ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ 2024 | ಸಿಎಂ ತಂತ್ರ: ‘ಮೈತ್ರಿ’ಗೆ ಹೆಚ್ಚಿದ ಸವಾಲು!

ಮೂರು ದಿನ ಪ್ರವಾಸ; ಹಲವು ಸೂಚನೆ, ಸಂದೇಶ
Published 4 ಏಪ್ರಿಲ್ 2024, 5:18 IST
Last Updated 4 ಏಪ್ರಿಲ್ 2024, 5:18 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೂಡುತ್ತಿರುವ ತಂತ್ರಗಳು ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಹೆಚ್ಚಿನ ಸವಾಲನ್ನು ತಂದೊಡ್ಡುತ್ತಿವೆ.

ತವರು ಜಿಲ್ಲೆಯನ್ನು ಹಂಚಿಕೊಂಡಿರುವ ಈ ಕ್ಷೇತ್ರಗಳನ್ನು ತೀವ್ರ ಗಂಭೀರವಾಗಿ ಪರಿಗಣಿಸಿರುವ ಅವರು, ಪದೇ ಪದೇ ಇಲ್ಲಿಗೆ ಬಂದು ಕಾರ್ಯಕರ್ತರಿಗೆ ಟಾಸ್ಕ್‌ ನೀಡುತ್ತಿದ್ದಾರೆ. ‘ಲೀಡ್ ತಂದುಕೊಡಬೇಕು’ ಎಂದು ಪಕ್ಷದ ಶಾಸಕರಿಗೆ ಗುರಿ ನೀಡಿ, ‘ಇದು ನನ್ನ ಸ್ವಾಭಿಮಾನದ ಪ್ರಶ್ನೆ, ಗೆಲ್ಲಿಸುವ ಮೂಲಕ ನನಗೆ ಶಕ್ತಿ ತುಂಬಬೇಕು’ ಎಂಬ ಮನವಿಯನ್ನೂ ಮಾಡಿಕೊಂಡಿದ್ದಾರೆ. ಇದರೊಂದಿಗೆ, ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಸಂದೇಶವನ್ನು ಅವರು ರವಾನಿಸಿದ್ದಾರೆ.

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂಬ ಭಾವನಾತ್ಮಕ ಮಾತುಗಳನ್ನಾಡುವ ಮೂಲಕ ಅಭಿಮಾನಿಗಳು, ಅನುಯಾಯಿಗಳು ಹಾಗೂ ಪಕ್ಷದ ಕಾರ್ಯಕರ್ತರಿಂದ ‘ಗೆಲುವಿನ ಕೊಡುಗೆ’ಯನ್ನು ನಿರೀಕ್ಷಿಸಿದ್ದಾರೆ.

ಲೀಡ್ ಗುರಿ:

ವಿಧಾನಸಭಾ ಕ್ಷೇತ್ರವಾರು ಸಭೆ ನಡೆಸಿರುವ ಅವರು, ಎಷ್ಟೆಷ್ಟು ಲೀಡ್‌ ತಂದುಕೊಡುತ್ತೀರೆಂದು ಅಲ್ಲಿನ ಶಾಸಕರು, ಪಕ್ಷದ ಶಾಸಕರಿಲ್ಲದ ಕಡೆಗಳಲ್ಲಿ ಮಾಜಿ ಶಾಸಕರು ಅಥವಾ ಪರಾಜಿತ ಅಭ್ಯರ್ಥಿಗಳಿಂದ ‘ಲೆಕ್ಕ’ ಪಡೆದಿದ್ದಾರೆ. ಇದನ್ನು ತಲುಪಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಮಾರ್ಗದರ್ಶನ ಮಾಡಿದ್ದಾರೆ.

ಪಕ್ಷ ಸೇರ್ಪಡೆಗೆ ಬಯಸುವವರನ್ನು ಕೂಡಲೇ ಬರಮಾಡಿಕೊಳ್ಳುವಂತೆಯೂ ನಿರ್ದೇಶನ ನೀಡಿದ್ದಾರೆ. ಸಮಾನ ಮನಸ್ಕರ ಸಭೆಗಳನ್ನು ಹೆಚ್ಚು ನಡೆಸಬೇಕು. ಮತಗಟ್ಟೆ ಮಟ್ಟದಲ್ಲಿ ಪ್ರಚಾರ ಚುರುಕುಗೊಳಿಸಬೇಕು, ಸಂಘ–ಸಂಸ್ಥೆಗಳ ನೆರವನ್ನು ಪಡೆದುಕೊಳ್ಳಬೇಕು. ಸ್ತ್ರೀಶಕ್ತಿ ಸಂಘಗಳ ಸಹಾಯವನ್ನು ಪಡೆದುಕೊಳ್ಳಬೇಕು ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಟಿಕೆಟ್‌ ನೀಡುತ್ತಿಲ್ಲ’ ಎಂಬ ಕೂಗು ಹಲವು ಚುನಾವಣೆಗಳಿಂದಲೂ ಇತ್ತು. ಇದಕ್ಕೆ ಬೆಲೆ ಕೊಡುವುದಕ್ಕಾಗಿ ಈ ಬಾರಿ ಸಾಮಾನ್ಯ ಕಾರ್ಯಕರ್ತರೂ ಆಗಿರುವ ಒಕ್ಕಲಿಗ ಸಮಾಜದ ಅಭ್ಯರ್ಥಿ ಲಕ್ಷ್ಮಣ ಅವರಿಗೆ ಟಿಕೆಟ್ ನೀಡಿದ್ದೇವೆ. ನಾವು ಒಕ್ಕಲಿಗ ವಿರೋಧಿಗಳಲ್ಲ ಎಂಬುದನ್ನು ಈ ಮೂಲಕ ನಿರೂಪಿಸುವ ಕೆಲಸ ಮಾಡಿದ್ದೇನೆ. ಇದೆಲ್ಲವನ್ನೂ ಆ ಸಮಾಜದವರಿಗೆ ಹೆಚ್ಚು ಹೆಚ್ಚು ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ’ ಎಂದು ಮುಖಂಡರು ಮಾಹಿತಿ ನೀಡಿದರು.

‘ಎಲ್ಲ ಜಾತಿ, ಧರ್ಮದವರಿಂದಲೂ ಮತ ಕೇಳಬೇಕು. ಯಾರನ್ನೂ ಕಡೆಗಣಿಸಬಾರದು. ಈಚೆಗೆ ಪಕ್ಷಕ್ಕೆ ಸೇರ್ಪಡೆಯಾಗಿರುವ ವಿವಿಧ ಪಕ್ಷಗಳ–ಕ್ಷೇತ್ರಗಳ ಮುಖಂಡರ ‘ಶಕ್ತಿ’ಯನ್ನು ಬೆಳೆಸಿಕೊಳ್ಳಬೇಕು. ಜನ ಬೆಂಬಲವನ್ನು ಮತವಾಗಿ ಪರಿಗಣಿಸಲು ಅಗತ್ಯವಾದ ಕಾರ್ಯತಂತ್ರವನ್ನು ಹಾಕಿಕೊಂಡು ಅನುಷ್ಠಾನಕ್ಕೆ ತರಬೇಕು’ ಎಂದು ಸಲಹೆ ನೀಡಿದ್ದಾರೆ.

ತಮ್ಮ ನಿವಾಸದಲ್ಲಿ ಹಿಂದುಳಿದ ಹಾಗೂ ಸಣ್ಣ ಸಮಾಜಗಳ ಮುಖಂಡರ ಸಭೆಯನ್ನೂ ನಡೆಸಿರುವ ಅವರು, ‘ನಿಮ್ಮ ಸಮಾಜಗಳ ಬೆಂಬಲ ಪಕ್ಷಕ್ಕೆ ಸಿಕ್ಕುವಂತೆ ನೋಡಿಕೊಳ್ಳಬೇಕು, ಪಕ್ಷಕ್ಕೆ ಮಾಡುವ ಕೆಲಸ ವ್ಯರ್ಥವಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂಬ ಅಭಯವನ್ನು ನೀಡಿದ್ದಾರೆ’ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ಗೆ ಆಘಾತ ನೀಡಿದ ‘ಹಳ್ಳಿಹಕ್ಕಿ’

ಇತ್ತೀಚೆಗೆ ಬಿಜೆಪಿಯಿಂದ ದೂರ ಉಳಿದು ಕಾಂಗ್ರೆಸ್‌ನವರೊಂದಿಗೆ ‘ಸಖ್ಯ’ ಬೆಳೆಸಿಕೊಂಡಿದ್ದ ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಅವರು ಬಿಜೆಪಿ ಅಭ್ಯರ್ಥಿಗೆ ಬೆಂಬಲದ ಮಾತುಗಳನ್ನು ಆಡಿರುವುದು ಕಾಂಗ್ರೆಸ್‌ಗೆ ಆಘಾತ ನೀಡಿದೆ! ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಪಕ್ಷವನ್ನು ಬೆಂಬಲಿಸಬಹುದು ಎಂದು ಕಾಂಗ್ರೆಸ್‌ನವರು ನಿರೀಕ್ಷಿಸಿದ್ದರು. ಆದರೆ ಅವರು ಲಕ್ಷ್ಮಣ ಅವರಿಗೆ ಟಿಕೆಟ್‌ ಘೋಷಣೆಯಾದ ನಂತರ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿರಲಿಲ್ಲ.

ಆಕಾಂಕ್ಷಿಗಳಿಗೆ ಗುರಿ...
ಆಕಾಂಕ್ಷಿಗಳಿಗೆ ಗುರಿ... ‘ಮುಂಬರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಮೇಲೆ ಕಣ್ಣಿಟ್ಟಿರುವವರು ಬಹಳ ಮಂದಿ ಇದ್ದಾರೆ. ಅವರಿಗೆ ಟಾರ್ಗೆಟ್ ಕೊಡಬೇಕು. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾಣಿಕೆ ನೀಡಬೇಕು ಎಂದು ಎರಡೂ ಕ್ಷೇತ್ರಗಳ ನಾಯಕರಿಗೆ ಸೂಚಿಸಿದ್ದಾರೆ’ ಎಂದು ಗೊತ್ತಾಗಿದೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಅವರು 15 ದಿನಗಳ ಅಂತರದಲ್ಲಿ ಒಟ್ಟು 6 ದಿನ ಜಿಲ್ಲಾ ಪ್ರವಾಸ ಕೈಗೊಂಡು ಹಲವು ತಂತ್ರಗಳನ್ನು ರೂಪಿಸಿದ್ದಾರೆ. ಅವರ ಸೂಚನೆಯ ಮೇರೆಗೆ ಬಿಜೆಪಿಯ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಈ ಮೂಲಕ ಶ್ರೀನಿವಾಸ ಪ್ರಸಾದ್ ಅವರ ಪರೋಕ್ಷ ಬೆಂಬಲ ಕಾಂಗ್ರೆಸ್‌ಗೆ ಸಿಗುತ್ತಿದೆ ಎಂದು ಬಿಂಬಿಸುವ ಪ್ರಯತ್ನವನ್ನು ಆ ಪಕ್ಷದ ನಾಯಕರು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT