ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪರ ಧ್ವನಿ ಎತ್ತುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ: ಮಧು ಬಂಗಾರಪ್ಪ

Published 4 ಏಪ್ರಿಲ್ 2024, 16:04 IST
Last Updated 4 ಏಪ್ರಿಲ್ 2024, 16:04 IST
ಅಕ್ಷರ ಗಾತ್ರ

ಸಾಗರ: ರೈತರ ಪರ ಕೇಂದ್ರ ಮಟ್ಟದಲ್ಲಿ ಧ್ವನಿ ಎತ್ತುವ ಶಕ್ತಿ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಸಿರಿವಂತೆ ಗ್ರಾಮದ ತ್ರಿಪುರಾಂತಕೇಶ್ವರ ಸಭಾಭವನದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯಿತಿ ಮಟ್ಟದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಕಳೆದ ಎರಡು ಅವಧಿಯಲ್ಲಿ ಬಿಜೆಪಿ ಅಧಿಕಾರ ನಡೆಸಿದ್ದರೂ ರೈತರ ಒಳಿತಿಗಾಗಿ ಯಾವುದೆ ಕಾರ್ಯಕ್ರಮವನ್ನು ರೂಪಿಸಿಲ್ಲ. ರೈತರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸಿದೆ ಎಂದು ಅವರು ದೂರಿದರು.

2009ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಸೋತಿರುವುದು ಜಿಲ್ಲೆಯ ರಾಜಕಾರಣದ ಮಟ್ಟಿಗೆ ಕಪ್ಪುಚುಕ್ಕೆಯಾಗಿ ಉಳಿದಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ಈ ಕಳಂಕವನ್ನು ನಿವಾರಿಸಬೇಕಿದೆ ಎಂದು ಅವರು ಮನವಿ ಮಾಡಿದರು.

‘ಶಕ್ತಿಧಾಮ ಎಂಬ ಸಂಸ್ಥೆಯ ಮೂಲಕ 200ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಬದುಕನ್ನು ಕಟ್ಟಿಕೊಡುವ ಕೆಲಸದಲ್ಲಿ ನಿರತನಾಗಿದ್ದೇನೆ. ಇದೇ ಮಾದರಿಯ ಸಂಸ್ಥೆಯನ್ನು ಶಿವಮೊಗ್ಗ ಜಿಲ್ಲೆಯಲ್ಲೂ ತೆರೆಯುವ ಚಿಂತನೆ ಇದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ತಿಳಿಸಿದರು.

ಶೋಷಿತರ ಕಣ್ಣೀರು ಒರೆಸುವ ಕೆಲಸವನ್ನು ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈ ಯೋಜನೆಗಳ ಫಲಾನುಭವಿಗಳು ಲೋಕಸಭೆ ಚುನಾವಣೆಯಲ್ಲಿ ಖಂಡಿತವಾಗಿಯೂ ಕಾಂಗ್ರೆಸ್ ಕೈಹಿಡಿಯುತ್ತಾರೆ ಎಂಬ ನಂಬಿಕೆ ಅಚಲವಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಜನರ ಪ್ರೀತಿ, ವಿಶ್ವಾಸವೆ ಆಸ್ತಿಯಾಗಿತ್ತು. ಅದೇ ಗುಣ ಗೀತಾ ಶಿವರಾಜಕುಮಾರ್ ಅವರಲ್ಲೂ ಇದೆ. ಬಂಗಾರಪ್ಪ ಅವರ ಅಭಿಮಾನಿಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಕಾಂಗ್ರೆಸ್ ಗೆಲುವಿಗೆ ಅದು ಸಹಕಾರಿಯಾಗಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

‘ನನ್ನ ಪತ್ನಿ ಗೀತಾ ಅವರ ಮಾತುಗಳು ಮೃದುವಾಗಿದೆ. ಆದರೆ ಕಾರ್ಯವೈಖರಿಯಲ್ಲಿ ಅವರು ಯಾವತ್ತೂ ಹಿಂದೆ ಬಿದ್ದಿಲ್ಲ. ಬಂಗಾರಪ್ಪ ಅವರ ಸೇವಾ ಗುಣ ಗೀತಾ ಅವರಲ್ಲೂ ಅಂತರ್ಗತವಾಗಿದೆ’ ಎಂದು ನಟ ಶಿವರಾಜಕುಮಾರ್ ಹೇಳಿದರು.

ಪ್ರಮುಖರಾದ ಅನಿತಾಕುಮಾರಿ, ಅಶೋಕ್ ಬರದವಳ್ಳಿ, ಅಣ್ಣಪ್ಪ, ಮನೋಜ್, ರಮೇಶ್ ಬರದವಳ್ಳಿ, ಈಶ್ವರ್ ನಾಯ್ಕ್, ಹುಚ್ಚಪ್ಪ, ಸೂರ್ಯನಾರಾಯಣ, ಅಶೋಕ್ ಮರಗಿ, ಚಂದ್ರು, ಶಾಂತಕುಮಾರ್, ಪುಷ್ಪಾವತಿ, ಧರ್ಮಪ್ಪ ಕೆಲುವೆ, ರಾಮಪ್ಪ ಗಡೆಮನೆ, ಅಣ್ಣಪ್ಪ ಕಾನ್ಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT