ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರ: ಸ್ತ್ರೀಶಕ್ತಿ ಜಿದ್ದಾಜಿದ್ದಿ

ಕೈ– ಕಮಲ ನಡುವೆ ಸ್ಪಷ್ಟವಾಯಿತು ಸ್ಪರ್ಧೆಯ ಚಿತ್ರಣ
Published 21 ಮಾರ್ಚ್ 2024, 21:23 IST
Last Updated 21 ಮಾರ್ಚ್ 2024, 21:23 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಲಿದ್ದಾರೆ’ ಎಂಬ ಕುತೂಹಲಕ್ಕೆ ಗುರುವಾರ ರಾತ್ರಿ ತೆರೆಬಿದ್ದಿದೆ.

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಪತ್ನಿ, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರಿಗೇ ನಿರೀಕ್ಷೆಯಂತೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿದೆ.

ಇದರಿಂದಾಗಿ ಕ್ಷೇತ್ರವು ಇದೇ ಮೊದಲ ಬಾರಿ ಮಹಿಳೆಯರಿಬ್ಬರ ನಡುವಿನ ‘ಜಿದ್ದಾಜಿದ್ದಿ’ ಕಣವಾಗಿ ಹೊರಹೊಮ್ಮಿದೆ.

ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರಿಗೆ ಬಿಜೆಪಿಯು ‘ಅಚ್ಚರಿಯ ಅಭ್ಯರ್ಥಿ’ ಎಂಬಂತೆ ಕಳೆದ ವಾರವೇ ಟಿಕೆಟ್‌ ಘೋಷಿಸಿದ್ದರಿಂದ ಅವರ ಎದುರಾಳಿ ಯಾರಾಗಬಹುದು ಎಂಬ ಕುತೂಹಲ ಮತದಾರರಲ್ಲಿ ಮನೆ ಮಾಡಿತ್ತು.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪ್ರಮುಖ ಪಕ್ಷಗಳು ಹೆಣ್ಮಕ್ಕಳಿಗೇ ಮಣೆ ಹಾಕಿದಂತಾಗಿದೆ. ಅಲ್ಲದೇ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ಮೊದಲಿನಿಂದಲೂ ‘ಪ್ರಬಲ ರಾಜಕೀಯ ಎದುರಾಳಿ’ ಎನ್ನಿಸಿಕೊಂಡಿರುವ ‘ಶಾಮನೂರು’ ಮತ್ತು ‘ಭೀಮಸಮುದ್ರ’ ಕುಟುಂಬಗಳ ಸದಸ್ಯರಿಗೇ ಉಭಯ ಪಕ್ಷಗಳ ಟಿಕೆಟ್‌ ದೊರೆತಿರುವುದರಿಂದ ಪ್ರಬಲ ಸ್ಪರ್ಧೆ ನಿರೀಕ್ಷಿಸಲಾಗುತ್ತಿದೆ.

‌ಆದರೆ, ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್‌ ನೀಡಿದ್ದರಿಂದ ಬಿಜೆಪಿ ಬಂಡಾಯ ಮುಖಂಡರು ಹಾಗೂ ಡಾ.ಪ್ರಭಾ ಅವರಿಗೆ ಟಿಕೆಟ್‌ ನೀಡಿದ್ದರಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಜಿ.ಬಿ. ವಿನಯಕುಮಾರ್‌ ಅವರು ಕಾರ್ಯಕರ್ತರ, ಮತದಾರರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಡೆ ನಿರ್ಧರಿಸುವುದಾಗಿ ಗುರುವಾರವಷ್ಟೇ ಘೋಷಿಸಿದ್ದರಿಂದ ಎರಡೂ ಪಕ್ಷಗಳ ನಡುವೆ ಬಂಡಾಯದ ಸಂಭವನೀಯತೆ ತಳ್ಳಿ ಹಾಕುವಂತಿಲ್ಲ.

ಇದರಿಂದಾಗಿ ಕ್ಷೇತ್ರದಲ್ಲಿ ನೇರ ಸ್ಪರ್ಧೆ ಏರ್ಪಡಲಿದೆಯೇ ಅಥವಾ ಚತುಷ್ಕೋನ ಸ್ಪರ್ಧೆಗೆ ಕ್ಷೇತ್ರ ವೇದಿಕೆ ಆಗಲಿದೆಯೇ ಎಂಬ ಕುತೂಹಲಕೆರಳಿದೆ.

ಗಾಯತ್ರಿ ಸಿದ್ದೇಶ್ವರ

ಗಾಯತ್ರಿ ಸಿದ್ದೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT