ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಸಚಿವರಿಗೆ ‘ಕುಟುಂಬ’ ಗೆಲ್ಲಿಸುವ ಸವಾಲು

Published 23 ಮಾರ್ಚ್ 2024, 22:48 IST
Last Updated 23 ಮಾರ್ಚ್ 2024, 22:48 IST
ಅಕ್ಷರ ಗಾತ್ರ

ಬೆಂಗಳೂರು: ಪಟ್ಟು ಹಿಡಿದು ‘ಕುಟುಂಬ’ ಸದಸ್ಯರಿಗೆ ಲೋಕಸಭೆ ಚುನಾವಣೆಯ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಸಚಿವರಿಗೀಗ, ಅವರನ್ನು ಗೆಲ್ಲಿಸಿಕೊಳ್ಳಲೇಬೇಕಾದ ಸವಾಲು ಎದುರಾಗಿದೆ.

ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಕಂಡು ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ಗೆ, ಲೋಕಸಭೆ ಚುನಾವಣೆ ಪ್ರತಿಷ್ಠೆಯೂ ಆಗಿದೆ. 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಹೀಗಾಗಿ, ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದ್ದರೂ ಒಟ್ಟು 28 ಸ್ಥಾನಗಳ ಪೈಕಿ, ಎರಡೂ ಪಕ್ಷಗಳಿಗೆ ಗೆಲ್ಲಲು ಸಾಧ್ಯವಾಗಿದ್ದು ತಲಾ ಒಂದೊಂದು ಸ್ಥಾನ ಮಾತ್ರ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಬಿಟ್ಟರೆ, ಉಳಿದ 25 ಕ್ಷೇತ್ರಗಳಲ್ಲಿ ಕಮಲ ಅರಳಿತ್ತು.

ಆದರೆ, ‘ಅಧಿಕಾರ’ದ ಹಿಡಿತ, ‘ಗ್ಯಾರಂಟಿ’ ಯೋಜನೆಗಳ ಫಲದ ಪರಿಣಾಮ ಈ ಬಾರಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ– ತುಡಿತ ಕಾಂಗ್ರೆಸ್‌ ನಾಯಕರದ್ದು. ಈ ದೃಷ್ಟಿಯಿಂದ ಅಭ್ಯರ್ಥಿಗಳ ಆಯ್ಕೆ, ಚುನಾವಣೆ ನಿರ್ವಹಣೆಯ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೇ ಪಕ್ಷ ನೀಡಿತ್ತು. ಅಲ್ಲದೆ, ಈ ಲೆಕ್ಕಾಚಾರದಲ್ಲಿಯೇ ಕೆಲವು ಕ್ಷೇತ್ರಗಳಲ್ಲಿ ಹಾಲಿ ಸಚಿವರನ್ನೇ ಕಣಕ್ಕಿಳಿಸುವ ಮೂಲಕ, ಸರ್ಕಾರ–ಸಚಿವರ ಸಾಧನೆಯನ್ನು ಪರೀಕ್ಷೆಗೆ ಗುರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ವರಿಷ್ಠರು ಮನಸ್ಸು ಮಾಡಿದ್ದರು. ಸಚಿವರಿಗೆ ಈ ವಿಷಯವನ್ನು ಮನವರಿಕೆ ಮಾಡಲು ಯತ್ನಿಸಿದ್ದರು.

ಆದರೆ, ಈ ‘ಅಗ್ನಿ ಕುಂಡ’ದಲ್ಲಿ ತಮ್ಮನ್ನು ಪರೀಕ್ಷೆಗೆ ಒಡ್ಡಿಕೊಳ್ಳಲು ಸುತಾರಾಂ ತಯಾರಾಗದ ಸಚಿವರು, ಕ್ಷೇತ್ರಗಳಲ್ಲಿ ಸಾಕಷ್ಟು ವಿರೋಧದ ನಡುವೆಯೂ ತಮ್ಮ ಮಕ್ಕಳು, ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡುವಂತೆ ಒತ್ತಡ ಹೇರಿದ್ದರು. ಅನಿವಾರ್ಯವಾಗಿ ಸಚಿವರ ಬೇಡಿಕೆಗಳಿಗೂ ಮನ್ನಣೆ ನೀಡಿರುವ ಹೈಕಮಾಂಡ್, ಗೆಲ್ಲಿಸಿಕೊಂಡು ಬರಲೇಬೇಕೆಂಬ ಗುರಿಯನ್ನೂ ನೀಡಿದೆ. ಬೇಡಿಕೆ ಈಡೇರಿಸಿಕೊಂಡಿರುವ ಸಚಿವರಿಗೆ ಈಗ ‘ಮಾಡು ಇಲ್ಲವೇ ಮಡಿ’ ಎಂಬ ಪರಿಸ್ಥಿತಿ ಎದುರಾಗಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ ತಮ್ಮ ಮಗಳು ಸಂಯುಕ್ತಾ ಪಾಟೀಲರಿಗೆ ಶಿವಾನಂದ ಪಾಟೀಲರು ಟಿಕೆಟ್ ಕೊಡಿಸಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಸವನಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲರು, ಪಕ್ಕದ ಕ್ಷೇತ್ರವನ್ನು ಗಿಟ್ಟಿಸಿಕೊಂಡಿದ್ದಾರೆ. ಬಾಗಲಕೋಟೆಯಲ್ಲಿ ಮಾಜಿ ಸಂಸದ ಅಜಯ್‌ ಕುಮಾರ್ ಸರ್‌ನಾಯಕ್‌, ಮಾಜಿ ಶಾಸಕ ಆನಂದ ನ್ಯಾಮಗೌಡ ಅವರನ್ನು ಕಣಕ್ಕೆ ಇಳಿಸುವ ಇರಾದೆ, ಸಚಿವ ಎಂ.ಬಿ. ಪಾಟೀಲರಿಗೆ ಇತ್ತು. ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ, 2019ರಲ್ಲಿ ಸ್ಪರ್ಧಿಸಿ ಸೋತಿದ್ದ ವೀಣಾ ಕೂಡ ಆಕಾಂಕ್ಷಿಯಾಗಿದ್ದರು. ಹಾಗಿದ್ದರೂ ಸಂಯುಕ್ತಾಗೆ ಕ್ಷೇತ್ರವನ್ನು ದಕ್ಕಿಸಿಕೊಳ್ಳಲಾಗಿದೆ. ಗೆಲ್ಲಿಸುವ ಹೊಣೆ ಸಚಿವರ ಹೆಗಲೇರಿದೆ.

ಉಳಿದ ಕ್ಷೇತ್ರಗಳಲ್ಲಿ ಸಚಿವರು ಪಟ್ಟು ಹಾಕಿದ ಪರಿಣಾಮ 10 ಕ್ಷೇತ್ರಗಳು ಅವರ ಪುತ್ರ, ಪುತ್ರಿಯರ, ಕುಟುಂಬ ಸದಸ್ಯರ ಪಾಲಾಗಿವೆ. ಚಾಮರಾಜನಗರ ಕ್ಷೇತ್ರದಲ್ಲಿ ಸಚಿವ ಮಹದೇವಪ್ಪ ಅವರನ್ನೇ ಕಣಕ್ಕಿಳಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವರಿಷ್ಠರು ಉತ್ಸುಕರಾಗಿದ್ದಾರೆ. ತಮ್ಮ ಬದಲು ಪುತ್ರ ಸುನಿಲ್‌ ಬೋಸ್‌ಗೆ ಟಿಕೆಟ್‌ ಪಡೆಯಲು ಎಚ್‌.ಸಿ. ಮಹದೇವಪ್ಪ ಇನ್ನಿಲ್ಲದ ಕಸರತ್ತು ಮುಂದುವರಿಸಿದ್ದಾರೆ. ಕೋಲಾರದಲ್ಲಿ ಕೆ.ಎಚ್‌. ಮುನಿಯಪ್ಪ ತಮ್ಮ ಅಳಿಯನಿಗೆ ಟಿಕೆಟ್‌ ಪಡೆಯಲು ಜಿದ್ದಿಗೆ ಬಿದ್ದಿದ್ದಾರೆ. ಬಳ್ಳಾರಿ ಟಿಕೆಟ್‌ ಶಾಸಕ ಇ. ತುಕಾರಾಂ ಅವರಿಗೆ ಬಹುತೇಕ ಖಚಿತವಾಗಿದೆ.  

ಇನ್ನು ‘ಗ್ಯಾರಂಟಿ’ ಯೋಜನೆಗಳು ರಾಜ್ಯ ಸರ್ಕಾರವನ್ನು ಆರ್ಥಿಕವಾಗಿ ಕಟ್ಟಿ ಹಾಕಿವೆ. ಮತ್ತೊಂದೆಡೆ, ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿರುವುದರಿಂದ ರೈಲು ಟಿಕೆಟ್ ಖರೀದಿಸಲು; ₹2 ಖರ್ಚು ಮಾಡಲು ಸಾಧ್ಯವಿಲ್ಲದಂತಹ ಸ್ಥಿತಿಗೆ ನೂಕಿದೆ ಎಂದು ಕಾಂಗ್ರೆಸ್ ವರಿಷ್ಠರೇ ಹೇಳಿಕೊಂಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿಭಾಯಿಸುವುದು ಪಕ್ಷಕ್ಕೆ ಸಮಸ್ಯೆಯಾಗಲಿದೆ. ಸಚಿವರ ಕುಟುಂಬ ಸದಸ್ಯರನ್ನೇ ಅಭ್ಯರ್ಥಿ ಮಾಡಿದರೆ ‘ಬಂಡವಾಳ’ ಹೂಡಿ ಗೆಲ್ಲಿಸಿಕೊಂಡು ಬರುವ ಹೊಣೆಯನ್ನೂ ಅವರೇ ವಹಿಸಿಕೊಳ್ಳುತ್ತಾರೆಂಬ ವಿಶ್ವಾಸವೂ ಕಾಂಗ್ರೆಸ್‌ ನಾಯಕರದ್ದು. ಅದಕ್ಕೆ ಪೂರಕವಾಗಿ, ಎಲ್ಲವನ್ನೂ ಸುರಿದು ಇನ್ಯಾರನ್ನೊ ಗೆಲ್ಲಿಸುವ ಬದಲು ತಮ್ಮವರನ್ನೇ ಗೆಲ್ಲಿಸುವುದು ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಬಂದಿರುವ ಸಚಿವರು, ಕುಟುಂಬ ಸದಸ್ಯರಿಗೆ ಟಿಕೆಟ್‌ ಪಡೆಯುವಲ್ಲಿಯೂ ಗೆಲುವು ಕಂಡಿದ್ದಾರೆ. ಆದರೆ, ಈಗ ಅವರ ಮುಂದೆ ಗೆಲ್ಲಿಸಿಕೊಂಡು ಬರಲೇಬೇಕಾದ ದೊಡ್ಡ ಸವಾಲಿದೆ. ಗೆಲ್ಲಿಸಿಕೊಂಡು ಬಾರದಿದ್ದರೆ, ಸೋಲಿನ ‘ನೈತಿಕ’ ಹೊಣೆಯನ್ನು ಅವರೇ ಹೊರಬೇಕಾಗುತ್ತದೆ. ಅದಕ್ಕೆ ಯಾವ ಸಬೂಬು ಸರಿ ಹೋಗದು ಎಂಬ ಸಂದೇಶವೊಂದನ್ನು ಪಕ್ಷದ ವರಿಷ್ಠರು ಈಗಾಗಲೇ ಸಚಿವರಿಗೆ ರವಾನಿಸಿದ್ದಾರೆ.

ಸೋತರೆ ಮಂತ್ರಿಗಿರಿಗೆ ಕುತ್ತು?

ಕದನ ಕಲಿಗಳಾಗಿ ಅಖಾಡಕ್ಕಿಳಿದ ಮಕ್ಕಳು, ಕುಟುಂಬ ಸದಸ್ಯರು ಗೆದ್ದು ಲೋಕಸಭೆ ಪ್ರವೇಶಿಸಿದರೆ ಬಚಾವು; ಸೋತು ಮನೆ ಸೇರಿದರೆ ಅವರ ಸಚಿವ ಸ್ಥಾನಕ್ಕೆ ಕುತ್ತು ಬಂದರೂ ಅಚ್ಚರಿಯಿಲ್ಲ ಎಂಬ ಚರ್ಚೆ ಕಾಂಗ್ರೆಸ್‌ ಅಂಗಳದಲ್ಲಿ ಆರಂಭವಾಗಿದೆ.

ಲೋಕಸಭೆ ಚುನಾವಣೆ ‘ಫಲಿತಾಂಶ’ದ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ಒಂದಷ್ಟು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಈ ಚುನಾವಣೆಯಲ್ಲಿ ವರಿಷ್ಠರು ನೀಡಿದ ಹೊಣೆಯನ್ನು ನಿಭಾಯಿಸದವರು ಆಗ ವರಿಷ್ಠರ ಕಣ್ಣಿಗೆ ಬೀಳುವುದಂತೂ ಖಚಿತ. ‘ತಲೆದಂಡ’ದ ವಿಚಾರ ಮುಂಚೂಣಿಗೆ ಬಂದಾಗ ತಮ್ಮವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದವರು ಗುರಿ ಆಗಬಹುದು ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು.

ಕೊಂಡ ಹಾಯಬೇಕಿದೆ ಡಿಕೆ ಸಹೋದರರು

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಿಂದೆ ಗೆದ್ದಿದ್ದ, ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್‌ ಅವರನ್ನು ಗೆಲ್ಲಿಸಿಕೊಳ್ಳುವುದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೂ ಸವಾಲು. ಈ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿದಿವೆ. ಗ್ರಾಮಾಂತರದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಅಳಿಯ, ವೈದ್ಯ ಡಾ.ಸಿ.ಎನ್‌. ಮಂಜುನಾಥ್‌ ಬಿಜೆಪಿ ಹುರಿಯಾಳು. ಅತಿ ಹೆಚ್ಚು ಮತಗಳನ್ನು ಹೊಂದಿರುವ ಎರಡು ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಕೈಯಲ್ಲಿವೆ. ಒಕ್ಕಲಿಗರ ಸಮುದಾಯದ ನಾಯಕನಾಗಿ ಹೊರಹೊಮ್ಮುತ್ತಿರುವ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿಹಾಕಿ, ರಾಮನಗರಕ್ಕೆ ಸೀಮಿತಗೊಳಿಸುವ ಇರಾದೆ ದೇವೇಗೌಡರ ಕುಟುಂಬದ್ದಾಗಿದೆ. ಒಂದು ಉಪಚುನಾವಣೆ ಸೇರಿದಂತೆ ಮೂರು ಚುನಾವಣೆಗಳಲ್ಲಿ ಗೆದ್ದಷ್ಟು, ಸಲೀಸಿನ ದಾರಿ ಈಗಿನದಲ್ಲ. ಈ ಸವಾಲೆಂಬ ಕೊಂಡವನ್ನು ಡಿಕೆ ಸೋದರರು ಹಾಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT