ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಯನ್ನು ಮುಟ್ಟಿ ನೋಡಿ: ಕಾಂಗ್ರೆಸ್‌ ನಾಯಕರಿಗೆ ಬೊಮ್ಮಾಯಿ ಸವಾಲು

Published 28 ಏಪ್ರಿಲ್ 2023, 10:53 IST
Last Updated 28 ಏಪ್ರಿಲ್ 2023, 10:53 IST
ಅಕ್ಷರ ಗಾತ್ರ

ಶಹಾಪುರ (ಯಾದಗಿರಿ ಜಿಲ್ಲೆ): ಸ್ವಾತಂತ್ರ್ಯ ಬಂದ ಮೇಲೆ ದೇಶ ಒಡೆದಿರಿ. ಅಮೇಲೆ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದೀರಿ. ವೀರಶೈವ ಲಿಂಗಾಯತರನ್ನು ಒಡೆಯಲು ಹೋಗಿ ಮಣ್ಣು ಮುಕ್ಕಿದ್ದೀರಿ. ಈಗ ಅದೇ ತಪ್ಪನ್ನು ಮಾಡುತ್ತಿದ್ದಿರಿ. ತಾಕತ್‌ ಇದ್ದರೆ, ಧಮ್‌ ಇದ್ದರೆ ಮೀಸಲಾತಿಯಿನ್ನು ಮುಟ್ಟಿ ನೋಡಿ. ಈ ಕೇಸರಿ ಅಲೆಯನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದರು.

ಶಹಾಪುರ ನಗರದ ಬಸವೇಶ್ವರ ವೃತ್ತದ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಪಾಟೀಲ ಯಾಳಗಿ ಪ‍ರ ರೋಡ್‌ ಶೋ ನಡೆಸಿ ಅವರು ಮಾತನಾಡಿದರು.

ಇಡೀ ರಾಜ್ಯದಲ್ಲಿ ಬಿಜೆಪಿ, ಕೇಸರಿ ಅಲೆ ಇದೆ. ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರೂ ಬರಲಿ, ಲೋಕಲ್‌ನವರು ಬರಲಿ. ಕೇಸರಿ ಅಲೆಯನ್ನು ತಡೆಗಟ್ಟಲಿ ನೋಡೋಣ. ಇಷ್ಟು ವರ್ಷ ದೇಶವನ್ನು ಮೋಸ, ಸುಳ್ಳಿನಿಂದ ಕಾಂಗ್ರೆಸ್‌ನವರು ಆಳ್ವಿಕೆ ಮಾಡಿದ್ದಾರೆ. ಇನ್ನುಮುಂದೆ ನಿಮ್ಮ ಆಟ, ಸುಳ್ಳು ನಡೆಯುವುದಿಲ್ಲ ಎಂದು ಗುಡುಗಿದರು.

ಜಾತಿ ಸಮೀಕ್ಷೆಗಾಗಿ ₹130 ಕೋಟಿ ಖರ್ಚು ಮಾಡಿದ್ದಿರಿ. ನಿಮಗೆ ತಾಕತ್‌ ಇಲ್ಲ. ಹೀಗಾಗಿ ಅದನ್ನು ಜಾರಿ ಮಾಡಲಿಲ್ಲ. ಆದರೆ, ನಾವು ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇವೆ. ಸಮಾಜ ಒಡೆಯುವ ಇಚ್ಛೆ ನಮಗಿಲ್ಲ. ಅದು ಕಾಂಗ್ರೆಸ್‌ನವರ ಕೆಲಸ ಎಂದರು.

ಶೇ 75 ಮೀಸಲಾತಿ ಕೊಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಎಸ್ಸಿ, ಎಸ್ಟಿ ಮೀಸಲಾತಿ ಜಾರಿ ಮಾಡಲಿಲ್ಲ. 30 ವರ್ಷದ ಬೇಡಿಕೆಯನ್ನು ಈಡೇರಿಸಲಿಲ್ಲ. ಎಸ್ಸಿ, ಎಸ್ಟಿಯನ್ನು ಅವರ ಸರ್ಕಾರ ಇದ್ದಾಗ 5 ವರ್ಷ ಬಾವಿಯಲ್ಲಿ ಹಾಕಿದರು. ಆದರೆ, ನಾವು ಎಸ್ಸಿ, ಎಸ್ಟಿ ಬೇಡಿಕೆ ಈಡೇರಿಸಿದ್ದೇವೆ. ಜೇನುಗೂಡಿಗೆ ಕೈ ಹಾಕಬೇಡಿ ಎಂದಿದ್ದರು. ನಾನು ಜೇನು ಹುಳ ಕಚ್ಚಿಸಿಕೊಂಡು ಜನರಿಗೆ ಒಳ್ಳೆದು ಮಾಡಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ ಓಟು ಬ್ಯಾಂಕ್‌ ಛಿದ್ರವಾಗಿದೆ. ಎಲ್ಲ ಸಮುದಾಯವರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನವರು ಹತಾಶೆಯಾಗಿದ್ದಾರೆ. ಲಿಂಗಾಯತರು ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನೀವು ಇದನ್ನೂ ಒಪ್ಪಿಕೊಳ್ಳುತ್ತೀರಾ ಎಂದು ಜನರನ್ನು ಪ್ರಶ್ನಿಸಿದರು.

ಕಾಂಗ್ರೆಸ್‌ನವರು ನೀಡುತ್ತಿರುವುದು ಗ್ಯಾರಂಟಿ ಕಾರ್ಡ್‌ ಅಲ್ಲ. ಅದು ಗಳಗಂಟಿ. ಮೇ 10ರ ನಂತರ ಅದು ಇರುವುದಿಲ್ಲ ಎಂದು ಲೇವಡಿ ಮಾಡಿದರು.

ಅಧಿಕಾರಕ್ಕಾಗಿ ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ನಿಜವಾದ ಒಕ್ಕಲಿಗರು ಭಿಕ್ಷುಕರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳುತ್ತಾರೆ. ಆದರೆ, ನಾನು ಹೇಳುತ್ತೇನೆ. ಅವರು ಸಂವಿಧಾನ ಬದ್ಧ ಹಕ್ಕನ್ನು ಕೇಳುತ್ತಿದ್ದಾರೆ ಎಂದರು.

ಪಕ್ಕದ ಸುರಪುರದಲ್ಲಿ ಅಭಿವೃದ್ಧಿಯಾದಂತೆ ಶಹಾಪುರದಲ್ಲಿ ಸಮಗ್ರ ಅಭಿವೃದ್ಧಿಗಾಗಿ ಶಾಸಕ ರಾಜೂಗೌಡ ಸಹೋದರ, ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಅವರನ್ನು 25 ಸಾವಿರ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ರಾಜ್ಯ ಹೆದ್ದಾರಿ ಮೇಲೆ ರೋಡ್‌ ಶೋ ನಡೆದಿದ್ದರಿಂದ ಟ್ರಾಫಿಕ್‌ ಜಾಂ ಉಂಟಾಯಿತು. ವಾಹನ ಸವಾರರು ಪರದಾಡಿದರು.

ಈ ವೇಳೆ ಚಿತ್ರ ನಟಿ ಶೃತಿ, ರಾಯಚೂರು ಸಂಸದ ರಾಜಾ ಅಮರೇಶ ನಾಯಕ, ಶಾಸಕ ರಾಜೂಗೌಡ, ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ಡಾ.ಚಂದ್ರಶೇಖರ ಸುಬೇದಾರ್, ಅರೆ ಅಲೆಮಾರಿ ನಿಗಮದ ಅಧ್ಯಕ್ಷ ದೇವೀಂದ್ರನಾಥ ನಾದ್‌ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT