ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯಕ್ಕೆ ಸಿಗದ ಪ್ರಾತಿನಿಧ್ಯ: ಮುನಿಸು ತಣಿಸಲು ಯತ್ನ

ಪಂಚಮಸಾಲಿ ಗುರುಪೀಠದ ವಚನಾನಂದಶ್ರೀ ಭೇಟಿ ಮಾಡಿದ ಕೇಂದ್ರದ ನಾಯಕರು
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭಾ ಚುನಾವಣೆಯ ಟಿಕೆಟ್‌ ಹಂಚಿಕೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂಬ ಕಾರಣದಿಂದ ಅಸಮಾಧಾನಗೊಂಡಿರುವ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರ ಮನವೊಲಿಸಲು ಬಿಜೆಪಿ ಕೇಂದ್ರ ನಾಯಕರು ಮುಂದಾಗಿದ್ದಾರೆ.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಅಗತ್ಯ ಸಂಖ್ಯೆಯ ಟಿಕೆಟ್‌ ನೀಡದ ಕಾರಣ ಸ್ವಾಮೀಜಿ ಮುನಿಸಿಕೊಂಡಿದ್ದು, ಇದರಿಂದ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಬಿಜೆಪಿಯ ಪ್ರಮುಖ ನಾಯಕರೊಬ್ಬರ ಸೂಚನೆಯ ಮೇರೆಗೆ ಕೇಂದ್ರದ ಮುಖಂಡರೊಬ್ಬರು ಬುಧವಾರ ವಚನಾನಂದ ಸ್ವಾಮೀಜಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಇದನ್ನು ಸ್ವಾಮೀಜಿ ಖಚಿತಪಡಿಸಿದ್ದಾರೆ.

ಬಿಜೆಪಿಯು ಪಂಚಮಸಾಲಿ ಸಮುದಾಯವನ್ನು ಮತ ಬ್ಯಾಂಕ್‌ ಆಗಿ ಬಳಸಿಕೊಳ್ಳುತ್ತಿದೆ. ಸಮುದಾಯಕ್ಕೆ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಸ್ವಾಮೀಜಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿಯ ಅಭ್ಯರ್ಥಿಗಳು ಮಠಕ್ಕೆ ಬರುವುದನ್ನು ನಿರ್ಬಂಧಿಸಿದ್ದಾರೆ. ಇದು ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂದು ರಾಜ್ಯ ನಾಯಕರು ಈ ಮೊದಲೇ ಸ್ವಾಮೀಜಿ ಅವರ ಮನವೊಲಿಸುವ ಯತ್ನ ನಡೆಸಿದ್ದರು. ಅದು ಸಫಲ ಆಗದ್ದರಿಂದ ಇದೀಗ ಪಕ್ಷದ ವರಿಷ್ಠರು ಮತ್ತೊಬ್ಬ ಮುಖಂಡರ ಮೂಲಕ ಸ್ವಾಮೀಜಿ ಜೊತೆ ಚರ್ಚಿಸಿ ಮನವೊಲಿಸಲು ಯತ್ನಿಸಿದ್ದಾರೆ.

‘ದಶಕಗಳಿಂದ ಪಂಚಮಸಾಲಿ ಸಮುದಾಯ ಬೆಂಬಲ ನೀಡಿದ್ದರಿಂದ ರಾಜ್ಯದಲ್ಲಿ ಬಿಜೆಪಿ ನೆಲೆಯೂರಿದೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆಯಲು, ಎರಡು ಬಾರಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಮುದಾಯವೇ ಕಾರಣ. ಆದರೂ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ಅಧಿಕಾರಕ್ಕೆ ಮಾತ್ರ ನಾವು ಬೇಕಾ?’ ಎಂದೂ ಸ್ವಾಮೀಜಿ ಚರ್ಚೆಯ ವೇಳೆ ಪ್ರಶ್ನಿಸಿದರು ಎಂದು ತಿಳಿದುಬಂದಿದೆ.

‘‌ಸಮುದಾಯದವರನ್ನು ಮುಖ್ಯಮಂತ್ರಿ ವಿಧಾನಸಭೆ ಅಧ್ಯಕ್ಷ, ಪರಿಷತ್‌ ಸಭಾಧ್ಯಕ್ಷ ಸೇರಿದಂತೆ ಯಾವುದೇ ಸ್ಥಾನಕ್ಕೆ ಪರಿಗಣಿಸಲಿಲ್ಲ. ವಿರೋಧ ಪಕ್ಷದ ನಾಯಕ‌ ಸ್ಥಾನವನ್ನೂ ನೀಡಲಿಲ್ಲ. ಕಡೆ ಪಕ್ಷ ಕೋರ್‌ ಕಮಿಟಿಯಲ್ಲೂ ಸ್ಥಾನ ನೀಡಲಿಲ್ಲ. ಕೇವಲ ಮತ ಬ್ಯಾಂಕ್‌ ಆಗಿ ನೋಡಲಾಗುತ್ತಿದೆ’ ಎಂದು ಸ್ವಾಮೀಜಿ ಕೇಳಿದರು ಎನ್ನಲಾಗಿದೆ.

‘ಸಬ್‌ ಕಾ ವಿಕಾಸ್‌ ಸಬ್‌ ಕಾ ಸಾಥ್‌ ಎನ್ನುವ ಬಿಜೆಪಿಯು, ಪ್ರಮುಖ ಸಮುದಾಯವನ್ನು ಕಡೆಗಣಿಸಿದೆ. ಸಮುದಾಯಕ್ಕೆ ಒಂದೇ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ರಾಜ್ಯದ 17 ಕ್ಷೇತ್ರಗಳಲ್ಲಿ ಸಮುದಾಯ ಪ್ರಬಲವಾಗಿದೆ. ಶೇ 10ರಷ್ಟು ಇರುವ ಲಿಂಗಾಯತದ ಇತರೆ ಸಮುದಾಯದವರಿಗೆ ನಾಲ್ಕೈದು ಕಡೆ ಟಿಕೆಟ್‌ ನೀಡಲಾಗಿದೆ. ಹಾಗಾದರೆ ಸಾಮಾಜಿಕ ನ್ಯಾಯದ ಬಗ್ಗೆ ಹೇಗೆ ಮಾತನಾಡುತ್ತಾರೆ. ಅದಕ್ಕೆ ಸಮುದಾಯದಲ್ಲಿ ಆಕ್ರೋಶ ಇದೆ. ಅನೇಕರು ನ್ಯಾಯ ಕೇಳುತ್ತಿದ್ದಾರೆ’ ಎಂದು ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮುದಾಯದಲ್ಲಿ ಜಾಗೃತಿ

‘ಪಂಚಮಸಾಲಿ ಸಮುದಾಯಕ್ಕೆ ಆದ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಈಗಾಗಲೇ ನಾಲ್ಕಾರು ಜಿಲ್ಲೆಗಳಲ್ಲಿ ಸಭೆ ನಡೆಸಿದ್ದು ಉಳಿದ ಜಿಲ್ಲೆಗಳ ಸಭೆ ಮಾಡಿ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಬಳಿಕ ಚರ್ಚೆ ಮಾಡಿ ನಿರ್ಧಾರ ಘೋಷಿಸುತ್ತೇವೆ’ ಎಂದು ಸ್ವಾಮೀಜಿ ಹೇಳಿದರು. ‘ಸಮುದಾಯದವರು ಸಂಸತ್‌ಗೆ ಹೋಗಬಾರದಾ ಎಂಬ ಪ್ರಶ್ನೆ ಎತ್ತಿದ್ದೆವು. ಇದರಿಂದ ಹಲವರು ಮನವೊಲಿಸುವ ಯತ್ನ ಮಾಡುತ್ತಿದ್ದಾರೆ. ಹಲವು ಕೇಂದ್ರ ನಾಯಕರು ನಿರಂತರವಾಗಿ ಸಂಪರ್ಕ ಮಾಡುತ್ತಿದ್ದಾರೆ. ಅದಕ್ಕೆ ಉದಾಸೀನವೇ ಮದ್ದು ಎಂದು ಸುಮ್ಮನಿದ್ದೇವೆ. ಚುನಾವಣೆ ನಂತರ ನಮ್ಮ ನಿರ್ಧಾರ ಹೇಳುವುದಾಗಿ ತಿಳಿಸಿದ್ದೇವೆ’ ಎಂದು ಸ್ವಾಮೀಜಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT