ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಹೆಜ್ಜಾಲ ಚೆಕ್‌ಪೋಸ್‌ನಲ್ಲಿ ₹19 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ವಶಕ್ಕೆ

Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ರಾಮನಗರ: ಸೂಕ್ತ ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ ಮಲಬಾರ್ ಗೋಲ್ಡ್ ಕಂಪನಿಗೆ ಸೇರಿದ ₹19 ಕೋಟಿ ಮೌಲ್ಯದ 29 ಕೆ.ಜಿ ಚಿನ್ನಾಭರಣ ಮತ್ತು 28 ಕೆ.ಜಿ ಬೆಳ್ಳಿ ಆಭರಣವನ್ನು ತಾಲ್ಲೂಕಿನ ಹೆಜ್ಜಾಲ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಸಿಬ್ಬಂದಿ ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಧ್ಯಾಹ್ನ ಚೆಕ್‌ಪೋಸ್ಟ್ ಸಿಬ್ಬಂದಿ ವಾಹನ ತಡೆದು ಪರಿಶೀಲನೆ ನಡೆಸಿದಾಗ, ಅದರೊಳಗೆ ಚಿನ್ನ ಮತ್ತು ಬೆಳ್ಳಿ ಆಭರಣವಿರುವುದು ಪತ್ತೆಯಾಗಿದೆ. ಮೈಸೂರಿನಲ್ಲಿರುವ ಮಲಬಾರ್‌ನ ಮಳಿಗೆಗಳಿಗೆ ಬೆಂಗಳೂರಿನಿಂದ ಪ್ಯಾಕ್ ಮಾಡಿದ ಬಾಕ್ಸ್‌ಗಳಲ್ಲಿ ಆಭರಣಗಳನ್ನು ಕೊಂಡೊಯ್ಯುತ್ತಿರುವುದಾಗಿ ಕಂಪನಿಯ ಸಿಬ್ಬಂದಿ ಹೇಳಿದ್ದಾರೆ’ ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂಪನಿ ಸಿಬ್ಬಂದಿ ತೋರಿಸಿದ ದಾಖಲೆಗಳು ಮತ್ತು ಜಿಎಸ್‌ಟಿ ಬಿಲ್‌ನಲ್ಲಿ ವ್ಯತ್ಯಾಸ ಕಂಡುಬಂತು. ಆಗ ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಎಲ್ಲಿಂದ ತರಲಾಗಿದೆ, ಎಲ್ಲೆಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂಬುದನ್ನು ವಿಚಾರಿಸಲಾಯಿತು. ಚಿನ್ನ ಮತ್ತು ಬೆಳ್ಳಿಯನ್ನು ತೂಕದ ಯಂತ್ರದಲ್ಲಿ ಮತ್ತೊಮ್ಮೆ ತೂಕ ಮಾಡಿ ಪರಿಶೀಲಿಸಲಾಯಿತು’ ಎಂದು ಹೇಳಿದರು.

‘ಅಧಿಕಾರಿಗಳ ಪ್ರಶ್ನೆಗೆ ಕಂಪನಿ ಸಿಬ್ಬಂದಿ ಸರಿಯಾದ ಸ್ಪಷ್ಟನೆ ನೀಡಿಲ್ಲ. ಅಗತ್ಯ ದಾಖಲೆಗಳನ್ನು ಸಹ ತೋರಿಸಿಲ್ಲ. ಹಾಗಾಗಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬಿಡದಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಲಾಗಿದೆ. ಸಂಬಂಧಪಟ್ಟವರು ಅಗತ್ಯ ದಾಖಲೆ ತೋರಿಸಿ ಬಿಡಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ₹50 ಸಾವಿರಕ್ಕಿಂತ ಹೆಚ್ಚಿನ ನಗದು ಸಾಗಿಸಬೇಕಾದರೆ ಸಂಬಂಧಪಟ್ಟ ಚುನಾವಣಾಧಿಕಾರಿಯ ಅನುಮತಿ ಪಡೆಯಬೇಕು. ಚಿನ್ನ ಮತ್ತು ಬೆಳ್ಳಿಯನ್ನು ಸಾಗಿಸುವಾಗ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ನಡೆಸಿದಾಗ ತೋರಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT