ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗೇರಿಗೆ ಅಭಿವೃದ್ಧಿ ಪಟ್ಟಿ ತೆರೆದಿಡುವ ಶಕ್ತಿ ಇದೆಯೇ?: ಭೀಮಣ್ಣ ನಾಯ್ಕ

Published 3 ಮೇ 2023, 12:14 IST
Last Updated 3 ಮೇ 2023, 12:14 IST
ಅಕ್ಷರ ಗಾತ್ರ

ಶಿರಸಿ: ‘ಆರು ಬಾರಿ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರಕ್ಕೆ ತಂದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಮತದಾರರ ಎದುರು ತೆರೆದಿಡುವ ಶಕ್ತಿ ಇದೆಯೆ?’ ಎಂದು ಶಿರಸಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪ್ರಶ್ನಿಸಿದರು. 

ನಗರದ ಸುಪ್ರಿಯಾ ಸಭಾಂಗಣದಲ್ಲಿ ಬುಧವಾರ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, '30 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಮೂಲಭೂತ ಸೌಲಭ್ಯ ಕಲ್ಪಿಸಲು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವಿಫಲರಾಗಿದ್ದಾರೆ ಎಂದು ಮತದಾರರೇ ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಜನಸಾಮಾನ್ಯರ ಬದುಕು ದುಸ್ಥರ ಆಗಿದೆ. ಬಿಜೆಪಿಗರು ಅರಣ್ಯ ಅತಿಕ್ರಮಣದಾರರ ಬಗ್ಗೆ ಧ್ವನಿ ಎತ್ತುತ್ತಿಲ್ಲ' ಎಂದರು.

'ಜಿಪಿಎಸ್ ಆದ ಜಾಗಗಳಿಗೆ ಹಂಗಾಮಿ ಹಕ್ಕುಪತ್ರವನ್ನಾದರೂ ಕೊಡಬಹುದಿತ್ತು. ಆದರೆ ಅಧಿಕಾರದಲ್ಲಿರುವವರಿಗೆ ಜನರ ಕಷ್ಟ ಗೊತ್ತಾಗುತ್ತಿಲ್ಲ. ಕ್ಷೇತ್ರದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ' ಎಂದರು.

'ಕ್ಷೇತ್ರಕ್ಕೆ ವಸತಿ ಯೋಜನೆಯಡಿ 5 ಸಾವಿರ ಮನೆ ಮಂಜೂರು ಮಾಡಿಸಿದ್ದೇನೆ ಎಂದು ಪ್ರಚಾರ ಪಡೆದ ಕಾಗೇರಿ, ಈಗ ಮನೆಗಳು ನಿಗಮಕ್ಕೆ ವಾಪಸ್ಸಾದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಬಿಜೆಪಿ ಅಧಿಕಾರಾವಧಿಯಲ್ಲಿ ಕಾಗೇರಿ ಅವರು ಎಷ್ಟು ಅಭಿವೃದ್ಧಿ ಕಾಮಗಾರಿ ತಂದಿದ್ದಾರೆ ಜನರೆದುರು ಬಹಿರಂಗ ಪಡಿಸಬೇಕು' ಎಂದರು. 

'ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಬಲಗೊಂಡಿದೆ. ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದೆ. ಹೀಗಾಗಿ ಮತದಾರರು ಈ ಬಾರಿ ಕಾಂಗ್ರೆಸ್ ಗೆ ಬೆಂಬಲ ನೀಡುವುದು ನಿಶ್ಚಿತ ಎಂದು ಹೇಳಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಪೂರಕ ಅಂಶಗಳನ್ನು ಒಳಗೊಂಡ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಂತೆ ಅನುಷ್ಠಾನ ನಿಶ್ಚಿತ' ಎಂದರು. 

ಪಕ್ಷದ ಪ್ರಮುಖರಾದ ದೀಪಕ ದೊಡ್ಡೂರು, ವೆಂಕಟೇಶ ಹೆಗಡೆ, ಜಗದೀಶ ಗೌಡ, ಎಸ್.ಕೆ. ಭಾಗವತ, ಶ್ರೀಪಾದ ಹೆಗಡೆ, ಜ್ಯೋತಿ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT