ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ | ರಂಗೇರದ ಚುನಾವಣಾ ಪ್ರಚಾರ

Published 7 ಏಪ್ರಿಲ್ 2024, 6:06 IST
Last Updated 7 ಏಪ್ರಿಲ್ 2024, 6:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಪ್ರಮುಖ ಪ್ರತಿಸ್ಪರ್ಧಿಗಳಾದ ಬಿಜೆಪಿ, ಕಾಂಗ್ರೆಸ್‌ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿ 15–20 ದಿನಗಳಾಗಿವೆ. ಆದರೆ, ಚುನಾವಣಾ ಪ್ರಚಾರ ಇನ್ನೂ ರಂಗೇರಿಲ್ಲ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬಿರುಬಿಸಿಲಿನ ನಡುವೆ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದರೆ, ಧಾರವಾಡ ಜಿಲ್ಲೆಯಲ್ಲಿ ಮಾತ್ರ ಅಬ್ಬರದ ಪ್ರಚಾರ ಕಂಡುಬರುತ್ತಿಲ್ಲ.

ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಬಹಿರಂಗ ಪ್ರಚಾರಕ್ಕಿಂತ ಸಮಾಜದ ಪ್ರಮುಖರು, ಪಕ್ಷದ ಕಾರ್ಯಕರ್ತರು, ಸಂಘಟನೆ ಪ್ರಮುಖರೊಂದಿಗೆ ಸಣ್ಣಪುಟ್ಟ ಸಭೆ ಮತ್ತು ಸಮುದಾಯಗಳ ಸಮಾವೇಶ ಮಾಡಿದ್ದಾರೆ.

ಹುಬ್ಬಳ್ಳಿ– ಧಾರವಾಡ ನಗರ ವ್ಯಾಪ್ತಿಯ ಪ್ರದೇಶದ ಜೊತೆಗೆ ಗ್ರಾಮೀಣ ಪ್ರದೇಶಗಳಾದ ಕುಂದಗೋಳ, ಕಲಘಟಗಿ ಸೇರಿ ವಿವಿಧೆಡೆ ಸಣ್ಣ ಪ್ರಮಾಣದಲ್ಲಿ ಸಭೆಗಳನ್ನು ಮಾಡಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಆಗಿರುವ ಕಾರಣ ಈ ಸಲ ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿಲ್ಲ. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರವಾಗಿ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. ಚುನಾವಣಾ ವೀಕ್ಷಕರಿಗೆ ಅರ್ಜಿಯನ್ನೂ ಸಲ್ಲಿಸದ ವಿನೋದ ಅಸೂಟಿ ಅವರಿಗೆ ಕೊನೆಯ ಹಂತದಲ್ಲಿ ಟಿಕೆಟ್ ಘೋಷಣೆಯಾಯಿತು. ಹೀಗಾಗಿ ಕೊಂಚ ನಿಧಾನವಾಗಿ ಮತ್ತು ಕೆಲವಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರ ಅಧ್ಯಕ್ಷತೆಯಲ್ಲಿ ವಿನೋದ ಅಸೂಟಿ ಅವರು ನವಲೂರಿನ ಮಯೂರ ರೆಸಾರ್ಟ್‌ನಲ್ಲಿ  ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ವಿವಿಧ ಸಮುದಾಯಗಳ ನಾಯಕರ ಜೊತೆ ಸಭೆಗಳನ್ನು ಮಾಡಿದ್ದಾರೆ. ಸಾರ್ವಜನಿಕ ಸಮಾವೇಶಗಳನ್ನು ಮಾಡಿದ್ದಾರೆ.

ಪ್ರಲ್ಹಾದ ಜೋಶಿ ಮತ್ತು ವಿನೋದ ಅಸೂಟಿ ಅವರು ಇದುವರೆಗೆ ದೊಡ್ಡಮಟ್ಟದ ಬಹಿರಂಗ ಸಮಾವೇಶಗಳನ್ನು ನಡೆಸಿಲ್ಲ. ಅವರ ಪರ ಮತ ಯಾಚನೆಗೂ ಪ್ರಮುಖ ನಾಯಕರು ಅಥವಾ ಗಣ್ಯರು ಕೂಡ ಇನ್ನೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ.

ಬಿಸಿಲಿನ ಹೊಡೆತ: 

ಸದ್ಯಕ್ಕೆ ಧಾರವಾಡ ಕ್ಷೇತ್ರದಾದ್ಯಂತ ಬಿಸಿಲಿನ ಝಳ ಜೋರಾಗಿದೆ. ದಿನದ ತಾಪಮಾನ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಇದರಿಂದ ಹೆಚ್ಚು ಜನಹೊರಗೆ ಬರುತ್ತಿಲ್ಲ. ಜನರೇ ಹೊರಗಡೆ ಬಾರದಿದ್ದರೆ, ಪ್ರಚಾರ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆಯು ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರಲ್ಲಿ ಕಾಡುತ್ತಿದೆ.

ಬಿಸಿಲಿನ ಹೊಡೆತ ಒಂದೆಡೆಯಾದರೆ, ಇನ್ನೊಂದೆಡೆ ನಾಮಪತ್ರ ಸಲ್ಲಿಕೆಗೆ ಮತ್ತು ಮತದಾನ ಪ್ರಕ್ರಿಯೆಗೆ ಸಾಕಷ್ಟು ಸಮಯಾವಕಾಶ ಇರುವುದರಿಂದ ಪ್ರಚಾರ ನಿಧಾನಗೊಳ್ಳಲು ಕಾರಣವಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಮತದಾನವು ಮೇ 7ರಂದು ನಡೆಯಲಿದೆ. 

ಮಧ್ಯಾಹ್ನ ಬಿಸಿಲು ಜಾಸ್ತಿ ಇರುವುದರಿಂದ ಸಂಜೆ ವೇಳೆ ಪ್ರಚಾರ ಹಮ್ಮಿಕೊಳ್ಳಲಾಗುತ್ತಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆಯಾ ಪ್ರದೇಶಕ್ಕೆ ತೆರಳಿ ಪ್ರಚಾರ ನಡೆಸಿದ್ದಾರೆ.
– ಅನಿಲಕುಮಾರ ಪಾಟೀಲ ಧಾರವಾಡ ಜಿಲ್ಲಾ (ಗ್ರಾಮೀಣ) ಕಾಂಗ್ರೆಸ್‌ ಘಟಕದ ಅಧ್ಯಕ್ಷ
ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದ ಬಳಿಕ ಪ್ರಮುಖ ನಾಯಕರು ಮತ್ತು ಗಣ್ಯರು ಅಭ್ಯರ್ಥಿಗಳ ಪ್ರಚಾರಕ್ಕೆ ಬರುವರು. ಆಗ ಪ್ರಚಾರ ಬಿರುಸು ಪಡೆಯಲಿದೆ.
ತಿಪ್ಪಣ್ಣ ಮಜ್ಜಗಿ ಅಧ್ಯಕ್ಷ ಬಿಜೆಪಿ ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT