ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ಲೋಕಸಭೆ | ‘ಮೋದಿ ಜಪ’, ‘ಕೈ ಗ್ಯಾರಂಟಿ’ ಮಧ್ಯೆ ನುಗ್ಗಿದ ‘ರೈಲು’

ಚುನಾವಣಾ ಕಣದಲ್ಲಿ ಮತಬ್ಯಾಂಕ್‌ ಗಟ್ಟಿಗೊಳಿಸಿಕೊಳ್ಳಲು ‘ರೈಲು’ ರಾಜಕೀಯ
Published 14 ಏಪ್ರಿಲ್ 2024, 6:04 IST
Last Updated 14 ಏಪ್ರಿಲ್ 2024, 6:04 IST
ಅಕ್ಷರ ಗಾತ್ರ

ಕಲಬುರಗಿ: ಲೋಕಸಭಾ ಚುನಾವಣೆ ಪ್ರಚಾರದ ಕಾವು ರಣ ಬಿಸಿಲಿನ ಧಗೆಯನ್ನೇ ಮಂಕಾಗುವಂತೆ ತಾರಕಕ್ಕೇರುತ್ತಿದೆ. ಚುನಾವಣಾ ಕಣದಲ್ಲಿ ಬಿಜೆಪಿಗರ ‘ಮೋದಿ ನಾಮಬಲ’ದ ಜಪ ಹಾಗೂ ಕಾಂಗ್ರೆಸ್ಸಿಗರ ‘ಪಂಚ ಗ್ಯಾರಂಟಿ’ಗಳ ಅಸ್ತ್ರದ ನಡುವೆಯೂ ‘ರೈಲು’ ರಾಜಕೀಯ ಜಟಾಪಟಿ ಜೋರಾಗಿದೆ.

ಜಿಲ್ಲೆಯಲ್ಲಿ ನಾಲ್ಕು ದಿಕ್ಕುಗಳಿಗೆ ಹಬ್ಬಿದ 237 ಕಿ.ಮೀ. ರೈಲ್ವೆ ಜಾಲವು ಉತ್ತರ ಮತ್ತು ದಕ್ಷಿಣ ಭಾರತದ ಮೆಟ್ರೊ ನಗರಗಳನ್ನು ಹಳಿಗಳಿಂದ ಬೆಸೆದಿದೆ. ಕಲಬುರಗಿಯು ದೆಹಲಿ–ಬೆಂಗಳೂರು, ಚೆನ್ನೈ–ಮುಂಬೈ, ಮುಂಬೈ–ಹೈದರಾಬಾದ್‌ನಂತಹ ಮಹಾನಗರಗಳ ರೈಲುಗಳು ಹಾದು ಹೋಗುವ ಪ್ರಮುಖ ಸಿಟಿಯಾಗಿದೆ.

ಬೃಹತ್ ಸಿಮೆಂಟ್, ಸಕ್ಕರೆ ಕಾರ್ಖಾನೆಗಳು, ಉದ್ಯಮಗಳು, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಫಾರ್ಮಸಿ, ಪ್ಯಾರಾ ಮೆಡಿಕಲ್ ಕಾಲೇಜುಗಳು ರೈಲ್ವೆ ಸಾರಿಗೆಗೆ ಪೂರಕವಾಗಿವೆ. ಹೀಗಾಗಿ, ‘ಕಲಬುರಗಿ ರೈಲ್ವೆ ವಿಭಾಗ ಕಚೇರಿ’ ಸ್ಥಾಪನೆ, ಯಾದಗಿರಿಯ ‘ರೈಲ್ವೆ ಬೋಗಿ ಕಾರ್ಖಾನೆ’, ನಿಲ್ದಾಣಗಳ ‘ಮೂಲಸೌಕರ್ಯ’ ಹಾಗೂ ಕಲಬುರಗಿಯಿಂದ ‘ನೇರ ರೈಲು’ ಸಂಚಾರವನ್ನೇ ಪ್ರಧಾನವಾಗಿ ಇರಿಸಿಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಪ್ರಚಾರಕ್ಕೆ ಇಳಿಯುತ್ತಿವೆ. ಮತಫಸಲು ತೆಗೆಯಲು ಪ್ರಚಾರದ ‘ಅಸ್ತ್ರ’ವನ್ನಾಗಿ ಮಾಡಿಕೊಂಡಿವೆ.

2014ರಲ್ಲಿ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಘೋಷಿಸಿ, ಆದೇಶ ಹೊರಡಿಸಿದ್ದ ಕಲಬುರಗಿ ವಿಭಾಗ ಕಚೇರಿ ಸ್ಥಾಪನೆಯು ಕೇಂದ್ರ ಬಿಂದುವಾಗಿದೆ. ‘ನಾವು ಘೋಷಿಸಿದ್ದ ವಿಭಾಗ ಕಚೇರಿಗೆ ಬಿಜೆಪಿಗರು ಒಂದು ಬುಟ್ಟಿ ಮಣ್ಣು ಹಾಕಲಿಲ್ಲ. ಬಜೆಟ್‌ನಲ್ಲಿ ₹ 1,000 ಕೊಡುವ ಬದಲು ನಮ್ಮನ್ನು ಕೇಳಿದರೆ, ನಾವೇ ₹ 1 ಲಕ್ಷ ಕೊಡುತ್ತಿದ್ದೆವು’ ಎಂದು ಕಾಂಗ್ರೆಸ್ಸಿಗರು ಬಿಜೆಪಿಗರನ್ನು ಕಿಚಾಯಿಸುತ್ತಿದ್ದಾರೆ. ಈ ಮೂಲಕ ವಿಭಾಗೀಯ ಕಚೇರಿ ಚರ್ಚೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದು ತಮ್ಮ ಮತ ಬ್ಯಾಂಕ್‌ ಗಟ್ಟಿಗೊಳಿಸಿಕೊಳ್ಳಲು ಹವಣಿಸುತ್ತಿದ್ದಾರೆ.

‘ಮೋದಿ ಸರ್ಕಾರ ಯಾದಗಿರಿಯ ರೈಲ್ವೆ ಬೋಗಿ ಕಾರ್ಖಾನೆಗೆ ಬೇಕೆಂತಲೇ ನಿರ್ಲಕ್ಷ್ಯ ವಹಿಸಿದೆ. 10 ವರ್ಷವಾದರೂ ವಾಡಿ–ಗದಗ ರೈಲು ಮಾರ್ಗ ಪೂರ್ಣಗೊಳಿಸಲಿಲ್ಲ. ಜಿಲ್ಲೆಯ ನಿಲ್ದಾಣಗಳನ್ನು ಅನ್ಯ ವಲಯಗಳಿಗೆ ಹರಿದು ಹಂಚಿ ಹೋಗುವಂತೆ ಮಾಡಿದ್ದಾರೆ. ಈಗ ವಿಭಾಗೀಯ ಕಚೇರಿ ಕೇಳಿದರೆ ಎಲ್ಲಿಂದ ಕೊಡುತ್ತಾರೆ’ ಎಂದು ಮತದಾರರ ಮುಂದೆ ‘ಕೈ’ ನಾಯಕರು ಪ್ರಶ್ನಿಸುತ್ತಿದ್ದಾರೆ.

ಕಾಂಗ್ರೆಸ್ಸಿಗರಿಗೆ ತಿರುಗೇಟು ಎಂಬಂತೆ, ‘ಚುನಾವಣೆಯ ಹೊಸ್ತಿಲಲ್ಲಿ ಪೂರ್ವ ತಯಾರಿ ಇಲ್ಲದೆಯೇ ವಿಭಾಗೀಯ ಕಚೇರಿ ಘೋಷಿಸಿದ್ದರಿಂದ ಕಾರ್ಯರೂಪಕ್ಕೆ ಬರಲಿಲ್ಲ. ಕಚೇರಿ ಸ್ಥಾಪನೆಯ ‘ಪ್ರಯತ್ನ’ ನಡೆಯುತ್ತಿದೆ. ಖರ್ಗೆ ಅವರು ರೈಲ್ವೆ ಸಚಿವರಾಗಿದ್ದರೂ ಕಲಬುರಗಿಯಿಂದ ನೇರವಾಗಿ ಒಂದು ರೈಲು ಓಡಿಸಲಿಲ್ಲ. ನಿಲ್ದಾಣಗಳ ಅಭಿವೃದ್ಧಿಯೂ ಮಾಡಲಿಲ್ಲ. ನಾವು, ಅಮೃತ ಭಾರತ ನಿಲ್ದಾಣ ಯೋಜನೆಯ ನಾಲ್ಕು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುತ್ತಿದ್ದೇವೆ. ಕಲಬುರಗಿಯಿಂದ ಬೆಂಗಳೂರಿಗೆ ‘ವಂದೇ ಭಾರತ್’ ಮತ್ತು ವಾರದ ವಿಶೇಷ ರೈಲು ಬಿಟ್ಟು ಸೈ ಎನಿಸಿಕೊಂಡಿದ್ದೇವೆ’ ಎಂದು ‘ಕಮಲ’ ನಾಯಕರು ತಮ್ಮ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ.

ಘೋಷಣೆಯಾದ ವಿಭಾಗೀಯ ಕಚೇರಿ ದಶಕಗಳು ಕಳೆದರೂ ಜಾರಿಯಾಗದೆ, ಸೋಲಾಪುರ ವಿಭಾಗದವರ ದಿವ್ಯ ನಿರ್ಲಕ್ಷ್ಯದಿಂದ ಕಲಬುರಗಿ ನಿಲ್ದಾಣಗಳು ಹೊರಬರಲು ಆಗುತ್ತಿಲ್ಲ. ಯಾವೊಬ್ಬ ನಾಯಕರೂ ಕೈಜಾರಿ ಹೋದ ರೈಲ್ವೆ ಯೋಜನೆಗಳನ್ನು ಮತ್ತೆ ತಂದುಕೊಡುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳುವ ಧೈರ್ಯ ಮಾಡುತ್ತಿಲ್ಲ. ಕಾಯ್ದಿರಿಸಿದ ಸೀಟ್‌ಗಳು ವೇಟಿಂಗ್ ಲಿಸ್ಟ್‌ನಿಂದ ಇನ್ನೂ ಮುಕ್ತವಾಗಿಲ್ಲ. ಸರ್ಕಾರದ ಅವಧಿ ಮುಗಿಯುವ ಅಂತಿಮ ಗಳಿಗೆಯಲ್ಲಿ ಬಂದ ‘ವಂದೇ ಭಾರತ್’ ರೈಲು ಬಡವರಿಗೆ ಎಟುಕುತ್ತಿಲ್ಲ. ಕಲಬುರಗಿ– ಬೆಂಗಳೂರು ವಾರದ ವಿಶೇಷ ರೈಲು ನಿತ್ಯ ಓಡುವಂತೆ ಆಗಲಿ ಎಂಬುದು ಸ್ಥಳೀಯರ ಒತ್ತಾಸೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸುನೀಲ ಕುಲಕರ್ಣಿ
ಸುನೀಲ ಕುಲಕರ್ಣಿ
ಚುನಾವಣೆಯಲ್ಲಿ ರೈಲ್ವೆ ಸೌಕರ್ಯದ ಚರ್ಚೆ ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ. ಎರಡೂ ಪಕ್ಷಗಳು ವಿಭಾಗೀಯ ಕಚೇರಿ ಸ್ಥಾಪನೆಯನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಲಿ
ಸುನೀಲ್ ಕುಲಕರ್ಣಿ ಹೈದರಾಬಾದ್ ಕರ್ನಾಟಕ ರೈಲ್ವೆ ಗ್ರಾಹಕರ ವೇದಿಕೆ ಅಧ್ಯಕ್ಷ
ರೈಲ್ವೆ ವಿಭಾಗ ಕಚೇರಿ ಕಥೆ ಏನಾಗಿದೆ?
ಕಲಬುರಗಿ ರೈಲ್ವೆ ವಿಭಾಗವನ್ನು ರಚಿಸುವ ಯೋಜನೆಯನ್ನು ರೈಲ್ವೆ ಸಚಿವಾಲಯವು ಆರ್ಥಿಕ ಪರಿಣಾಮಗಳ ದೃಷ್ಟಿಯಿಂದ ಕೈ ಬಿಟ್ಟಿದ್ದಾಗಿ ಸಚಿವ ಎಂ.ಬಿ. ಪಾಟೀಲ ಅವರೇ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ. 2013–14ನೇ ಸಾಲಿನ ಕೇಂದ್ರ ರೈಲ್ವೆ ಮುಂಗಡ ಪತ್ರದಲ್ಲಿ ಕಲಬುರಗಿ ರೈಲ್ವೆ ವಿಭಾಗವನ್ನು ರಚಿಸಿ ಘೋಷಿಸಲಾಗಿತ್ತು. ಅದರ ಅನುಸಾರ ರಾಜ್ಯ ಸರ್ಕಾರವು 37 ಎಕರೆ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿತ್ತು. ಆ ನಂತರದಲ್ಲಿ ಯೋಜನೆ ಜಾರಿಯಾಗಲಿಲ್ಲ. ಆರ್ಥಿಕ ಪರಿಣಾಮಗಳ ದೃಷ್ಟಿಯಿಂದ ಯೋಜನೆಯನ್ನು ಕೈಬಿಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿತ್ತು. ರೈಲ್ವೆ ಇಲಾಖೆಯು ಈ ಯೋಜನೆಯ ವಿಸ್ತೃತ ವರದಿಯನ್ನು ರಾಜ್ಯ ಸರ್ಕಾರಕ್ಕೂ ಸಲ್ಲಿಸಿರಲಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT