ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲ್ಲುವ ವಿಶ್ವಾಸವಿದೆ: ಜಗದೀಶ ಶೆಟ್ಟರ್‌

Published 5 ಮೇ 2024, 15:13 IST
Last Updated 5 ಮೇ 2024, 15:13 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್‌ ಕೊಡುಗೆ ಶೂನ್ಯ. ಆದರೆ, ಬಿಜೆಪಿ ನೀಡಿದ ಕೊಡುಗೆಗಳ ದೊಡ್ಡಪಟ್ಟಿಯೇ ಇದೆ. ನಾವು ಅಭಿವೃದ್ಧಿ ಆಧರಿಸಿ ಮತ ಕೇಳುತ್ತಿದ್ದೇವೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದು, ನಾನು ಹೆಚ್ಚಿನ ಮತಗಳ ಅಂತರದಿಂದ ಗೆದ್ದುಬರುವ ವಿಶ್ವಾಸವಿದೆ’ ಎಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದೊಂದು ತಿಂಗಳಿನಿಂದ ಪ್ರಚಾರ ಮಾಡುತ್ತಿದ್ದು, ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಉತ್ತಮ ಸ್ಪಂದನೆ ಸಿಕ್ಕಿದೆ. ನಾಮಪತ್ರ ಸಲ್ಲಿಕೆ ವೇಳೆ, 50 ಸಾವಿರ ಜನ ಸೇರಿದ್ದರು. ಮೋದಿ ಭಾಗವಹಿಸಿದ್ದ ಸಮಾವೇಶವೂ ಯಶಸ್ವಿಯಾಗಿದೆ. ದೇಶದ ರಕ್ಷಣೆಗಾಗಿ ಜನ ಬಿಜೆಪಿಗೇ ಮತ ಹಾಕಲಿದ್ದಾರೆ. ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ, ಸಂಸದೆ ಮಂಗಲಾ ಅಂಗಡಿ ಅಭಿವೃದ್ಧಿ ಕೆಲಸಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ’ ಎಂದರು.

‘ನಾನು ಸಂಸದನಾಗಿ ಆಯ್ಕೆಯಾದ ನಂತರ, ಬೆಳಗಾವಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇಲ್ಲಿನ ಕೈಗಾರಿಕೋದ್ಯಮಗಳ ಬೆಳವಣಿಗೆಗೆ ದುಡಿಯುತ್ತೇನೆ. ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಜತೆಗೆ, ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ. ರಾಮದುರ್ಗ ತಾಲ್ಲೂಕಿನ ಶಬರಿಕೊಳ್ಳ, ಬೈಲಹೊಂಗಲದಲ್ಲಿನ ರಾಣಿ ಚನ್ನಮ್ಮನ ಸಮಾಧಿ ಅಭಿವೃದ್ಧಿಪಡಿಸುತ್ತೇನೆ. ಬೆಳಗಾವಿಯನ್ನು ಅಧಿಕೃತವಾಗಿ ಎರಡನೇ ರಾಜಧಾನಿಯಾಗಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಬೆಳಗಾವಿ ದಕ್ಷಿಣ, ಗೋಕಾಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನವರು ಹಣ ಹಂಚುವಾಗ, ಬಿಜೆಪಿ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಣ ಹಂಚುತ್ತಿರುವುದು ಗೊತ್ತಾಗಿದೆ. ಶಹಾಪುರ ಠಾಣೆ ವ್ಯಾಪ್ತಿಯಲ್ಲಿ ಹಣ ಹಂಚುತ್ತಿದ್ದವರನ್ನು ಹಿಡಿದುಕೊಟ್ಟವರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಲು ಯತ್ನಿಸಿದ್ದಾರೆ. ಕಾಂಗ್ರೆಸ್‌ನವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ಕೊಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಶೆಟ್ಟರ್‌ ಉತ್ತರಿಸಿದರು.

‘ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್‌, ‘ಸಿದ್ದರಾಮಯ್ಯ ಏನೋ ಹೇಳುತ್ತಾರೆ. ಇದೇನು ಬ್ರಿಟಿಷರ ವಿರುದ್ಧದ ಹೋರಾಟವೇ. ಸ್ವಾತಂತ್ರ್ಯ ಹೋರಾಟವೇ’ ಎಂದು ಪ್ರಶ್ನಿಸಿದರು.

‘ಕೊರೊನಾ ಸೋಂಕಿನಿಂದ ದೆಹಲಿಯಲ್ಲಿ ಮೃತಪಟ್ಟ ಸುರೇಶ ಅಂಗಡಿ ಮೃತದೇಹವನ್ನು ಬೆಳಗಾವಿಗೆ ತರಲಿಲ್ಲ. ಇದಕ್ಕೆ ಶೆಟ್ಟರ್‌ ಮನಸ್ಸು ಮಾಡಲಿಲ್ಲ’ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಮಗೂ ಅಂಗಡಿಯವರ ಮೃತದೇಹ ಬೆಳಗಾವಿಗೆ ತರುವ ಆಸೆಯಿತ್ತು. ಇದಕ್ಕಾಗಿ ಪ್ರಯತ್ನಿಸಿದೆವು. ಆದರೆ, ಕಾನೂನಿನ ತೊಡಕು ಇತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT