ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲ್ಲಬಹುದಾದ ಕ್ಷೇತ್ರಗಳು ಬಿಜೆಪಿ ಕೈತಪ್ಪಿದ್ದು ಹೇಗೆ?: ಆತ್ಮಾವಲೋಕನ ಶುರು

ಪಕ್ಷದೊಳಗೆ ಆರಂಭವಾದ ಆತ್ಮಾವಲೋಕನ
Published 5 ಜೂನ್ 2024, 13:46 IST
Last Updated 5 ಜೂನ್ 2024, 13:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಗೆಲ್ಲಬಹುದಾಗಿದ್ದ ನಾಲ್ಕರಿಂದ ಐದು ಸ್ಥಾನಗಳನ್ನು ಕಳೆದುಕೊಂಡ ಬಗ್ಗೆ ಬಿಜೆಪಿಯಲ್ಲಿ ಆತ್ಮಾವಲೋಕನ ಆರಂಭವಾಗಿದೆ.

ಕಳೆದ ಎರಡು– ಮೂರು ಚುನಾವಣೆಗಳಲ್ಲಿ ಗೆದ್ದವರು ಈ ಬಾರಿ ಸೋತು ಹೋಗಿದ್ದಾರೆ. ಬಿಜೆಪಿ ಭದ್ರಕೋಟೆ ಎನಿಸಿದ್ದ ಕ್ಷೇತ್ರಗಳು ಛಿದ್ರವಾಗಿವೆ. ಇದರ ಕಾರಣಗಳ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ.

ಈ ಕ್ಷೇತ್ರಗಳಲ್ಲಿ ಕೆಲವು ಅಭ್ಯರ್ಥಿಗಳು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದರು. ಕಾರ್ಯಕರ್ತರ ವಿರೋಧವೂ ಇತ್ತು. ಆದರೆ, ಪಕ್ಷದ ವರಿಷ್ಠರು ಇವೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಮನಬಂದಂತೆ ಟಿಕೆಟ್‌ ಹಂಚಿದ ಕಾರಣ ದಾವಣಗೆರೆ, ಬೀದರ್‌, ಚಿಕ್ಕೋಡಿ, ರಾಯಚೂರು, ಬಳ್ಳಾರಿ ಕ್ಷೇತ್ರಗಳು ಕೈತಪ್ಪಿ ಹೋಗಿವೆ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಚರ್ಚೆಗೆ ಈಡಾಗಿದೆ.

ದಾವಣಗೆರೆ ಕ್ಷೇತ್ರದಲ್ಲಿ ಜಿ.ಎಂ. ಸಿದ್ಧೇಶ್ವರ ಅವರು ಅನಾರೋಗ್ಯದ ಕಾರಣ ಕಣಕ್ಕೆ ಇಳಿಯಲು ಹಿಂದೇಟು ಹಾಕಿದ್ದರು. ಕುಟುಂಬವನ್ನು ಬಿಟ್ಟು ಬೇರೆಯವರಿಗೆ ಟಿಕೆಟ್‌ ನೀಡಲು ಪ‍ಕ್ಷದ ನಾಯಕರು ಸಿದ್ಧವಿರಲಿಲ್ಲ.  ಗಾಯತ್ರಿ ಸಿದ್ದೇಶ್ವರ ಬದಲಿಗೆ ಬೇರೆ ಸಮರ್ಥರಿಗೆ ಟಿಕೆಟ್‌ ಕೊಟ್ಟಿದ್ದರೆ, ಗೆಲ್ಲುವ ಅವಕಾಶವಿತ್ತು. ಜಿಲ್ಲೆಯ ಎಲ್ಲ ಮುಖಂಡರೂ ಶ್ರಮಿಸಿ ಗೆಲ್ಲಿಸಿಕೊಂಡು ಬರುವ ಸಾಧ್ಯತೆ ಇತ್ತು ಎಂದು ಬಿಜೆಪಿ ಮೂಲಗಳು ಹೇಳಿವೆ.

ಬೀದರ್‌ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಭಗವಂತ್‌ ಖೂಬ ಅವರಿಗೆ ಟಿಕೆಟ್ ನೀಡುವುದಕ್ಕೆ ಶಾಸಕ ಪ್ರಭು ಚವ್ಹಾಣ ಸೇರಿ ಕೆಲವು ಮಾಜಿ ಶಾಸಕರು ಮತ್ತು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧ ವ್ಯಕ್ತಪಡಿಸಿದವರಿಗೇ ಪಕ್ಷದ ನಾಯಕರು ಎಚ್ಚರಿಕೆ ನೀಡಿದ್ದರು. ಅಭ್ಯರ್ಥಿ ಬದಲಾವಣೆ ಮಾಡಿದ್ದರೆ ಪಕ್ಷ ಗೆಲ್ಲುವ ಸಾಧ್ಯತೆ ಇತ್ತು ಎಂದು ಮೂಲಗಳು ತಿಳಿಸಿವೆ.

ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರು ಆಡಳಿತ ವಿರೋಧಿ ಅಲೆ ಎದುರಿಸಿದ್ದರು. ಮಾಜಿ ಸಂಸದ ರಮೇಶ ಕತ್ತಿ ಪ್ರಬಲ ಆಕಾಂಕ್ಷಿಯಾಗಿದ್ದರು. ಕತ್ತಿ ಸ್ಪರ್ಧಿಸಿದ್ದರೆ, ಗೆಲ್ಲುವ ಸಾಧ್ಯತೆ ಇತ್ತು ಎಂಬ ಚರ್ಚೆ ಪಕ್ಷದಲ್ಲಿ ನಡೆದಿದೆ.

ರಾಯಚೂರು ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕ ಅವರಿಗೆ ಟಿಕೆಟ್‌ ನೀಡಿದ ಬಗ್ಗೆ ಕಾರ್ಯಕರ್ತರಲ್ಲೇ ಅಪಸ್ವರ ಇತ್ತು. ಮಾಜಿ ಸಂಸದ ಬಿ.ವಿ.ನಾಯಕ ಅವರಿಗೇ ಟಿಕೆಟ್‌ ಕೊಟ್ಟಿದ್ದರೆ ಗೆಲ್ಲುವ ಸಂಭವ ಇತ್ತು. ಅಮರೇಶ್ವರ ವಿರುದ್ಧ ಮುನಿಸಿಕೊಂಡವರೆಲ್ಲ ಚುನಾವಣೆಯಲ್ಲಿ ತಟಸ್ಥರಾಗಿ ಉಳಿದಿದ್ದು ಕಾಂಗ್ರೆಸ್‌ನ ಕುಮಾರನಾಯ್ಕ ಗೆಲುವಿಗೆ ಕಾರಣವಾಯಿತು ಎಂದು ಮೂಲಗಳು ಹೇಳಿವೆ.

ಶಾಸಕ ಗಾಲಿ ಜನಾರ್ದನರೆಡ್ಡಿಯನ್ನು ಮತ್ತೆ ಬಿಜೆಪಿಗೆ ತೆಗೆದುಕೊಂಡ ಬಗ್ಗೆ ಬಳ್ಳಾರಿ ಕ್ಷೇತ್ರದಲ್ಲಿ ಪಕ್ಷದೊಳಗೇ ಅಸಮಾಧಾನ ಹೆಚ್ಚಾಗಿತ್ತು. ಅಭ್ಯರ್ಥಿ ಬಿ.ಶ್ರೀರಾಮುಲು ಬಗ್ಗೆ ಲಿಂಗಾಯತ ಸಮುದಾಯವೂ ಮುನಿಸಿಕೊಂಡಿತ್ತು. ಇದರಿಂದ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯಿತು. ಇಲ್ಲಿಯೂ ಬೇರೆ ಅಭ್ಯರ್ಥಿ ಕಣಕ್ಕಿಳಿಸಿದ್ದರೆ ಗೆಲುವಿನ ಅವಕಾಶ ಹೆಚ್ಚಾಗಿತ್ತು ಎಂದು ಬಿಜೆಪಿ ಮೂಲಗಳು ತಿಳಿಸಿವೆ. 

‘ಕಠಿಣವೆನಿಸಿದ್ದ ಪ್ರತಿಯೊಂದು ಕ್ಷೇತ್ರದ ಮೇಲೂ ಹೆಚ್ಚಿನ ಗಮನ ಕೇಂದ್ರೀಕರಿಸುವ ಅಗತ್ಯವಿತ್ತು.  ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು ಫಲ ನೀಡಿತ್ತು. ಬಿಜೆಪಿ ಮತ್ತು ಜೆಡಿಎಸ್‌ ಕಠಿಣ ಪರಿಶ್ರಮ ವಹಿಸಿದ್ದವು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಲ್ಲೂ ಪರಿಸ್ಥಿತಿ ಅನುಕೂಲಕರವಿಲ್ಲದಿದ್ದರೂ ಒಗ್ಗಟ್ಟಿನ ಪರಿಶ್ರಮ ಫಲ ನೀಡಿದೆ. ಹಿನ್ನಡೆ ಅನುಭವಿಸುವ ಸುಳಿವು ಇದ್ದ ಕ್ಷೇತ್ರಗಳಲ್ಲಿ  ಗಮನ ಕೇಂದ್ರೀಕರಿಸಬೇಕಿತ್ತು’ ಎಂಬ ಅಭಿಪ್ರಾಯವೂ ಪಕ್ಷದ ವಲಯದಲ್ಲಿ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT