ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಜೆಡಿಎಸ್‌ ನಿರ್ದೇಶನದಂತೆ ಐ.ಟಿ ದಾಳಿ: ಡಿ.ಕೆ. ಶಿವಕುಮಾರ್

ಕಡೆ ದಿನ ಡಿಕೆಶಿ ಅಬ್ಬರದ ಪ್ರಚಾರ; ಕಾಂಗ್ರೆಸ್‌ ಕಟ್ಟಿ ಹಾಕಲು ದಾಳಿ
Published 24 ಏಪ್ರಿಲ್ 2024, 20:51 IST
Last Updated 24 ಏಪ್ರಿಲ್ 2024, 20:51 IST
ಅಕ್ಷರ ಗಾತ್ರ

ಕನಕಪುರ (ರಾಮನಗರ): ಬಹಿರಂಗ ಪ್ರಚಾರದ ಕೊನೆಯ ದಿನವಾದ ಬುಧವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಸಹೋದರ ಡಿ.ಕೆ. ಸುರೇಶ್ ಪರ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು.

ಹುಟ್ಟೂರು ದೊಡ್ಡ ಆಲಹಳ್ಳಿ, ಶಿವನಹಳ್ಳಿ, ಸಾತನೂರು ವೃತ್ತದಲ್ಲಿ ಮಿಂಚಿನ ಪ್ರಚಾರ ನಡೆಸಿದರು. ಹೋದಲ್ಲೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಣ್ಣು ಹಾಗೂ ಹೂವಿನಿಂದ ತಯಾರಿಸಿದ ಬೃಹತ್ ಹೂವಿನಹಾರ ಹಾಕಿ ಸ್ವಾಗತ ನೀಡಿದರು. ಸಹೋದರನ ಅಭಿವೃದ್ಧಿ ಕಾರ್ಯ ಬಣ್ಣಿಸುತ್ತಲೇ ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.

‘ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಸೋಲುವ ಭಯದಿಂದಾಗಿ ಕೇಂದ್ರ ಸರ್ಕಾರ ನಮ್ಮ ಪಕ್ಷದ ಮುಖಂಡರ ಮನೆಗಳ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳನ್ನು ಬಿಟ್ಟು ದಾಳಿ ನಡೆಸುತ್ತಿದ್ದಾರೆ. ಯಾರ ಮನೆ ಮೇಲೆ ದಾಳಿ ನಡೆಸಬೇಕು ಎಂದು ಬಿಜೆಪಿ–ಜೆಡಿಎಸ್‌ ತಯಾರಿಸಿ ಕೊಟ್ಟ ಪಟ್ಟಿ ಹಿಡಿದು ಐ.ಟಿ ಅಧಿಕಾರಿಗಳು ಕಾಂಗ್ರೆಸ್‌ ಪಕ್ಷದ ಮುಖಂಡರ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಶಿವಕುಮಾರ್ ಆರೋಪ ಮಾಡಿದರು.

‘ಯಾವುದೇ ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕರೂ ಅದು ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ಹಣ ಎಂದು ಹೇಳಲು ಒತ್ತಡ ಹೇರಲಾಗುತ್ತಿದೆ. ಡಿ.ಕೆ. ಸುರೇಶ್ ಕಾರು ಚಾಲಕನ ಮನೆ ಮೇಲೆ ದಾಳಿ ಮಾಡಿದ ಐ.ಟಿ ಅಧಿಕಾರಿಗಳು ಆತನ ಹೆಂಡತಿಯ ತಲೆಗೂದಲು ಹಿಡಿದು ಎಳೆದಾಡಿದ್ದಾರೆ. ಮಕ್ಕಳ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಆದರೆ, ಎಲ್ಲೂ ಹಣ ಸಿಕ್ಕಿಲ್ಲ’ ಎಂದು ಆಕ್ರೋಶ ಹೊರ ಹಾಕಿದರು.

‘ಕಾಂಗ್ರೆಸ್‌ ಬ್ಲಾಕ್ ಅಧ್ಯಕ್ಷರ ಮನೆಗಳ ಮೇಲೆ ಐ.ಟಿ ದಾಳಿ ನಡೆಯುತ್ತಿದೆ. ನಮಗೆ ಕೆಟ್ಟ ಹೆಸರು ತರಬೇಕು ಮತ್ತು ಕಾರ್ಯಕರ್ತರು ಚುನಾವಣೆಯಲ್ಲಿ ಭಾಗವಹಿಸದಂತೆ ತಡೆಯಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ’ ಎಂದರು.

‘ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಯಾರೂ ಹಣ ಹಂಚುತ್ತಿಲ್ಲವೇ. ಅವರ ಮನೆಗಳ ಮೇಲೆ ಯಾಕೆ ದಾಳಿಯಾಗುತ್ತಿಲ್ಲ. ಅವರ ವಿಚಾರದಲ್ಲಿ ಐ.ಟಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರಾ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT