ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಸಂಪೂರ್ಣ ಸಹಕಾರ; ಎಚ್‌ಡಿಕೆ

Published 26 ಏಪ್ರಿಲ್ 2024, 20:21 IST
Last Updated 26 ಏಪ್ರಿಲ್ 2024, 20:21 IST
ಅಕ್ಷರ ಗಾತ್ರ

ಮಂಡ್ಯ: ‘ಬಿಜೆಪಿ ಕಾರ್ಯಕರ್ತರು, ಮುಖಂಡರು ನನಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಕೆಲ ಕಾಂಗ್ರೆಸ್‌ ಕಾರ್ಯಕರ್ತರಿಂದಲೂ ಬೆಂಬಲ ಸಿಕ್ಕಿದೆ. ಮಾಹಿತಿ ಕೊರತೆಯಿಂದ ಎಚ್‌.ಡಿ.ದೇವೇಗೌಡರು ಬಿಜೆಪಿಯಿಂದ ಸಹಕಾರ ಸಿಕ್ಕಿಲ್ಲ ಎಂದು ಹೇಳಿರಬಹುದು’ ಎಂದು ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಹೇಳಿದರು.

ಮದ್ದೂರು ತಾಲ್ಲೂಕು ಕೆ.ಹೊನ್ನಲಗೆರೆ ಮತಗಟ್ಟೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಸುಮಲತಾ ಅವರಿಂದ ಸಹಕಾರ ಸಿಕ್ಕಿಲ್ಲ ಎಂದು ದೇವೇಗೌಡರು ಏಕೆ ಹೇಳಿದ್ದಾರೋ ಗೊತ್ತಿಲ್ಲ, ಇಲ್ಲಿ ಸುಮಲತಾ ಅವರ ಪ್ರಶ್ನೆಯೇ ಬರುವುದಿಲ್ಲ. ಸುಮಲತಾ ಬೆಂಬಲಿಗರು ನಮ್ಮ ಪರವಾಗಿ ನಿಂತಿದ್ದಾರೆ, ಅಂಬರೀಷ್‌ ಅಭಿಮಾನಿಗಳ ಪಡೆ ನಮಗೆ ಸಹಾಯ ಮಾಡಿದೆ’ ಎಂದರು.

‘ನಾನು ಸುಮಲತಾ ಅವರ ಮನೆಗೆ ತೆರಳಿ ಸಹಕಾರ ಕೋರಿದ್ದೆ, ಮೈಸೂರಿನಲ್ಲಿ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲೂ ಆಹ್ವಾನಿಸಿದ್ದೆ, 2 ದಿನ ಬಿಡುವು ಮಾಡಿಕೊಂಡು ಪ್ರಚಾರಕ್ಕೆ ಬನ್ನಿ ಎಂದು ಕರೆದಿದ್ದೆ. ಆರ್‌.ಅಶೋಕ್‌ ಅವರ ಎದುರಲ್ಲೇ ಅವರನ್ನು ಕರೆದಿದ್ದೆ. ಇದಕ್ಕಿಂತ ಇನ್ನೇನು ಮಾಡಬೇಕು ನಾನು? ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ಸುಮಲತಾ ಅವರು ಬೆಂಗಳೂರಿನಿಂದ ಬಂದು ನನಗೆ ಮತ ಹಾಕಿದ್ದಾರೆ’ ಎಂದರು.

‘ಪಕ್ಷಭೇದ ಮರೆತು ಸಾರ್ವಜನಿಕರು ನನಗೆ ಮತದಾನ ಮಾಡಿದ್ದಾರೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ. ಗೆಲುವಿನ ವಾತಾವರಣ ಈಗಾಗಲೇ ಸೃಷ್ಟಿಯಾಗಿದ್ದು ಈ ಗೆಲುವನ್ನು ನಾನು ಕ್ಷೇತ್ರದ ಜನರಿಗೆ ಅರ್ಪಿಸುತ್ತೇನೆ’ ಎಂದರು.

ಜೆಡಿಎಸ್‌ನವರು ಕರೆದೇ ಇಲ್ಲ: ಸಂಸದೆ ಸುಮಲತಾ

ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಮತಗಟ್ಟೆಯಲ್ಲಿ ಮತದಾನ ಮಾಡಿದ ಸಂಸದೆ ಸುಮಲತಾ ‘ಜೆಡಿಎಸ್‌ ನಾಯಕರು ನನಗೆ ಯಾವುದೇ ಸಭೆ, ಸಮಾರಂಭಗಳಿಗೆ ಆಹ್ವಾನ ನೀಡಿಲ್ಲ. ಅವರು ಕರೆದೂ ನಾನು ಬಂದಿಲ್ಲ ಎಂದರೆ ತಪ್ಪಾಗುತ್ತದೆ, ಆದರೆ ಅವರು ನನ್ನನ್ನು ಕರೆದೇ ಇಲ್ಲ’ ಎಂದರು.

‘ಮೈತ್ರಿ ಪರವಾಗಿ ನಮ್ಮ ಬೆಂಬಲಿಗರು ಕೆಲಸ ಮಾಡಿದ್ದಾರೆ, ಅಂಬರೀಷ್‌ ಅವರ ಶಕ್ತಿಯನ್ನು ಎನ್‌ಡಿಎಗೆ ಧಾರೆ ಎರೆದು ಕೊಟ್ಟಿದ್ದೇನೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾನು ನನ್ನ ಸ್ಥಾನ ತ್ಯಾಗ ಮಾಡಿದ್ದೇನೆ’ ಎಂದರು.

ಸುಮಲತಾ ಅವರು ಸಹಕಾರ ನೀಡಿಲ್ಲ ಎಂದು ಎಚ್‌.ಡಿ.ದೇವೇಗೌಡರು ನೀಡಿರುವ ಹೇಳಿಕೆ ಕುರಿತು ‘ಅವರು ದೊಡ್ಡವರು, ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಮಾಹಿತಿ ಕೊರತೆಯಿಂದ ಈ ರೀತಿ ಮಾತನಾಡಿರಬಹುದು. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT