ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ವಿರುದ್ಧ ಸಿಡಿದೆದ್ದ ಡಿ.ವಿ. ಸದಾನಂದಗೌಡ

ಈಶ್ವರಪ್ಪ, ಮಾಧುಸ್ವಾಮಿ ಆಕ್ರೋಶದ ಬೆನ್ನಲ್ಲೇ ಸಂಸದರ ಗುಡುಗು
Published 21 ಮಾರ್ಚ್ 2024, 16:26 IST
Last Updated 21 ಮಾರ್ಚ್ 2024, 16:26 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮಾಜಿ ಸಚಿವರಾದ ಕೆ.ಎಸ್‌. ಈಶ್ವರಪ್ಪ, ಜೆ.ಸಿ. ಮಾಧುಸ್ವಾಮಿ ತಿರುಗಿ ಬಿದ್ದ ಬೆನ್ನಲ್ಲೇ, ಸಂಸದ ಡಿ.ವಿ. ಸದಾನಂದಗೌಡ ಕೂಡ ಧ್ವನಿ ಎತ್ತಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಟಿಕೆಟ್‌ ಸಿಗದೇ ಮುನಿಸಿಕೊಂಡಿದ್ದ ಸದಾನಂದಗೌಡ ಅವರು ಕಳೆದ ಒಂದು ವಾರದಿಂದ ತಮ್ಮ ಮುಂದಿನ ರಾಜಕೀಯ ನಡೆ ಬಹಿರಂಗಪಡಿಸುವುದಾಗಿ ಹೇಳಿಕೊಂಡು ಬಂದಿದ್ದರು. ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ತಮಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿದ್ದು ನಿಜ, ಆದರೆ ಕಾಂಗ್ರೆಸ್ ಸೇರುವುದಿಲ್ಲ. ಬಿಜೆಪಿಯಲ್ಲೇ ಇದ್ದು ಪಕ್ಷವನ್ನು ಶುದ್ಧೀಕರಣ ಮಾಡುವುದಾಗಿ ಹೇಳಿದರು.

‘ನಮ್ಮ ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ತಾನು– ತನ್ನ ಮಕ್ಕಳು, ಕುಟುಂಬ, ಚೇಲಾಗಳು ಮತ್ತು ತನ್ನ ಜಾತಿಯವರಿಗೆ ಮಾತ್ರ ಪಕ್ಷವು ಸೀಮಿತ ಎಂಬಂತಾಗಿದೆ. ಪಕ್ಷ ಕುಟುಂಬ ರಾಜಕಾರಣದಿಂದ ಹೊರಬರಬೇಕು’ ಎಂದು ಯಡಿಯೂರಪ್ಪ ಅವರ ಹೆಸರು ಉಲ್ಲೇಖಿಸದೇ ಗೌಡರು ಹರಿಹಾಯ್ದರು.

‘ನಾನು ಚುನಾವಣಾ ಕಣದಿಂದ ದೂರ ಸರಿಯುವ ಉದ್ದೇಶ ಹೊಂದಿದ್ದೆ. ಆದರೆ, ಒಬ್ಬರು ಮಾಜಿ ಮುಖ್ಯಮಂತ್ರಿ, ಇಬ್ಬರು ಮಾಜಿ ಡಿಸಿಎಂಗಳು ಮತ್ತು ಕೆಲವು ಮಾಜಿ ಮಂತ್ರಿಗಳು ಬಂದು ಚುನಾವಣೆಯಲ್ಲಿ ನಿಲ್ಲಲೇ ಬೇಕು ಎಂದು ಹೇಳಿದರು. ಆ ಬಳಿಕ ಟಿಕೆಟ್‌ ಬೇರೆಯವರಿಗೆ ಘೋಷಿಸಲಾಯಿತು. ನನಗೆ ಟಿಕೆಟ್‌ ಸಿಗದೇ ಇರುವುದಕ್ಕೆ ನೋವಾಗಿದೆ. ನನಗೆ ಅನ್ಯಾಯ ಮಾಡಿದವರು ಮತ್ತು ನೋವುಂಟು ಮಾಡಿದವರು ಮುಂದಿನ ದಿನಗಳಲ್ಲಿ ಪಶ್ಚಾತ್ತಾಪಪಡಲಿದ್ದಾರೆ’ ಎಂದರು.

‘ಮೋದಿಯವರು ದೇಶವೇ ನನ್ನ ಪರಿವಾರ ಎಂದಿದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಒಂದು ಕುಟುಂಬದ ಹಿಡಿತಕ್ಕೆ ಸಿಲುಕಿದೆ. ಒಂದು ಕುಟುಂಬ, ಒಂದು ಜಾತಿಯ ಪಕ್ಷ ಆಗಬಾರದು. ಇದು ಪಕ್ಷದ ಸಿದ್ಧಾಂತ ಮತ್ತು ಮೋದಿಯವರ ನಿಲುವಿಗೆ ವಿರುದ್ಧವಾದುದು. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ರಾಜ್ಯದಲ್ಲಿ ಜನ ಒಪ್ಪಿಕೊಳ್ಳುವ ಪಕ್ಷವಾಗಿ ಹೊರ ಹೊಮ್ಮಬೇಕು. ಶೇ 40 ಕಮಿಷನ್ ಆರೋಪ, ಸ್ವಜನಪಕ್ಷಪಾತ ಆರೋಪ ಬರಬಾರದು’ ಎಂದು ಸದಾನಂದಗೌಡ ಹೇಳಿದರು.

‘ನನಗೆ ದುಃಖವಾಗಿದೆ, ಬೇಸರವಾಗಿದೆ, ನೋವಾಗಿದೆ ಎನ್ನುವುದು ನಿಜ. ನನ್ನ ಕುರಿತ ಎಲ್ಲ ಟೀಕೆ ಟಿಪ್ಪಣಿಗಳನ್ನು ತಾಳ್ಮೆಯಿಂದ ಸಹಿಸಿದ್ದೇನೆ. ಹೀಗಾಗಿ ನೋವು ಕೊಡುವವರು ಇದ್ದೂ ಸತ್ತಂತೆ. ಟಿಕೆಟ್ ಕೈ ತಪ್ಪಿಸಿದವರು ಯಾರು ಎಂಬುದು ನನಗೂ ಗೊತ್ತು. ನಿಮಗೂ ಗೊತ್ತು’ ಎಂದರು.

‘ನನ್ನದು ಒಂದು ರೀತಿ ಸಿಂಗಲ್‌ ಮ್ಯಾನ್ ಆರ್ಮಿ ಇದ್ದಂತೆ ಎಂದುಕೊಳ್ಳಿ. ಪೂಜೆ ಮಾಡುವಾಗ ಶುದ್ಧೀಕರಣಕ್ಕೆ ನೆರವಾಗಲು ಹಲವರು ಇರಬಹುದು. ಆದರೆ, ಶುದ್ಧೀಕರಣ ಮಾಡಲು ಪುರೋಹಿತರು ಒಬ್ಬರೇ ಇರುತ್ತಾರೆ. ನಾನೂ ಸಮಾನ ಮನಸ್ಕರ ಜತೆ ಸೇರಿ ಶುದ್ಧೀಕರಣ ಕಾರ್ಯ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT