ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LSPolls: ₹40.94 ಕೋಟಿ ಆಸ್ತಿ ಒಡೆಯ ಪ್ರಜ್ವಲ್‌ ರೇವಣ್ಣ

ಐದು ವರ್ಷದಲ್ಲಿ ಸ್ಥಿರಾಸ್ತಿ ಮೌಲ್ಯ ಏಳು ಪಟ್ಟು ಹೆಚ್ಚಳ
Published 28 ಮಾರ್ಚ್ 2024, 21:36 IST
Last Updated 28 ಮಾರ್ಚ್ 2024, 21:36 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್–ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ, ₹5.54 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹35.40 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 2019ರಿಂದ ಇಲ್ಲಿವರೆಗೆ ಅವರ ಸ್ಥಿರಾಸ್ತಿ ಮೌಲ್ಯ ಏಳು ಪಟ್ಟು ಹೆಚ್ಚಾಗಿದೆ. 2019 ರಲ್ಲಿ ₹ 1,64,86,632 ಚರಾಸ್ತಿ ಹಾಗೂ ₹4,89,15,029 ಸ್ಥಿರಾಸ್ತಿ ಘೋಷಣೆ ಮಾಡಿದ್ದರು.

ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ, 1,110 ಗ್ರಾಂ ಚಿನ್ನಾಭರಣ, 23 ಕೆ.ಜಿ. ಬೆಳ್ಳಿ, 0.579 ಕ್ಯಾರೆಟ್‌ನ ವಜ್ರ, ಒಂದು ಪಿಸ್ತೂಲ್‌, ಒಂದು ರೈಫಲ್‌, 31 ಹಸುಗಳು, 4 ಎತ್ತುಗಳು, ಒಂದು ಟ್ರ್ಯಾಕ್ಟರ್‌ ಸೇರಿದಂತೆ ₹5,54,57,522 ಚರಾಸ್ತಿ ಹಾಗೂ ₹ 35,40,03,519 ಮೌಲ್ಯದ ಸ್ಥಿರಾಸ್ತಿಯನ್ನು ಪ್ರಜ್ವಲ್‌ ಘೋಷಿಸಿದ್ದಾರೆ.

ಅಜ್ಜಿ ಚನ್ನಮ್ಮ ಅವರಿಗೆ ₹ 23 ಲಕ್ಷ ಹಾಗೂ ಸಹೋದರ ಸೂರಜ್‌ ರೇವಣ್ಣ ಅವರಿಗೆ ₹1.56 ಕೋಟಿ ಸಾಲ ನೀಡಿದ್ದಾರೆ.

ಕುಪೇಂದ್ರ ರೆಡ್ಡಿ ಅವರಿಂದ ₹ 1 ಕೋಟಿ, ಎಚ್‌.ಡಿ.ರೇವಣ್ಣ ಅವರಿಂದ ₹ 86.21 ಲಕ್ಷ, ಫಿಜಾ ಡೆವಲಪರ್ಸ್‌ ಆಂಡ್‌ ಇನ್ಫ್ರಾಸ್ಟ್ರಕ್ಟರ್‌ನಿಂದ ₹ 2 ಕೋಟಿ ಸಾಲ ಪಡೆದಿದ್ದು, ಒಟ್ಟು ₹4,48,71,000 ಸಾಲವಿದೆ ಎಂದು ತಿಳಿಸಿದ್ದಾರೆ. 2019ರಲ್ಲಿ ₹3.72 ಕೋಟಿ ಸಾಲ ಘೋಷಿಸಿದ್ದರು.  

ನಾಮಪತ್ರ ಸಲ್ಲಿಕೆ: ಪ್ರಜ್ವಲ್‌ ಅವರು ದೇಗುಲಗಳಲ್ಲಿ ಪೂಜೆ ಸಲ್ಲಿಸಿ, ಶಾಸಕರಾದ ಎಚ್.ಡಿ.ರೇವಣ್ಣ, ಎ.ಮಂಜು, ಸಿ.ಎನ್‌. ಬಾಲಕೃಷ್ಣ, ಸ್ವರೂಪ್‌ ಪ್ರಕಾಶ್‌ ಅವರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಚುನಾವಣಾಧಿಕಾರಿ ಸಿ.ಸತ್ಯಭಾಮಾ ಅವರಿಗೆ ನಾಮಪತ್ರ ಸಲ್ಲಿಸಿದರು.

ಹರದನಹಳ್ಳಿಯಲ್ಲಿದ್ದ ತಾತ ಎಚ್‌.ಡಿ.ದೇವೇಗೌಡರ ಆಶೀರ್ವಾದ ಪಡೆದು, ಸೂಚಕರಾಗಿ ದೇವೇಗೌಡರು ಸಹಿ ಹಾಕಿದ್ದ ನಾಮಪತ್ರವನ್ನು ಸಲ್ಲಿಸಿದರು. ‘ಏ.4 ರಂದು ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ನಾಯಕರ ಜೊತೆಗೂಡಿ ಮತ್ತೆ ನಾಮಪತ್ರ ಸಲ್ಲಿಸುವೆ’ ಎಂದು ತಿಳಿಸಿದರು.

ಬರಿಗಾಲಲ್ಲಿ ಬಂದ ರೇವಣ್ಣ: ಪುತ್ರ ಪ್ರಜ್ವಲ್‌ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಶಾಸಕ ಎಚ್‌.ಡಿ. ರೇವಣ್ಣ ಬರಿಗಾಲಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದರು. ಜಿಲ್ಲಾಧಿಕಾರಿ ಕಚೇರಿ ಕಾಂಪೌಂಡ್‌ ಹೊರಗೆ ಕಾರು ನಿಲ್ಲಿಸಿ, ಅಲ್ಲಿಂದ ಬರಿಗಾಲಲ್ಲಿ ನಡೆದು ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT