ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ದಕ್ಷಿಣ: ಯುವ ಹುರಿಯಾಳುಗಳ ಹಣಾಹಣಿ

ಬಿಜೆಪಿಯ ಭದ್ರಕೋಟೆ ಎನಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
Published 16 ಏಪ್ರಿಲ್ 2024, 20:48 IST
Last Updated 16 ಏಪ್ರಿಲ್ 2024, 20:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ಭದ್ರಕೋಟೆ ಎನಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಆರಂಭದಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಯಾರೂ ತಯಾರಿರಲಿಲ್ಲ. ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಸ್ಪರ್ಧಿಸುವಂತೆ ಪಕ್ಷ ಕೋರಿದಾಗ ಅವರು ನಿರಾಕರಿಸಿದ್ದರು. ಅಂತಿಮವಾಗಿ ಅವರ ಪುತ್ರಿಗೆ ಟಿಕೆಟ್‌ ನೀಡಲಾಗಿದೆ. ಸೌಮ್ಯಾರೆಡ್ಡಿ ಚುರುಕಿನಿಂದ ಪ್ರಚಾರದಲ್ಲಿ ತೊಡಗಿದ್ದಾರೆ.

ಕಳೆದ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸ್ಪರ್ಧಿಸಿದ್ದರು. ಈ ಬಾರಿ ಇಬ್ಬರೂ ಯುವ ವಯಸ್ಸಿವರು ಆಗಿರುವುದು, ಸ್ಪರ್ಧೆಯ ತುರುಸು ಹೆಚ್ಚಲು ಕಾರಣವಾಗಿದೆ. ಮುಖ್ಯವಾಗಿ ಸೌಮ್ಯಾ ಅವರ ತಂದೆ ರಾಮಲಿಂಗಾರೆಡ್ಡಿ ಅವರು ಈ ಪ್ರದೇಶದಲ್ಲಿ ಪಳಗಿದ ರಾಜಕಾರಣಿ, ತಮ್ಮ ಪುತ್ರಿಯನ್ನು ಗೆಲ್ಲಿಸಿಕೊಳ್ಳಲು ರಾಜಕೀಯದ ಎಲ್ಲ ಪಟ್ಟುಗಳನ್ನು ಬಳಸುವುದು ನಿಶ್ಚಿತ.

ತೇಜಸ್ವಿ ಸೂರ್ಯ ಒಂದು ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸಿರುವುದರಿಂದ ಕ್ಷೇತ್ರ ಪರಿಚಯ ಸಾಕಷ್ಟು ಚೆನ್ನಾಗಿಯೇ ಇದೆ. ಕ್ಷೇತ್ರದಲ್ಲಿ ಅನಂತಕುಮಾರ್‌ ಸಂಸದರಾಗಿದ್ದಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಹೀಗಾಗಿ ದೊಡ್ಡ ಮಟ್ಟದ ಅಭಿವೃದ್ಧಿ ಕೆಲಸಗಳು ಇಲ್ಲದೇ ಹೋದರೂ, ಸ್ಥಳೀಯ ಮಟ್ಟದ ಸಮಸ್ಯೆಗಳೂ ತೇಜಸ್ವಿ ಅವರನ್ನು ಕಾಡುತ್ತಿವೆ. ತಮ್ಮ ಮಾತಿನ ಚಾಕಚಕ್ಯತೆ ಮತ್ತು ಬುದ್ಧಿವಂತಿಕೆಯಿಂದ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದರೂ, ಸ್ಥಳೀಯವಾಗಿ ಪಕ್ಷದ ಶಾಸಕರು, ನಾಯಕರು ಮತ್ತು ಅಧಿಕಾರಿಗಳ ಮೇಲೆ ಹಿಡಿತ ಹೊಂದಲು ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಚಿಕ್ಕ ವಯಸ್ಸೂ ಕಾರಣ ಎಂಬ ಅಭಿಪ್ರಾಯವಿದೆ.

ಬೆಂಗಳೂರಿನ ಅಭಿವೃದ್ಧಿ ಮತ್ತು ಮೋದಿ ಅವರ 10 ವರ್ಷಗಳ ಸಾಧನೆಯ ಆಧಾರದಲ್ಲಿ ಅವರು ಚುನಾವಣೆ ಎದುರಿಸುತ್ತಿದ್ದಾರೆ. ಇನ್ನೂ ಹೊಸ ಹೊಸ ಯೋಜನೆಗಳನ್ನು ಬೆಂಗಳೂರಿಗೆ ತರುವ ಮಾತುಗಳನ್ನೂ ಆಡುತ್ತಿದ್ದಾರೆ.

ಮತ್ತೊಂದು ಕಡೆ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಅವರು ತೇಜಸ್ವಿಯವರ ವೈಫಲ್ಯಗಳನ್ನು ಪಟ್ಟಿ ಮಾಡಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ. ಇದರಲ್ಲಿ ಮುಖ್ಯವಾಗಿ ಗುರುರಾಘವೇಂದ್ರ ಬ್ಯಾಂಕ್‌ ಪ್ರಕರಣವನ್ನು ಪ್ರಬಲ ಅಸ್ತ್ರವಾಗಿ ಬಳಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಅವರ ವಿರುದ್ಧವೂ ಇದೇ ಅಸ್ತ್ರ ಬಳಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಸೌಮ್ಯಾ ಪರ ಪ್ರಚಾರವನ್ನೂ ನಡೆಸಿದ್ದಾರೆ. ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಒಕ್ಕಲಿಗರು, ರೆಡ್ಡಿ ಸಮುದಾಯದವರ ಮತಗಳನ್ನು ಕಬಳಿಸಲು ಶಿವಕುಮಾರ್ ಹಾಗೂ ರಾಮಲಿಂಗಾರೆಡ್ಡಿ ತಮ್ಮ ಶಕ್ತಿಯನ್ನೇ ಪಣಕ್ಕೆ ಒಡ್ಡಿದ್ದಾರೆ. ಈ ತಂತ್ರ ಯಶಸ್ವಿಯಾದರೆ, ತೇಜಸ್ವಿ ಸೂರ್ಯ ದೊಡ್ಡ ಸವಾಲನ್ನೇ ಎದುರಿಸಬೇಕಾಗುತ್ತದೆ.

ದಿವಂಗತ ಅನಂತಕುಮಾರ್ ಅವರ ಕುಟುಂಬ ಪಕ್ಷದ ಚಟುವಟಿಕೆಯಿಂದ ದೂರು ಉಳಿದು ಮೌನಕ್ಕೆ ಶರಣಾಗಿರುವುದು ಕೂಡ ಬಿಜೆಪಿಗೆ ತುಸು ಹಿನ್ನಡೆ ತರುವ ಸಾಧ್ಯತೆ ಇದೆ.

ಈ ಕ್ಷೇತ್ರದಲ್ಲಿ ಬಹಳ ಹಿಂದಿನಿಂದಲೂ ಕಾಂಗ್ರೆಸ್ಸೇತರ ಪಕ್ಷಗಳೇ ಗೆಲ್ಲುತ್ತಾ ಬಂದಿವೆ. 90 ರ ದಶಕದಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಇಲ್ಲಿನ ಮತದಾರರ ಮನಸ್ಸು ಗೆಲ್ಲಲು ಕಾಂಗ್ರೆಸ್‌ ಪಕ್ಷ ಯಾವ ದಾಳ ಉರುಳಿಸುತ್ತದೆ, ಸೌಮ್ಯಾ ಬಿಜೆಪಿ ಕೋಟೆ ಕೆಡವುತ್ತಾರೆಯೇ ಎಂಬುದನ್ನು ಕಾದು ನೋಡಬೇಕು. 

ಸೌಮ್ಯಾ ರೆಡ್ಡಿ
ಸೌಮ್ಯಾ ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT