ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ಪ್ರಲ್ಹಾದ ಜೋಶಿ– ವಿನೋದ ಅಸೂಟಿ ನೇರ ಸ್ಪರ್ಧೆ

Published 22 ಮಾರ್ಚ್ 2024, 5:45 IST
Last Updated 22 ಮಾರ್ಚ್ 2024, 5:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಯುವಕಾಂಗ್ರೆಸ್‌ ಘಟಕದ ಜಿಲ್ಲಾ ಅಧ್ಯಕ್ಷ ವಿನೋದ ಅಸೂಟಿ ಅವರನ್ನು ಅಂತಿಮಗೊಳಿಸಿ ಕಾಂಗ್ರೆಸ್‌ ಗುರುವಾರ ರಾತ್ರಿ ಪಟ್ಟಿ ಬಿಡುಗಡೆ ಮಾಡಿದೆ. ಈಗಾಗಲೇ ಬಿಜೆಪಿಯು ಹಾಲಿ ಸಂಸದ ಪ್ರಲ್ಹಾದ ಜೋಶಿ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್‌ನ ವಿನೋದ ಅಸೂಟಿ ಜೊತೆ ನೇರ ಪೈಪೋಟಿ ನಡೆಯಲಿದೆ.

ನಾಲ್ಕು ಬಾರಿ ಸಂಸದರಾಗಿ ಐದನೇ ಬಾರಿ ಕಣಕ್ಕಿಳಿದಿರುವ 62 ವರ್ಷದ ಜೋಶಿ ಹಾಗೂ ಇದೇ ಮೊದಲ ಬಾರಿಗೆ ಲೋಕಸಭಾ ಕಣಕ್ಕಿಳಿದಿರುವ 34 ವರ್ಷದ ವಿನೋದ ನಡುವೆ ನೇರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. 

ವಿನೋದ ಅಸೂಟಿ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನೆಲೆಸಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ್ದಾರೆ.  ಬಿ.ಬಿ.ಎ ಪದವಿ ಹೊಂದಿದ್ದಾರೆ. ತಂದೆ ನಿವೃತ್ತ ಸರ್ಕಾರಿ ನೌಕರ. ಕುಟುಂಬದಲ್ಲಿ ಯಾರಿಗೂ ರಾಜಕೀಯ ನಂಟಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ವಿನೋದ ರಾಜಕೀಯ ಸಂಘಟನೆಯಲ್ಲಿ ಬೆಳೆದರು. ಯೂಥ್‌ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದಾರೆ. 

ವಿಧಾನಸಭೆಗೆ ಯತ್ನ:

2018ರಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ತೀವ್ರ ಪೈಪೋಟಿ ನೀಡಿ, ಪರಾಜಿತಗೊಂಡಿದ್ದರು. ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಎನ್‌.ಎಚ್‌. ಕೋನರಡ್ಡಿ ಅವರಿಗೆ ಟಿಕೆಟ್‌ ಬಿಟ್ಟುಕೊಟ್ಟಿದ್ದರು. ಸಿದ್ದರಾಮಯ್ಯ ಅವರ ಮಾತಿಗೆ ಬದ್ಧರಾಗಿ, ಕೋನರಡ್ಡಿ ಅವರ ಗೆಲುವಿಗೆ ಶ್ರಮಿಸಿದ್ದರು. ಇದರ ಫಲವಾಗಿ ಇತ್ತೀಚೆಗೆ ಅವರಿಗೆ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. 

ಕಾಂಗ್ರೆಸ್‌ ಲೆಕ್ಕಾಚಾರ:

‘ಅವಿಭಜಿತ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಲಿಂಗಾಯತ ಅಭ್ಯರ್ಥಿಗೆ  ಟಿಕೆಟ್‌ ನೀಡಲಾಗಿದೆ. ಹೀಗಾಗಿ ಧಾರವಾಡದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಶಿವಲೀಲಾ ಕುಲಕರ್ಣಿ, ರಜತ ಉಳ್ಳಾಗಡ್ಡಿಮಠ ಅವರ ಹೆಸರನ್ನು ಕೈಬಿಡಲಾಯಿತು. ತದನಂತರ ಅಹಿಂದ ವರ್ಗದ ಅಭ್ಯರ್ಥಿಗೆ ಟಿಕೆಟ್‌ ನೀಡಲು ಮುಖಂಡರು ತೀರ್ಮಾನಿಸಿದರು. ಕುರುಬ ಸಮುದಾಯದವರಿಗೆ ಟಿಕೆಟ್‌ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಪಟ್ಟು ಹಿಡಿದಿದ್ದರು. ಇದರ ಭಾಗವಾಗಿ ಕುರುಬ ಸಮುದಾಯದ ವಿನೋದ ಅಸೂಟಿ ಅವರಿಗೆ ಟಿಕೆಟ್‌ ದೊರೆತಿದೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ರಾಜ್ಯದಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಸಮುದಾಯದ ಅಭ್ಯರ್ಥಿಗಳಿಗೆ ಎರಡು ಕ್ಷೇತ್ರಗಳಿಗೆ ಟಿಕೆಟ್‌ ನೀಡಬೇಕಾಗಿತ್ತು. ಇದುವರೆಗೆ ಕೊಪ್ಪಳ ಕ್ಷೇತ್ರದಲ್ಲಿ ಮಾತ್ರ ಟಿಕೆಟ್‌ ನೀಡಲಾಗಿತ್ತು. ಇನ್ನೊಂದು ಕ್ಷೇತ್ರ ನೀಡಲೇಬೇಕಾದ ಅನಿವಾರ್ಯತೆಯಿಂದಾಗಿ ಧಾರವಾಡಕ್ಕೆ ಆ ಅವಕಾಶ ದೊರೆತಿದೆ. ಸಾಮಾಜಿಕ ನ್ಯಾಯ ಕಲ್ಪಿಸಲು, ಎಲ್ಲ ಜಾತಿ– ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ವರಿಷ್ಠರು ಈ ತೀರ್ಮಾನ ಕೈಗೊಂಡಿದ್ದಾರೆ’ ಎಂದು ಮುಖಂಡರೊಬ್ಬರು ತಿಳಿಸಿದರು.

ಧಾರವಾಡ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತದಾರರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. 1980ರಿಂದ ಸತತ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಇದೇ ಸಮುದಾಯದ ಡಿ.ಕೆ. ನಾಯ್ಕರ್‌ ಜಯಗಳಿಸಿದ್ದರು. 1996ರಿಂದ ಆ ಸಮುದಾಯದವರಿಗೆ ಟಿಕೆಟ್‌ ಸಿಕ್ಕಿರಲಿಲ್ಲ. ಆ ಕೊರತೆಯನ್ನು ಈಗ ಸರಿಪಡಿಸಲಾಗಿದೆ. ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಇವು ಮತಗಳಾಗಿ ಪರಿವರ್ತನೆಯಾದರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರವನ್ನು ಕಾಂಗ್ರೆಸ್‌ ಮುಖಂಡರು ಹಾಕಿಕೊಂಡಿದ್ದಾರೆ.

ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT