ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಲೋಕಸಭಾ | ಕಮಲ ಕಟ್ಟಿಹಾಕಲು ಕೈಗೆ ಒಕ್ಕಟ್ಟು ಅಗತ್ಯ

ಬಿಜೆಪಿಗೆ ಕಾರ್ಯಕರ್ತರ ಬಲ: ಕಾಂಗ್ರೆಸ್‌ಗೆ ನಾಯಕರ ತಲೆನೋವು
ತೀರ್ಥಕುಮಾರ ಬೆಳಕೋಟಾ
Published 14 ಏಪ್ರಿಲ್ 2024, 6:28 IST
Last Updated 14 ಏಪ್ರಿಲ್ 2024, 6:28 IST
ಅಕ್ಷರ ಗಾತ್ರ

ಕಮಲಾಪುರ: ಲೋಕಸಭೆ ಚುನಾವಣೆ ತಾಲ್ಲೂಕಿನಲ್ಲೂ ರಂಗೇರುತ್ತಿದೆ. ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ 19,570 ಮತಗಳನ್ನು ಹೆಚ್ಚಿಗೆ ಪಡೆದಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕಮಲಾಪುರ, ಸೊಂತ, ನರೋಣಾ, ಅವರಾದ ಸರ್ಕಲ್‌ನಲ್ಲಿ ಬಿಜೆಪಿಗೆ ಸುಮಾರು 17 ಸಾವಿರ ಮತಗಳ ಮುನ್ನಡೆ ಸಿಕ್ಕಿದೆ. ಇದು ಕಾಂಗ್ರೆಸ್‌ಗೆ ಬಹುದೊಡ್ಡ ಹಿನ್ನಡೆಯಾಗಿದ್ದು, ಕಾಂಗ್ರೆಸ್‌ ನಾಯಕರ ವೈಮನಸ್ಸು, ಸ್ವಯಂ ಪ್ರತಿಷ್ಠೆ, ಭಿನ್ನಾಭಿಪ್ರಾಯಗಳು ಕಾರಣ ಎಂದು ಆರೋಪಿಸಲಾಗುತ್ತಿದೆ. ಈ ಬಾರಿ ಕಮಲಪಡೆಯನ್ನು ಕಟ್ಟಿ ಹಾಕಲು ಕೈ ನಾಯಕರ ಒಗ್ಗಟ್ಟು ಅಗತ್ಯ. ಇದನ್ನು ನಿರ್ವಹಿಸಲು ಪ್ರಭಾವಿ ಮುಖಂಡರನ್ನು ನೇಮಿಸುವುದು ಅವಶ್ಯಕ ಎನ್ನುತ್ತಿದ್ದಾರೆ ಕಾರ್ಯಕರ್ತರು.

ಬಿಜೆಪಿಯಲ್ಲಿ ನಾಯಕರಿಗಿಂತ ಕಾರ್ಯಕರ್ತ ಪಡೆ ಹೆಚ್ಚಿದೆ. ಶಾಸಕ ಬಸವರಾಜ ಮತ್ತಿಮಡು ಪ್ರತಿ ಗ್ರಾಮ, ಬೂತ್‌ನಲ್ಲಿ ನಾಲ್ಕೈದು ಜನ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ರೇವುನಾಯಕರ ಸ್ವಜಾತಿಯ ಮತಗಳನ್ನು ಮತ್ತಿಮಡು ಪಡಯುವಲ್ಲಿ ಈ ತಂತ್ರವೇ ಯಶಸ್ವಿಯಾಗಿದೆ.

ಗ್ರಾಮೀಣ ಮತಕ್ಷೇತ್ರದ ಬಹುತೇಕ ಪ್ರತಿಷ್ಠಿತ ನಾಯಕರು ಕಾಂಗ್ರೆಸ್‌ನಲ್ಲಿಯೇ ಇದ್ದಾರೆ. ಆದರೆ ಸಮನ್ವಯದ ಕೊರತೆಯಿದೆ. ತಮಗೆ ಸೂಕ್ತ ಗೌರವ ಕೊಟ್ಟಿಲ್ಲ ಎಂಬ ಕಾರಣಕ್ಕಾಗಿಯೇ ಚುನಾವಣೆ ಕೊನೆ ಹಂತದಲ್ಲಿ ಕೈ ಚೆಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ದಿಕ್ಕು ತೋಚದ ಕಾರ್ಯಕರ್ತರು ದಿಕ್ಕಾಪಾಲಾಗುತ್ತಿದ್ದಾರೆ.

ಈ ಬಾರಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಎರಡೂ ಪಕ್ಷದ ನಾಯಕರು, ಕಾರ್ಯಕರ್ತರು ಕಸರತ್ತು ನಡೆಸುತ್ತಿದ್ದಾರೆ. ಮೋದಿ ಮಂತ್ರ, ಹಿಂದುತ್ವ, ರಾಮಮಂದಿರ ಮುಂದಿಟ್ಟಿಕೊಂಡು ಬಿಜೆಪಿ ಕಾರ್ಯಕರ್ತರು ಡಾ.ಉಮೇಶ ಜಾಧವ ಪರ ಪ್ರಚಾರಕ್ಕಿಳಿಯುತ್ತಿದ್ದಾರೆ. ‘ಜಾಧವ್ ನಮಗೆ ಮುಖ್ಯವಲ್ಲ; ನಾವೇನಿದ್ದರೂ ಮೋದಿ ಮುಖ ನೋಡಿ ಮತ ಹಾಕುತ್ತೇವೆ’ ಎಂಬುದು ಬಿಜೆಪಿ ಸಾಂಪ್ರದಾಯಿಕ ಮತದಾರರ ಮಾತಾಗಿದೆ.

ರಾಧಾಕೃಷ್ಣ ದೊಡ್ಡಮನಿ
ರಾಧಾಕೃಷ್ಣ ದೊಡ್ಡಮನಿ

‘ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ, ಸಂಸದ ಉಮೇಶ ಜಾಧವ ಕೊಡುಗೆ ಶೂನ್ಯ, ಜನ ಬೇಸತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಅಭಿವೃದ್ಧಿ ಕಾರ್ಯಗಳು ಕಣ್ಣ ಮುಂದಿವೆ. ಗ್ಯಾರಂಟಿ ಯೋಜನೆ, 371 (ಜೆ), ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗುವ ಸಾಧ್ಯತೆ ಇವೆಲ್ಲದಕ್ಕೂ ಮಿಗಿಲಾಗಿ ರಾಧಾಕೃಷ್ಣ ಅವರ ವ್ಯಕ್ತಿತ್ವ ಮತದಾರರನ್ನು ಸೆಳೆಯುತ್ತಿದೆ ಎನ್ನುತ್ತಾರೆ’ ಕೈ ಕಾರ್ಯಕರ್ತರು.

ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ಪ್ರಚಾರದಲ್ಲಿ ಮುಂದಿದೆ. ಅಭ್ಯರ್ಥಿ ಘೋಷಣೆ ಬಳಿಕ ಜಿಲ್ಲೆಗೆ ಆಗಮಿಸುತ್ತಿದ್ದ ರಾಧಾಕೃಷ್ಣ ಅವರಿಗೆ ಅದ್ಧೂರಿ ಸ್ವಾಗತದ ಜೊತೆಗೆ ಒಂದು ಬಾರಿ ಚುನಾವಣಾ ಪ್ರಚಾರ ಸಭೆ ಸಹ ನಡೆಸಲಾಗಿದೆ. ಈ ಮೂಲಕ ತನ್ನ ಕಾರ್ಯಕರ್ತರನ್ನು ಹುರಿದುಂಬಿಸಿದ್ದು ಚುನಾವಣೆ ಉತ್ಸಾಹ ಹೆಚ್ಚಿಸಿದ್ದಾರೆ. ಬಿಜೆಪಿಲ್ಲಿ ಈ ಉತ್ಸಾಹ, ಉತ್ಸುಕತೆ ಕಂಡುಬರುತ್ತಿಲ್ಲ.

‘ಕಮಲಾಪುರ ಹೇಗಿದ್ದರೂ ಬಿಜೆಪಿ ಭದ್ರಕೋಟೆ ಇದೆ. ತಾಂಡಾಗಳು ಹೆಚ್ಚಿವೆ. ಈ ಭಾಗದಿಂದ ಬಿಜೆಪಿಗೆ ಮುನ್ನಡೆಯಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿರುವ ಉಮೇಶ ಜಾಧವ ಈ ಕಡೆ ಅಷ್ಟೊಂದು ಒತ್ತುಕೊಡುತ್ತಿಲ್ಲ’ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಡಾ. ಉಮೇಶ್ ಜಾಧವ
ಡಾ. ಉಮೇಶ್ ಜಾಧವ
ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಬಲಿಷ್ಠಗೊಂಡಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತದಾರರನ್ನು ಸೆಳೆಯುತ್ತಿವೆ. ಕಾರ್ಯಕರ್ತರೇ ಬಿಜೆಪಿ ಬೆನ್ನೆಲುಬಾಗಿದ್ದು ಬಿಜೆಪಿ ಗೆಲುವು ಖಚಿತ
ಬಸವರಾಜ ಮತ್ತಿಮಡು ಶಾಸಕ
ವೈಜನಾಥ ತಡಕಲ್‌
ವೈಜನಾಥ ತಡಕಲ್‌
ಕಳೆದ ಚುನಾವಣೆಯಿಂದ ಪಾಠ ಕಲಿತಿದ್ದು ಈ ಬಾರಿ ಒಮ್ಮತ ಮೂಡಲಿದೆ. ಮೋದಿ ಜಾಧವ್‌ ಕೊಡುಗೆ ಶೂನ್ಯ ಜನ ಬೇಸತ್ತಿದ್ದಾರೆ. ರಾಧಾಕೃಷ್ಣ ಅವರ ವ್ಯಕ್ತಿತ್ವ ಪ್ರಭಾವ ಬೀರುತ್ತಿದೆ. ಕಾಂಗ್ರೆಸ್ ಗೆಲುವು ನಿಶ್ಚಿತ
ವೈಜನಾಥ ತಡಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT