಟ್ಟೆಗೆ ತೆರಳುವ ಮತದಾರರನ್ನು ನಾನಾ ರೀತಿ ‘ಓಲೈಸುವ’ ಒಳತಂತ್ರ ಆರಂಭವಾಗಿದೆ.

ಕಳೆದ ತಿಂಗಳು ಚುನಾವಣಾ ಅಧಿಸೂಚನೆ ಹೊರಗಿದ್ದ ನಂತರ ಹಳೇ ಮೈಸೂರು ಪ್ರಾಂತ್ಯದ ವ್ಯಾಪ್ತಿ ಒಳಗೊಂಡ ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರದ ಅಬ್ಬರ ಮೇರೆ ಮೀರಿತ್ತು. ‍‍‍ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ಮೈತ್ರಿಕೂಟದ ಅಭ್ಯರ್ಥಿಗಳ ಪರ ರ್‍ಯಾಲಿ, ರೋಡ್ ಶೋ ನಡೆಸಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಕ್ಷೇತ್ರಗಳೂ ಮೊದಲ ಹಂತದ ವ್ಯಾಪ್ತಿಯಲ್ಲಿರುವ ಕಾರಣ ಇಬ್ಬರೂ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸ್ವತಃ ಮಂಡ್ಯದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು ಚುನಾವಣೆಯ ಕಾವನ್ನು ಇನ್ನಷ್ಟು ಹೆಚ್ಚಿಸಿತ್ತು. ಬಹಿರಂಗ ಪ್ರಚಾರದ ಕೊನೆಯ ದಿನವೂ ಕುಮಾರಸ್ವಾಮಿ ಮಂಡ್ಯದಲ್ಲಿ ರೋಡ್‌ ಶೋ ನಡೆಸಿ, ಬಿರುಸಿನ ಪ್ರಚಾರ ನಡೆಸಿದರು.

ಈ ಇಳಿವಯಸ್ಸಿನಲ್ಲೂ ಪುತ್ರನ ಜತೆಗೆ ಇತರೆ ಕ್ಷೇತ್ರಗಳಲ್ಲೂ ಚುರುಕಿನ ಚುನಾವಣಾ ಪ್ರಚಾರ ಕೈಗೊಂಡ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಗುಡುಗಿದ್ದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೈತ್ರಿಕೂಟದ ಅಭ್ಯರ್ಥಿಗಳ ಪರ, ಜೆಡಿಎಸ್‌ ನಾಯಕರ ಜತೆಗೆ ಅನೇಕ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡರು.‌

ಎರಡು ದಿನ ಯಾವ ನಾಯಕರು ಎಲ್ಲಿ?

ಏ. 25ರಂದು ಮನೆಮನೆ ಪ್ರಚಾರಕ್ಕೆ ಅವಕಾಶವಿದ್ದು, 26ರಂದು ಮತದಾನ ನಡೆಯಲಿದೆ. ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಬೀದರ್‌ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಶುಕ್ರವಾರವೂ ಚುನಾವಣಾ ಪ್ರಚಾರದಲ್ಲಿರುತ್ತಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದಾವಣಗೆರೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಇಬ್ಬರ ಮತವೂ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿದ್ದು, ಇಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಅವರು ಗುರುವಾರ ಮತ್ತು ಶುಕ್ರವಾರ ಬೆಂಗಳೂರಿನಲ್ಲೇ ಇರಲಿದ್ದಾರೆ.

ಜೆಡಿಎಸ್‌ ನಾಯಕರಾದ ಎಚ್‌.ಡಿ. ದೇವೇಗೌಡ ಅವರು ಹಾಸನ, ಎಚ್‌.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಠಿಕಾಣಿ ಹೂಡುವರು. ಕೊನೆಯ ದಿನ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹುಬ್ಬಳ್ಳಿಗೆ ತೆರಳಿ, ಮತದಾನದ ದಿನ ಸ್ವಕ್ಷೇತ್ರ ಮೈಸೂರಿಗೆ ಮರಳುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಕನಕಪುರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಗುರುವಾರ ಬೆಂಗಳೂರಿನಲ್ಲಿರುವರು.

ಬೆಂ. ಗ್ರಾಮಾಂತರದಲ್ಲಿ ತೀವ್ರ ನಿಗಾ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತೀವ್ರ ನಿಗಾ ವಹಿಸಲಿದ್ದು, ಎಲ್ಲ 2,829 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಮಾಡಲಾಗುವುದು. ಭದ್ರತೆಗಾಗಿ ಅರೆ ಸೇನಾಪಡೆಗಳ ಏಳು ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್ ಮೀನಾ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಚುನಾವಣಾಧಿಕಾರಿಗಳು ಮತ್ತು ವೀಕ್ಷಕರ ಕೋರಿಕೆ, ವರದಿ ಆಧರಿಸಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಅರೆ ಸೇನಾಪಡೆ ತುಕಡಿಗಳ ನಿಯೋಜನೆ ಎರಡು ಪಟ್ಟು ಇರಲಿದೆ’ ಎಂದರು.

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲೂ ಎಲ್ಲ 2,202 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು ಎಂದರು.

ಮತಗಟ್ಟೆಯಲ್ಲಿನ ಪ್ರತಿ ಸೆಕೆಂಡ್ ಅವಧಿಯ ಬೆಳವಣಿಗೆಯು ವೆಬ್‌ ಕಾಸ್ಟಿಂಗ್‌ನಲ್ಲಿ ಲಭ್ಯವಾಗಲಿದೆ.

ದ್ವೇಷ ಭಾಷಣ: 23 ಪ್ರಕರಣ

ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ವಿವಿಧ ರಾಜಕೀಯ ಪಕ್ಷಗಳ ವಿರುದ್ಧ 23 ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌‌ ಮೀನಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದ್ವೇಷ ಭಾಷಣದ ಆರೋಪದಡಿ ಬಿಜೆಪಿ ನಾಯಕರ ವಿರುದ್ಧ 12, ಕಾಂಗ್ರೆಸ್‌ ನಾಯಕರ ವಿರುದ್ಧ ಒಂಬತ್ತು ಮತ್ತು ಜೆಡಿಎಸ್ ನಾಯಕರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಹೇಳಿದರು.

ಮತದಾರರಿಗೆ ಆಮಿಷ ಒಡ್ಡಿದ ಆರೋಪದಡಿ 28 ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ವಿರುದ್ಧ 8, ಕಾಂಗ್ರೆಸ್‌ ವಿರುದ್ಧ 9 ಮತ್ತು ಜೆಡಿಎಸ್‌ ವಿರುದ್ಧ 3 ಹಾಗೂ ಪಕ್ಷೇತರರ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿವೆ. ಪ್ರಚಾರಕ್ಕೆ ಧಾರ್ಮಿಕ ಸ್ಥಳಗಳನ್ನು ಬಳಸಿಕೊಂಡ ಆರೋಪದಡಿ ಬಿಜೆಪಿ ವಿರುದ್ಧ 8, ಕಾಂಗ್ರೆಸ್‌ ವಿರುದ್ಧ 6 ಮತ್ತು ಜೆಡಿಎಸ್‌ ವಿರುದ್ಧ 1 ಪ್ರಕರಣ ದಾಖಲಿಸಲಾಗಿದೆ ಗಂಭೀರ ಸ್ವರೂಪದ ಚುನಾವಣಾ ಮಾದರಿ ಸಂಹಿತೆ ಉಲ್ಲಂಘನೆ ಆರೋಪ ದಡಿ ಈವರೆಗೆ 189 ಪ್ರಕರಣ ದಾಖಲು ಮಾಡಲಾಗಿದೆ ಎಂದು ವಿವರಿಸಿದರು.

ಮೊದಲ ಹಂತ

14: ಕ್ಷೇತ್ರಗಳು

2,88,19,342: ಮತದಾರರು

30,602: ಮತಗಟ್ಟೆಗಳು

1.40 ಲಕ್ಷ: ಮತಗಟ್ಟೆ ಸಿಬ್ಬಂದಿ

5,000: ಸೂಕ್ಷ್ಮ ವೀಕ್ಷಕರು

50,000: ಪೊಲೀಸ್‌ ಸಿಬ್ಬಂದಿ

65: ಅರೆಸೇನಾ ಪಡೆ ತುಕಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT