ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಿ ಭಾಗ್ಯ ಕೊಡುವ ಪಕ್ಷ ಕಾಂಗ್ರೆಸ್‌: ಸಚಿವ ಎಚ್‌.ಕೆ.ಪಾಟೀಲ

ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿಕೆ
Published 3 ಮೇ 2024, 19:22 IST
Last Updated 3 ಮೇ 2024, 19:22 IST
ಅಕ್ಷರ ಗಾತ್ರ

ಹಾವೇರಿ: ‘ನರೇಂದ್ರ ಮೋದಿ ಅವರ ಭಾಷೆ ಪ್ರಧಾನಿ ಹುದ್ದೆಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್‌ ಪಕ್ಷ ತಾಳಿ ಕಿತ್ತು ಹಾಕುವುದಿಲ್ಲ, ತಾಳಿ ಭಾಗ್ಯ ಕೊಡುವ ಪಕ್ಷ. ಇಂದಿರಾಗಾಂಧಿ ಅವರು ದೇಶಕ್ಕಾಗಿ ತಾಳಿ ತ್ಯಾಗ ಮಾಡಿದ್ದಾರೆ’ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಹೇಳಿದರು. 

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅಮಿತ್‌ ಶಾ ಅವರು ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಅಂತಾರೆ. ಪ್ರಜ್ವಲ್‌ ರೇವಣ್ಣ ಅವರು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಡಿಯೊಗಳು ಹರಿದಾಡಿವೆ. ಇಂಥ ಪ್ರಜ್ವಲ್‌ ರೇವಣ್ಣ ಅವರನ್ನು ಬೆಂಬಲಿಸಿ, ಚುನಾವಣಾ ಪ್ರಚಾರ ನಡೆಸಿದ ಅಮಿತ್‌ ಶಾ ಮತ್ತು ಮೋದಿ ಅವರಿಗೆ ನಾಚಿಕೆ ಆಗಬೇಕು. ಬಿಜೆಪಿ ನಾಯಕರು ವಿಡಿಯೊ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು. 

‘ಬಿಜೆಪಿಯವರು ಸಂವಿಧಾನ ಬದಲಾಯಿಸುವ ಮಾತನಾಡುತ್ತಾರೆ. ಬೆಲೆ ಏರಿಕೆಗೆ ಬಿಜೆಪಿಯೇ ಕಾರಣ. ಹಾಗಾಗಿ, ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ಚುನಾವಣೆ. ಬಡವರು–ಶ್ರೀಮಂತರು, ಬದುಕು–ಭಾವನೆ ನಡುವಿನ ಚುನಾವಣೆಯಾಗಿದೆ’ ಎಂದರು. 

‘ನಮ್ಮ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ಶೇ 99ರಷ್ಟು ಜನರನ್ನು ನೇರವಾಗಿ ತಲುಪಿವೆ. ಇದು ದೇಶದ ಆಡಳಿತಾತ್ಮಕ ಇತಿಹಾಸದಲ್ಲಿ ಮಹತ್ತರವಾದ ಸಾಧನೆಯಾಗಿದೆ. ಎಲ್ಲ ಪಂಚಾಯಿತಿ, ಗ್ರಾಮ ಮಟ್ಟದಲ್ಲಿ ಪ್ರಚಾರ ಮಾಡಲಾಗಿದೆ. ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ. ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಮತದಾರರು ಗೆಲ್ಲಿಸಲಿದ್ದಾರೆ’ ಎಂದರು.

ರಾಜ್ಯದಿಂದ ಕೇಂದ್ರಕ್ಕೆ ₹100 ತೆರಿಗೆ ಕೊಟ್ಟರೆ ವಾಪಸ್ ಕೇವಲ ₹13 ಬರುತ್ತಿದೆ. ಮಧ್ಯಪ್ರದೇಶಕ್ಕೆ ₹279, ಉತ್ತರಪ್ರದೇಶಕ್ಕೆ ₹333 ಹಾಗೂ ಬಿಹಾರಕ್ಕೆ ₹922 ಕೊಡುತ್ತಿದ್ದಾರೆ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಮಿತಿಯೇ ಇಲ್ಲ. ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಕ್ಕೆ ಈ ಅನ್ಯಾಯವೇಕೆ? ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗಳನ್ನು ಯಾಕೆ ಟೀಕೆ ಮಾಡುತ್ತೀರಿ. ಬಡವರಿಗೆ ಲಾಭ ಆದರೆ ಯಾಕೆ ನಿಮಗೆ ಹೊಟ್ಟೆ ಉರಿ. ಅಚ್ಚೇ ದಿನ್ ಎಲ್ಲಿದೆ. 2014ರಲ್ಲಿ ₹314 ಇದ್ದ ಸಿಲಿಂಡರ್ ಈಗ ₹1150 ಆಗಿದೆ. ₹50 ಇದ್ದ ಪೆಟ್ರೋಲ್ ₹100 ದಾಟಿದೆ. ತೊಗರಿಬೇಳೆ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ರಸಗೊಬ್ಬರದ ಬೆಲೆ ₹400ರಿಂದ ₹1600ಕ್ಕೆ ಏರಿಕೆ ಆಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ರೀತಿ ಇದೇನಾ? ಎಂದು ತರಾಟೆಗೆ ತೆಗೆದುಕೊಂಡರು. 

ಗದಗಕ್ಕೆ ಪ್ರಿಯಾಂಕಾ ಗಾಂಧಿ:

ಮೇ 4ರಂದು ಸಂಜೆ 5 ಗಂಟೆಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಗದಗ ನಗರಕ್ಕೆ ಬಂದು ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಗೃಹಲಕ್ಷ್ಮೀ ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿದವರು ಅವರೇ ಎಂದು ಎಚ್.ಕೆ.ಪಾಟೀಲ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮುಖಂಡರಾದ ಎಂ.ಎಂ.ಹಿರೇಮಠ, ಸಂಜೀವಕುಮಾರ ನೀರಲಗಿ, ಬಸವರಾಜ ಗುರಿಕಾರ, ಮೀನಾಕ್ಷಿ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT