ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಲ್‌ ಎಂಜಿನ್‌ ಹೋಗಲಿದೆ, ಜಿರೋ ಎಂಜಿನ್‌ ಆಗಲಿದೆ: ಮಲ್ಲಿಕಾರ್ಜುನ ಖರ್ಗೆ

ಬೀದರ್‌ ಕಾಂಗ್ರೆಸ್‌ ಪ್ರಚಾರ ಸಭೆ
Published 24 ಏಪ್ರಿಲ್ 2024, 18:01 IST
Last Updated 24 ಏಪ್ರಿಲ್ 2024, 18:01 IST
ಅಕ್ಷರ ಗಾತ್ರ

ಬೀದರ್‌: ‘ರಾಜ್ಯದಲ್ಲಿ ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರ ಹೋಗಿದೆ. ಲೋಕಸಭೆ ಚುನಾವಣೆ ನಂತರ ಜಿರೋ ಎಂಜಿನ್‌ ಆಗಲಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದರು.

ನಗರದ ಗಣೇಶ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಕಾಂಗ್ರೆಸ್‌ ಪ್ರಜಾಧ್ವನಿ–2 ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಮೋದಿಯವರ ಕೊಡುಗೆ ಏನೂ ಇಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಅದಕ್ಕೆ ನಯಾ ಪೈಸೆ ಪರಿಹಾರ ಕೊಡಲಿಲ್ಲ. ಕೊನೆಗೆ ನ್ಯಾಯಾಲಯಕ್ಕೆ ಹೋಗಬೇಕಾಯಿತು. ನ್ಯಾಯಾಲಯ ಸೂಚಿಸಿದರೂ ಪರಿಹಾರ ಯಾವಾಗ ಬರುತ್ತೋ ಗೊತ್ತಿಲ್ಲ ಎಂದರು.

ರಾಜ್ಯಕ್ಕೆ ₹18,172 ಕೋಟಿ ಬರ ಪರಿಹಾರ ಬರಬೇಕು. ಎಲ್ಲರನ್ನೂ ಸಮಾನರಾಗಿ ನೋಡುತ್ತೇನೆ ಎಂದು ಮೋದಿ ಹೇಳುತ್ತಾರೆ. ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್‌ನ 27 ಸಂಸದರಿದ್ದಾರೆ. ಆದರೆ, ಅವರು ರಾಜ್ಯಕ್ಕೆ ಏನೂ ಮಾಡಲಿಲ್ಲ ಎಂದು ಹೇಳಿದರು.

ಮೋದಿ ಸರ್ವಾಧಿಕಾರಿ. ಪ್ರಜಾಪ್ರಭುತ್ವದಲ್ಲಿ ಅವರಿಗೆ ನಂಬಿಕೆ ಇಲ್ಲ. ಸಿಬಿಐ, ಇಡಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದವರನ್ನು ಹೆದರಿಸಿ ಅವರ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನವರು ಭ್ರಷ್ಟರು ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಅವರನ್ನು ಹೆದರಿಸಿ ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನವರು ಭ್ರಷ್ಟರಾದರೆ ಅವರನ್ನು ಜೈಲಿಗೆ ಹಾಕಲಿ ಎಂದು ಸವಾಲು ಹಾಕಿದರು.

1989ರಲ್ಲಿ ರಾಜೀವ ಗಾಂಧಿ ಅವರ ಹತ್ಯೆ ನಂತರ ಅವರ ಕುಟುಂಬದ ಯಾರು ಪ್ರಧಾನಿ, ಸಿಎಂ , ಮಂತ್ರಿ ಆಗಿಲ್ಲ. ಆದರೆ, ಆ ಪರಿವಾರದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಮೋದಿಯವರಿಗೆ ರಾಹುಲ್‌ ಗಾಂಧಿಯವರನ್ನು ಕಂಡರೆ ಭಯ. ಅವರ ಕನಸಿನಲ್ಲಿ ರಾಹುಲ್‌ ಗಾಂಧಿ ಬರುತ್ತಿದ್ದಾರೆ. ಅವರಿಗೆ ಹೆದರುತ್ತಿದ್ದಾರೆ ಎಂದರು.

ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತು ಮುಸ್ಲಿಂರಿಗೆ ಹಂಚುತ್ತಾರೆ ಎಂದು ಮೋದಿ ಹೇಳಿದ್ದಾರೆ. ಇದು ಮೂರ್ಖತನದ ಮಾತು. ಜನರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಹಿಂದೆ ಭಾರತ–ಚೀನಾ ಯುದ್ಧ ನಡೆದಾಗ ಇಂದಿರಾ ಗಾಂಧಿಯವರು ಅವರ ಚಿನ್ನಾಭರಣಗಳನ್ನು ದೇಶಕ್ಕೆ ಕೊಟ್ಟಿದ್ದರು. ಅವರ ಮನೆಯನ್ನು ಕಾಂಗ್ರೆಸ್‌ಗೆ ಕೊಟ್ಟಿದ್ದರು. ಆದರೆ, ಈಗ ಬಿಜೆಪಿ, ಆರ್‌ಎಸ್‌ಎಸ್‌ನವರು ಐಷಾರಾಮಿ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಅವರಿಗೆ ಎಲ್ಲಿಂದ ಅಷ್ಟೊಂದು ಹಣ ಬಂದಿದೆ. ದೇಶದಲ್ಲಿ 17 ಸೈನಿಕ ಶಾಲೆಗಳನ್ನು ಆರ್‌ಎಸ್‌ಎಸ್‌ನವರಿಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ದೇಶದ ಪಾಲಿಗೆ ಇದು ಮಹತ್ವದ ಚುನಾವಣೆ. ಅದರಲ್ಲೂ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿಯಂತಹ ಮತೀಯ ಶಕ್ತಿಗಳು ಅಧಿಕಾರದಿಂದ ತೊಲಗುವ ಅಗತ್ಯವಿದೆ. ಹತ್ತು ವರ್ಷ ಮೋದಿಯವರ ಆಡಳಿತ ನೋಡಿದ್ದೀರಿ. ರಾಜ್ಯದಲ್ಲಿ ನಮ್ಮ ಪಕ್ಷದ ಕೆಲಸ ನೋಡಿದ್ದೀರಿ. ಯಾರಿಗೆ ಅಧಿಕಾರ ಕೊಡಬೇಕು ಎನ್ನುವುದನ್ನು ನಿರ್ಧರಿಸಿ ಎಂದು ಹೇಳಿದರು.

‘ಗಲ್ಲಿಯಿಂದ ದಿಲ್ಲಿವರೆಗೆ ಮೋದಿ’
‘ದೇಶದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟಕ್ಕೆ ಬಹುಮತ ಸಿಗಲಿದೆ ಎಂದು ಗೊತ್ತಾದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಗಲ್ಲಿಯಿಂದ ದಿಲ್ಲಿವರೆಗೆ ಓಡಾಡುತ್ತಿದ್ದಾರೆ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಮುಸ್ಲಿಂ ಲೀಗ್‌ ಜೊತೆ ಬಿಜೆಪಿ ಮೈತ್ರಿ’

‘ಬಿಜೆಪಿ ಈ ಹಿಂದೆ ಜನಸಂಘವಾಗಿತ್ತು. ಮುಸ್ಲಿಂ ಲೀಗ ಜೊತೆಗೆ ಸೇರಿಕೊಂಡು ಕೋಲ್ಕತ್ತದಲ್ಲಿ ಮೇಯರ್‌ ಎಂಎಲ್‌ಎ ಮಾಡಿ ಅಧಿಕಾರಕ್ಕೇರಿದ್ದರು. ಮುಸ್ಲಿಂರನ್ನು ಮೊದಲು ಆಲಿಂಗಿಸಿಕೊಂಡಿದ್ದವರು ಬಿಜೆಪಿಯವರು’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಮುಸ್ಲಿಂ ಲೀಗ್‌ನಂತಾಗಿದೆ ಎಂದು ಮೋದಿ ಹೇಳಿದ್ದಾರೆ. ನಮ್ಮ ಪಕ್ಷದ ಪ್ರಣಾಳಿಕೆ ಸಮಿತಿಯಲ್ಲಿ ಸಲ್ಮಾನ್‌ ಖುರ್ಷಿದ್‌ ಒಬ್ಬರನ್ನು ಹೊರತುಪಡಿಸಿದರೆ ಎಲ್ಲರೂ ಹಿಂದೂಗಳೇ ಇದ್ದಾರೆ. ಎಲ್ಲ ಜಾತಿ ಜನಾಂಗದವರು ಸೇರಿಕೊಂಡು ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ. ಹೀಗಿರುವಾಗ ನಮ್ಮ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ ಪ್ರಣಾಳಿಕೆಯೆಂದು ಗೇಲಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

‘ಮೋದಿ ಸುಳ್ಳಿನ ಸರದಾರ’

‘ನರೇಂದ್ರ ಮೋದಿ ಸುಳ್ಳಿನ ಸರದಾರ. ಆದರೆ ಮೋದಿ ಆರ್‌ಎಸ್‌ಎಸ್‌ ಬಿಜೆಪಿಯವರು ಸತ್ಯ ಹರಿಶ್ಚಂದ್ರನ ಅಪ್ಪನಂತೆ ಮಾತನಾಡುತ್ತಾರೆ. ಇವರು ಹೇಳುವುದೆಲ್ಲ ಸುಳ್ಳು. ಆದರೆ ಸತ್ಯದಂತೆ ಹೇಳುತ್ತಾರೆ’ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ವಿದೇಶದಿಂದ ಕಪ್ಪು ಹಣ ತರಲಿಲ್ಲ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಅವರ ಬೆಳೆಗಳಿಗೆ ಬೆಂಬಲ ಬೆಲೆ ಕೊಡಲಿಲ್ಲ. ಕಾಂಗ್ರೆಸ್‌ ಕಾಲದಲ್ಲಿ ಕಟ್ಟಿದ ಸಂಸ್ಥೆಗಳನ್ನೆಲ್ಲ ಮಾರಾಟ ಮಾಡುತ್ತಿರುವುದೇ ಇವರ ಸಾಧನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT